2023ರ ಜಿ20 ಶೃಂಗಸಭೆಯ ಆತಿಥ್ಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಔಪಚಾರಿಕವಾಗಿ ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡೋ ಅವರಿಂದ ಬಾಲಿಯಲ್ಲಿ ಸ್ವೀಕರಿಸಿದ್ದಾರೆ. ಮೋದಿ ಈ ಸಂದರ್ಭದಲ್ಲಿ ಎಲ್ಲರನ್ನೂ ಒಳಗೊಂಡ ಮಹಾತ್ವಾಕಾಂಕ್ಷಿ ನಿರ್ಣಾಯಕ ಮತ್ತು ಕಾರ್ಯೋನ್ಮುಖವಾದ ಶೃಂಗಸಭೆಯಾಗಲಿದೆ ಎಂದು ಜಿ20 ನಾಯಕರ ಸಮ್ಮುಖದಲ್ಲಿ ಭರವಸೆ ನೀಡಿದ್ದರು. ಅದರಂತೆ ನಿನ್ನೆಯ ಒಂದು ಹೇಳಿಕೆಯಲ್ಲಿ ಜಿ20 ಸಭೆಯ ಎಲ್ಲಾ ಪ್ರಕ್ರಿಯೆಗಳಲ್ಲಿ ರಷ್ಯಾದ ಉಪಸ್ಥಿತಿಯನ್ನು ನಾವು ನೀರೀಕ್ಷಿಸುತ್ತೇವೆ ಎಂದು ಕೇಂದ್ರದಿಂದ ಹೇಳಿಕೆ ಬಂದಿದೆ.
G20 ಶೃಂಗಸಭೆಗೆ ಗೈರಾಗಿದ್ದ ಪುಟಿನ್
ಉಕ್ರೇನ್-ರಷ್ಯಾ ಯುದ್ಧ, ರಷ್ಯಾದ ಮೇಲೆ ಹೇರಿರುವ ನಿರ್ಬಂಧ ಈ ಎಲ್ಲಾ ಕಾರಣಗಳಿಂದಾಗಿ ವ್ಲಾಡಿಮಿರ್ ಪುಟಿನ್ ಬಾಲಿಯಲ್ಲಿ ನಡೆದ G20 ಶೃಂಗಸಭೆಯಲ್ಲಿ ಗೈರಾಗಿದ್ದರು. ಜಿ20 ಶೃಂಗಸಭೆಗಾಗಿ ಬಾಲಿಗೆ ಆಗಮಿಸಿದ್ದ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಸಹ ಹೃದಯ ಸಂಬಂಧಿ ಸಮಸ್ಯೆಯಿಂದ ರೆಸಾರ್ಟ್ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಬಗ್ಗೆ ವರದಿಯಾಗಿತ್ತು.
ಇದನ್ನೂ ಓದಿ: ಪಾಂಡಿಚೇರಿ ಸರ್ಕಾರ ಬೀಳಿಸಿದ ಬಿಜೆಪಿ ಕೆಲಸ ಮಹಾರಾಷ್ಟ್ರದಲ್ಲಿ ನಡೆಯುವುದಿಲ್ಲ; ಶಿವಸೇನೆ ಎಚ್ಚರಿಕೆ!
"ಜಿ20 ಸಭೆಯಲ್ಲಿ ರಷ್ಯಾದ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತೇವೆ"
ಒಟ್ಟಾರೆ ದೇಶದ ನಾಯಕರ ಮಹತ್ವದ ಸಭೆಯಲ್ಲಿ ರಷ್ಯಾದ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಹೀಗಾಗಿ ಉಕ್ರೇನ್ ಯುದ್ಧದ ಬಗ್ಗೆ ತನ್ನ ಸದಸ್ಯರ ನಡುವೆ ನಿರಂತರ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಭಾರತದ ಅಧ್ಯಕ್ಷೀಯ ಅವಧಿಯಲ್ಲಿ ಜಿ20 ಭಾಗವಾಗಿರುವ ರಷ್ಯಾವನ್ನು ಮುಂದಿನ ಕಾರ್ಯಕ್ರಮಗಳಲ್ಲಿ ನಿರೀಕ್ಷಿಸುವುದಾಗಿ ಭಾರತ ಗುರುವಾರ ಹೇಳಿದೆ.
"ರಷ್ಯಾ ಜಿ 20 ಸದಸ್ಯ ರಾಷ್ಟ್ರವಾಗಿದೆ ಮತ್ತು ಆದ್ದರಿಂದ ಅವರು ಈ ಪ್ರಕ್ರಿಯೆಗಳಲ್ಲಿ ಭಾಗವಹಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ಸಭೆಯಲ್ಲಿ ಒಮ್ಮತವನ್ನು ನಿರ್ಮಿಸುವ ಗುರಿ ಹೊಂದಿರುವ ಭಾರತ
G20 ಒಮ್ಮತದ ಪ್ರಮುಖ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ವಿಶ್ವದ 20 ದೊಡ್ಡ ಆರ್ಥಿಕತೆಗಳ ಗುಂಪಿನ ಅಧ್ಯಕ್ಷರಾಗಿ ಭಾರತದ ಪ್ರಯತ್ನಗಳು ಒಮ್ಮತವನ್ನು ನಿರ್ಮಿಸುವ ಗುರಿಯನ್ನು ಹೊಂದಿವೆ ಎಂದು ಬಾಗ್ಚಿ ಈ ಸಂದರ್ಭದಲ್ಲಿ ತಿಳಿಸಿದರು. ಕಳೆದ ತಿಂಗಳು ಬಾಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾರತ ತೆಗೆದುಕೊಂಡ ನಿಲುವು ಕೂಡ ಇದೇ ಆಗಿದೆ ಮತ್ತು ಈ ಹೇಳಿಕೆಗೆ ನಾವು ಬದ್ಧವಾಗಿರುತ್ತೇವೆ ಎಂದು ಬಾಗ್ಚಿ ಹೇಳಿದ್ದಾರೆ.
ಸಮಸ್ಯೆಗಳು, ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಬೇಕು
"ವಿಶ್ವದ ಸಮಸ್ಯೆಗಳು, ಅಭಿವೃದ್ಧಿ ಬಗ್ಗೆ ಎಲ್ಲರೂ ಒಂದೇ ಧ್ವನಿಯಲ್ಲಿ ಮಾತನಾಡುವ ಅಗತ್ಯವಿದೆ, ಒಗ್ಗೂಡುವ ಅಗತ್ಯವಿದೆ ಎಂದು ಹೇಳುವುದನ್ನು ಹೊರತುಪಡಿಸಿ ನಾನು ಏನನ್ನೂ ಹೇಳಲು ಸಾಧ್ಯವಿಲ್ಲ, ವಿಶೇಷವಾಗಿ ಪ್ರಪಂಚದ ಮೇಲೆ ಪರಿಣಾಮ ಬೀರುವ ಪ್ರಮುಖ ವಿಷಯಗಳ ಬಗ್ಗೆ. ಆಹಾರ, ಇಂಧನ ಮತ್ತು ರಸಗೊಬ್ಬರಗಳಂತಹ ಅಭಿವೃದ್ಧಿಶೀಲ ರಾಷ್ಟ್ರಗಳಾದ ಜಾಗತಿಕ ದಕ್ಷಿಣದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ನಾವು ಎಲ್ಲರೂ ಕೂತು ಚರ್ಚಿಸಿ ಗಮನ ಹರಿಸಬೇಕು” ಎಂದು ಅವರು ಹೇಳಿದರು.
"ರಷ್ಯಾದೊಂದಿಗಿನ ವ್ಯವಹಾರ ಸಂಬಂಧ ಹಾಗೇ ಇದೆ"
ಜಿ20 ಶೃಂಗಸಭೆಯಲ್ಲಿ ಕೂಡ ರಷ್ಯಾ ಮತ್ತು ಉಕ್ರೇನ್ ರಾಷ್ಟ್ರಗಳು ಪರಸ್ಪರ ಶಾಂತಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೇ ವಿನಃ ಯುದ್ಧವೊಂದೇ ಎಲ್ಲದಕ್ಕೂ ಪರಿಹಾರವಲ್ಲ ಎಂದು ಸಾರಿದ್ದವು. ಇದು ಯುದ್ಧದ ಸಮಯವಲ್ಲ ಎಂದು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ರಷ್ಯಾಗೆ ಹೇಳಿವೆ. ಈ ಎಲ್ಲಾ ಬೆಳವಣಿಗೆ ನಡುವೆ ರಷ್ಯಾ ಮೊಟ್ಟ ಮೊದಲ ಬಾರಿಗೆ ಭಾರತದ ಬಳಿ ಸಹಾಯ ಕೋರಿದೆ. ಕಾರು, ರೈಲು ಮತ್ತು ವಿಮಾನದ ಭಾಗಗಳು ಸೇರಿದಂತೆ ಮತ್ತು ಕಚ್ಚಾ ಸಾಮಗ್ರಿಗಳು ಸೇರಿದಂತೆ ತನಗೆ ಅಗತ್ಯವಿರುವ 500 ಕ್ಕೂ ಹೆಚ್ಚು ಉತ್ಪನ್ನಗಳ ಪಟ್ಟಿಯನ್ನು ಭಾರತಕ್ಕೆ ಕಳುಹಿಸಿದೆ. ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಬಾಗ್ಚಿ “ನಾವು ರಷ್ಯಾದೊಂದಿಗೆ ನಿಯಮಿತವಾಗಿ ವ್ಯಾಪಾರ ಸಂಬಂಧ ಹೊಂದಿದ್ದೇವೆ. ವ್ಯಾಪಾರವನ್ನು ಹೇಗೆ ಉಳಿಸಿಕೊಳ್ಳುವುದು ಮತ್ತು ವಿಸ್ತರಿಸುವುದು ಏಂಬುದರ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ, ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ" ಎಂದರು.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ನಾಯಕತ್ವದ ಬಿಕ್ಕಟ್ಟಿಲ್ಲ, ಕುರುಡಾಗಿ ಯಾರೂ ಗಾಂಧಿ ಕುಟುಂಬವನ್ನು ಬೆಂಬಲಿಸುತ್ತಿಲ್ಲ; ಸಲ್ಮಾನ್ ಖುರ್ಷಿದ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ