• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • TamilNadu Plitics: ಚುನಾವಣೆಗೂ ಮುನ್ನವೇ ರಾಜಕೀಯ ತೊರೆದ ಉಚ್ಛಾಟಿತ ಎಡಿಎಂಕೆ ಮುಖ್ಯಸ್ಥೆ ವಿ.ಕೆ. ಶಶಿಕಲಾ

TamilNadu Plitics: ಚುನಾವಣೆಗೂ ಮುನ್ನವೇ ರಾಜಕೀಯ ತೊರೆದ ಉಚ್ಛಾಟಿತ ಎಡಿಎಂಕೆ ಮುಖ್ಯಸ್ಥೆ ವಿ.ಕೆ. ಶಶಿಕಲಾ

ವಿ.ಕೆ. ಶಶಿಕಲಾ

ವಿ.ಕೆ. ಶಶಿಕಲಾ

ಈ ತಿಂಗಳ ಆರಂಭದಲ್ಲಿ, 66 ರ ಹರೆಯದ ಶಶಿಕಲಾ ಅವರು ಚುನಾವಣೆಗೆ ಮುಂಚೆಯೇ ಆಡಳಿತ ಪಕ್ಷದಲ್ಲಿ ತಮ್ಮ ಸ್ಥಾನವನ್ನು ಪುನಃ ಪಡೆದುಕೊಳ್ಳಲು ಕಾನೂನು ಕ್ರಮ ಕೈಗೊಂಡಿದ್ದರು. ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಓ. ಪನ್ನೀರ್​ ಸೆಲ್ವಂ ವಿರುದ್ಧ ಚೆನ್ನೈ ನ್ಯಾಯಾಲಯದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿದರು.

ಮುಂದೆ ಓದಿ ...
  • Share this:

ಚೆನ್ನೈ (ಮಾರ್ಚ್​ 03); ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ 4 ವರ್ಷ ಶಿಕ್ಷೆಗೆ ಒಳಗಾಗಿ ಕಳೆದ ತಿಂಗಳು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದ, ಅಲ್ಲದೆ ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ತನ್ನ ಸ್ಥಾನಕ್ಕಾಗಿ ಹೋರಾಡುವ ನಿರೀಕ್ಷೆಯಲ್ಲಿದ್ದ ತಮಿಳುನಾಡಿನ ಆಡಳಿತಾರೂ AIADMK ಪಕ್ಷದ ಮಾಜಿ ಮುಖ್ಯಸ್ಥೆ ವಿ.ಕೆ. ಶಶಿಕಲಾ ಅವರು ರಾಜಕೀಯ ಮತ್ತು ಸಾರ್ವಜನಿಕ ಜೀವನವನ್ನು ತೊರೆಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಬುಧವಾರ ರಾತ್ರಿ ಬಿಡುಗಡೆಯಾದ ಮುದ್ರಿತ ಪತ್ರವೊಂದರಲ್ಲಿ, ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತರೂ ಆಗಿದ್ದ ಶಶಿಕಲಾ, "ಜಯಲಲಿತಾ ಬದುಕಿದ್ದಾಗಲೂ ನಾನು ಯಾವುದೇ ಅಧಿಕಾರ, ಸ್ಥಾನಮಾನದ ಮೇಲೆ ಆಸೆ-ಆಸಕ್ತಿ ಹೊಂದಿರಲಿಲ್ಲ. ಆಕೆ ಮೃತಪಟ್ಟ ನಂತರವೂ ನಾನು ಹಾಗೆ ಇರಲು ಬಯಸಿದ್ದೇನೆ. ಹೀಗಾಗಿ ನಾನು ರಾಜಕೀಯವನ್ನು ತೊರೆಯುತ್ತಿದ್ದೇನೆ. ಆದರೆ, ಜಯಲಲಿತಾ ಕಟ್ಟಿ ಬೆಳೆಸಿದ ಎಡಿಎಂಕೆ ಪಕ್ಷ ಚುನಾವಣೆಯಲ್ಲಿ ಗೆಲ್ಲಬೇಕು" ಎಂದು ತಿಳಿಸಿದ್ದಾರೆ.


ಅಲ್ಲದೆ ಪತ್ರದಲ್ಲಿ ಮುಂದುವರೆದು, "ಎಐಎಡಿಎಂಕೆ ಬೆಂಬಲಿಗರು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು, ಮುಂದಿನ ಚುನಾವಣೆಯಲ್ಲಿ  ಡಿಎಂಕೆ ಪಕ್ಷವನ್ನು ಮತ್ತೊಮ್ಮೆ ಸೋಲಿಸಬೇಕು. ಜಯಲಲಿತಾ ಹಾಕಿಕೊಟ್ಟ ಪರಂಪರೆಯನ್ನು ಕಾರ್ಯಕರ್ತರು ಮುಂದುವರೆಸಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ" ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.


ಈ ತಿಂಗಳ ಆರಂಭದಲ್ಲಿ, 66 ರ ಹರೆಯದ ಶಶಿಕಲಾ ಅವರು ಚುನಾವಣೆಗೆ ಮುಂಚೆಯೇ ಆಡಳಿತ ಪಕ್ಷದಲ್ಲಿ ತಮ್ಮ ಸ್ಥಾನವನ್ನು ಪುನಃ ಪಡೆದುಕೊಳ್ಳಲು ಕಾನೂನು ಕ್ರಮ ಕೈಗೊಂಡಿದ್ದರು. ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಓ. ಪನ್ನೀರ್​ ಸೆಲ್ವಂ ವಿರುದ್ಧ ಚೆನ್ನೈ ನ್ಯಾಯಾಲಯದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿದರು. ಎಐಎಡಿಎಂಕೆ ಉನ್ನತ ಹುದ್ದೆಗೆ ಹಕ್ಕು ಪಡೆಯಲು ಮುಂದಾಗಿದ್ದರು.


ಅಸಲಿಗೆ 2016 ರ ಡಿಸೆಂಬರ್‌ನಲ್ಲಿ ಜಯಲಲಿತಾ ಅವರ ಮರಣದ ನಂತರ ಶಶಿಕಲಾ ಅವರು ಪಕ್ಷದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಆದರೆ, ಭ್ರಷ್ಟಾಚಾರ ಆರೋಪದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದಾಗ ಅವರು ಅನಿವಾರ್ಯವಾಗಿ ಹುದ್ದೆಯನ್ನು ತ್ಯಜಿಸಿದ್ದರು.


ಆದರೆ, ಜೈಲಿಗೆ ತೆರಳುವ ಮೊದಲು, ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಆಯ್ಕೆ ಮಾಡಿದ್ದರು. ಆದರೆ ಕೊನೆಗೆ ಶಶಿಕಲಾ ಅವರ ಅನುಪಸ್ಥಿತಿಯಲ್ಲಿ ಅವರ ನಾಯಕತ್ವದ ವಿರುದ್ಧ ದಂಗೆ ಎದ್ದ ಸಿಎಂ ಪಳನಿಸ್ವಾಮಿ, ಪನ್ನೀರ್ ಸೆಲ್ವಂ ಜೊತೆ ಜೊತೆ ಹೊಂದಾಣಿಕೆ ಮಾಡಿಕೊಂಡರು. ಅಲ್ಲದೆ, ಅವರಿಬ್ಬರೂ ಒಂದಾಗಿ ಶಶಿಕಲಾ ಅವರನ್ನು ಪಕ್ಷದ ಅಧ್ಯಕ್ಷ ಹುದ್ದೆಯಿಂದ ಮಾತ್ರವಲ್ಲದೆ ಪಕ್ಷದಿಂದಲೇ ಉಚ್ಛಾಟಿಸಿದ್ದರು.


ಇದನ್ನೂ ಓದಿ: Siddaramaiah: ಮೈಸೂರು ಪಾಲಿಗೆ ಮೇಯರ್​ ಸ್ಥಾನ ವಿವಾದ; ಹೈಕಮಾಂಡ್​ನಿಂದ ಸಿದ್ದರಾಮಯ್ಯ ಮನವೊಲಿಕೆ ಯತ್ನ ಸಫಲ!


ವರ್ಚಸ್ವಿ ಮತ್ತು ಶಕ್ತಿಯುತ ನಾಯಕಿ ಜಯಲಲಿತಾ ಅವರ ಮರಣದ ನಂತರ ತನ್ನ ನಾಯಕತ್ವದ ನಿರ್ವಾತದಿಂದ ಹಿಂದೆಂದೂ ಚೇತರಿಸಿಕೊಳ್ಳದ ಪಕ್ಷದಲ್ಲಿ ಈ ತಿಂಗಳ ಆರಂಭದಲ್ಲೇ ಶಶಿಕಲಾ ಮತ್ತೆ ಪ್ರಕ್ಷುಬ್ಧತೆಯನ್ನು ಉಂಟುಮಾಡಿದ್ದರು. ಆದರೆ, ಮುಖ್ಯಮಂತ್ರಿ ಪಳನಿಸ್ವಾಮಿ ಕಳೆದ ಜನವರಿಯಲ್ಲಿ ನಡೆದ ಬಿಜೆಪಿ ನಾಯಕತ್ವದ ಸಭೆಯ ನಂತರ "ಶಶಿಕಲಾ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದರು.


ಹೀಗಾಗಿ ಚುನಾವಣೆಗೂ ಮುನ್ನವೇ ತಮಿಳುನಾಡಿನ ರಾಜಕೀಯ ರಂಗ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ಎಡಿಎಂಕೆ ಪಕ್ಷದ ಹಲವಾರು ನಾಯಕರು ಬಹಿರಂಗವಾಗಿ ವಿ.ಕೆ. ಶಶಿಕಲಾ ಅವರಿಗೆ ಬೆಂಬಲ ಸೂಚಿಸಿದ್ದರು. ಹೀಗಾಗಿ ಪಕ್ಷದ ಒಳಗೆ ಏನಾಗಲಿದೆ? ಶಶಿಕಲಾ ಹೊಸ ಪಕ್ಷ ಸ್ಥಾಪಿಸಲಿದ್ದಾರಾ? ಎಂಬ ಹಲವು ಪ್ರಶ್ನೆಗಳು ಉದ್ಭವಿಸಿದ್ದವು. ಆದರೆ, ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ಶಶಿಕಲಾ ದಿಢೀರ್ ರಾಜೀನಾಮೆ ನೀಡಿರುವುದು ತಮಿಳುನಾಡಿನಲ್ಲಿ ಹಲವರಿಗೆ ಆಘಾತ ನೀಡಿರುವುದಂತೂ ಸುಳ್ಳಲ್ಲ.

top videos
    First published: