ಲಡಾಖ್ (ಜುಲೈ 03); ಚೀನಾ ಜೊತೆಗೆ ಗಡಿ ಹಂಚಿಕೊಂಡಿರುವ ಲಡಾಖಿನ ಎತ್ತರದ ಬೆಟ್ಟ ಪ್ರದೇಶವಾದ ನಿಮುವಿನಲ್ಲಿ ನಿಂತು ಚೀನಾಗೆ ಇಂದು ಬಲವಾದ ಸಂದೇಶ ನೀಡಿರುವ ಪ್ರಧಾನಿ ನರೇಂದ್ರ ಮೋದಿ, “ಜಗತ್ತಿನಲ್ಲಿ ವಿಸ್ತರಣಾವಾದಿಗಳ ಕಾಲ ಮುಗಿದಿದೆ. ಹೀಗಾಗಿ ವಿಸ್ತರಣಾವಾದಿಗಳು ತಮ್ಮ ಮಾರ್ಗವನ್ನು ಸರಿಪಡಿಸಿಕೊಳ್ಳಬೇಕು, ಇಲ್ಲವೇ ಸರ್ವನಾಶವಾಗುವುದನ್ನು ಕಲಿಯಬೇಕು” ಎಂದು ಎಚ್ಚರಿಸಿದ್ದಾರೆ.
ಜೂನ್.15ರಂದು ನಡೆದ ಭಾರತ-ಚೀನಾ ಗಡಿ ಸಂಘರ್ಷದಲ್ಲಿ ಭಾರತದ 20 ಸೈನಿಕರು ಸಾವಿಗೀಡಾಗಿದ್ದರು. ಈ ಘರ್ಷಣೆಯ ನಂತರ ಎರಡೂ ದೇಶಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಗಡಿಯಲ್ಲಿ ಯುದ್ಧದ ಭೀತಿ ಉಂಟಾಗಿದೆ. ಈ ಬೆಳವಣಿಗೆಯ ನಂತರ ಇಂದು ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಲಡಾಖ್ಗೆ ಧಿಡೀರ್ ಭೇಟಿ ನೀಡಿದ್ದಾರೆ.
ಈ ವೇಳೆ ಸೈನಿಕರನ್ನು ಉದ್ದೇಶಿಸಿ 26 ನಿಮಿಷಗಳ ಭಾಷಣ ಮಾಡಿರುವ ನರೇಂದ್ರ ಮೋದಿ, “ವಿಸ್ತರಣೆಯ ಯುಗ ಮುಗಿದಿದೆ. ಇದು ಪ್ರಗತಿಯ ಯುಗ. ಪ್ರಗತಿ ಸಾಧಿಸಿದರೆ ಮಾತ್ರ ಎಲ್ಲಾ ದೇಶಗಳಿಗೂ ಭವಿಷ್ಯ. ವಿಸ್ತರಣೆಯ ಯುಗದಲ್ಲಿ ಮಾನವೀಯತೆ ಸಾಕಷ್ಟು ಸಂಷಕ್ಟಗಳನ್ನು ಅನುಭವಿಸಿತ್ತು. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಏಕೆಂದರೆ ವಿಸ್ತರಣಾವಾದಿಗಳು ನಾಶವಾಗಿರುವುದಕ್ಕೆ ಇತಿಹಾಸದಲ್ಲಿ ಸಾಕಷ್ಟು ಪುರಾವೆಗಳಿವೆ” ಎಂದಿದ್ದಾರೆ.
ಭಾರತೀಯ ಸೈನಿಕರ ಧೈರ್ಯವನ್ನು ಸಾಟಿಯಿಲ್ಲದವರು ಎಂದು ಬಣ್ಣಿಸಿದ ಪ್ರಧಾನಿ ಮೋದಿ, “ಈ ಕಷ್ಟದ ಸಂದರ್ಭಗಳಲ್ಲಿ, ಸೈನಿಕರು ತಾಯ್ನಾಡಿನ ಗುರಾಣಿ. ನಿಮ್ಮ ಧೈರ್ಯ ಎಂಬುದು ನೀವೆಲ್ಲರೂ ನಿಂತಿರುವ ಎತ್ತರಕ್ಕಿಂತ ಹೆಚ್ಚಾಗಿದೆ. ನಿಮ್ಮ ತೋಳುಗಳು ನಿಮ್ಮನ್ನು ಸುತ್ತುವರೆದಿರುವ ಪರ್ವತಗಳಷ್ಟೇ ಪ್ರಬಲವಾಗಿವೆ. ನಿಮ್ಮ ಆತ್ಮವಿಶ್ವಾಸ, ನಿರ್ಣಯ ಮತ್ತು ನಂಬಿಕೆ ಇಲ್ಲಿನ ಶಿಖರಗಳಂತೆ ಸ್ಥಿರವಾಗಿದೆ" ಎಂದು ಪ್ರಶಂಶಿಸಿದ್ದಾರೆ.
“ಭಾರತೀಯ ಸಶಸ್ತ್ರ ಪಡೆ ವಿಶ್ವದ ಎಲ್ಲರಿಗಿಂತಲೂ ಪ್ರಬಲವಾಗಿದೆ ಮತ್ತು ಉತ್ತಮವಾಗಿದೆ ಎಂದು ನೀವು ಮತ್ತೆ ಮತ್ತೆ ಸಾಬೀತುಪಡಿಸಿದ್ದೀರಿ. ಲೇಹ್ನಿಂದ್ ಲಡಾಖ್ವರೆಗೆ, ಕಾರ್ಗಿಲ್ನಿಂದ ಸಿಯಾಚಿನ್ವರೆಗೆ ಎಲ್ಲಾ ಪ್ರದೇಶಗಳು ನಮ್ಮ ಸೈನ್ಯದ ಧೈರ್ಯಕ್ಕೆ ಸಾಕ್ಷಿಯಾಗಿವೆ. ನಿಮ್ಮ ಧೈರ್ಯದ ಕಥೆಗಳು ದೇಶದ ಪ್ರತಿ ಮನೆ ಮನೆಯಲ್ಲಿ ಪ್ರತಿಧ್ವನಿಸುತ್ತಿವೆ” ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ : ಎಂಎಸ್ಎಂಇ ನಂತರ ಚೀನಾ ವಸ್ತುಗಳ ಬಳಕೆ ನಿಷೇಧಿಸಲು ಮುಂದಾದ ಇಂಧನ ಇಲಾಖೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ