ಮುಂಬೈ ಸರಣಿ ಸ್ಪೋಟದ ರುವಾರಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನಿಂದ ರಚಿಸಲ್ಪಟ್ಟಿರುವ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿ ಸಂಘಟನೆಗೆ ಇತ್ತೀಚೆಗೆ ನೇಮಕಾತಿಯಾಗಿದ್ದು 6 ಜನ ಉಗ್ರರನ್ನು ಬಂಧಿಸುವಲ್ಲಿ ಎಟಿಎಸ್ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಮಹಾರಾಷ್ಟ್ರದ ಜಾನ್ ಮೊಹಮ್ಮದ್ ಶೇಖ್ (47), ದೆಹಲಿಯ ಒಸಾಮಾ (22), ಉತ್ತರ ಪ್ರದೇಶದ ರಾಯ್ ಬರೇಲಿಯ ಮೂಲ್‌ಚಂದ್ (47), ಅಲಹಾಬಾದ್‌ನ ಜೀಶನ್ ಕಮಾರ್ (28), ಬೆಹರೈಚ್‌ನ ಮೊಹಮದ್ ಅಬು ಬಕರ್ (23) ಮತ್ತು ಲಕ್ನೋದ ಮೊಹ್ಮದ್ ಅಮೀರ್ ಜಾವೇದ್ (31) ಎಂದು ಗುರುತಿಸಲಾಗಿದೆ. ಆದರೆ, ದಾವೂದ್ ಇಬ್ರಾಹಿಂನ ಡಿ-ಕಂಪನಿ, ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್‌ಐ) ನಿಂದ ಒತ್ತಡಕ್ಕೊಳಗಾಗಿದ್ದು, ಭಾರತದಲ್ಲಿ ಮತ್ತೊಮ್ಮೆ 26/11 ಮಾದರಿಯಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಲು ಯೋಜನೆ ರೂಪಿಸಿತ್ತು ಎಂದು ತಿಳಿದುಬಂದಿದೆ ಎಂದು ಮೂಲಗಳು ಸಿಎನ್‌ಎನ್-ನ್ಯೂಸ್ 18 ಗೆ ತಿಳಿಸಿವೆ.
ಮೂಲಗಳ ಪ್ರಕಾರ, ದಾವೂದ್ ಇಬ್ರಾಹಿಂ ಸಹೋದರನಾಗಿರುವ ಛೋಟಾ ಶಕೀಲ್ ಮತ್ತು ಅನೀಸ್ ಇಬ್ರಾಹಿಂ ಅವರನ್ನು ಐಎಸ್ಐ ಭಾರತದಲ್ಲಿ ಮತ್ತೊಂದು ಭಯೋತ್ಪಾದಕ ಕೃತ್ಯ ನಡೆಸುವಂತೆ ಒತ್ತಡ ಹೇರಿದೆ. ಇದೇ ಕಾರಣಕ್ಕೆ ಅನೀಸ್ ಇಬ್ರಾಹಿಂ ಭಯೋತ್ಪಾದಕ ಚಟುವಟಿಕೆಗಾಗಿ ಒಂದು ತಂಡವನ್ನು ನೇಮಿಸಿಕೊಳ್ಳಲು ಆರಂಭಿಸಿದ್ದ. ಈ ಮೂಲಕ ಡಿ-ಕಂಪನಿ ಖ್ಯಾತಿಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಆತ ತೊಡಗಿದ್ದ ಎಂದು ತಿಳಿದುಬಂದಿದೆ.
26/11 ಮುಂಬೈ ದಾಳಿಯಂತೆ ಮತ್ತೊಂದು ಭಯೋತ್ಪಾದಕ ಕೃತ್ಯವನ್ನುಸೃಷ್ಟಿಸುವ ಆಲೋಚನೆ ಇದಾಗಿದೆ ಎಂದು ಮೂಲಗಳು ತಿಳಿಸಿವೆ. ಇದು ಅತ್ಯಂತ ರಹಸ್ಯವಾದ ಕಾರ್ಯಾಚರಣೆ ಎಂದು ಹೇಳಲಾಗಿದೆ.
ಆದರೆ, ತನ್ನ ಮೇಲಿನ ಈ ಆರೋಪವನ್ನು ನಿನ್ನೆಯ ಪೊಲೀಸ್ ವಿಚಾರಣೆಯಲ್ಲಿ ತಳ್ಳಿಹಾಕಿರುವ ಅನೀಸ್ ಇಬ್ರಾಹಿಂ, "ಮೊದಲನೆಯದಾಗಿ, ಇದು ಸಂಪೂರ್ಣವಾಗಿ ತಪ್ಪು. ನಮಗೂ ಇದಕ್ಕೂ ಸಂಬಂಧವಿಲ್ಲ. ಏಜೆನ್ಸಿಗಳು ಸರಿಯಾಗಿ ತನಿಖೆ ನಡೆಸಿ ಇದರ ಹಿಂದಿರುವ ನೈಜ ವ್ಯಕ್ತಿಗಳನ್ನು ಪತ್ತೆ ಮಾಡಬೇಕು. ಪ್ರತಿ ಬಾರಿ ನೀವು ಯಾರನ್ನಾದರೂ ಬಂಧಿಸಿ ನಮ್ಮನ್ನು ಪ್ರಶ್ನಿಸುತ್ತೀರಿ. ನೀವು (ಏಜೆನ್ಸಿಗಳು) ಮೊದಲು ಸರಿಯಾಗಿ ತನಿಖೆ ಮಾಡಬೇಕು. ಡಿ ಕಂಪನಿ ಒಳಗೊಂಡಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ" ಎಂದು ತಿಳಿಸಿದ್ದಾನೆ.
ಎಟಿಎಸ್ ಪೊಲೀಸರಿಂದ ಬಂಧಿಸಲಾಗಿರುವ ಭಯೋತ್ಪಾದಕರ ಪೈಕಿ ಒಬ್ಬನಾದ ಜಾನ್ ಮೊಹಮ್ಮದ್ ಶೇಖ್, ಅಲಿಯಾಸ್ ಸಮೀರ್ ಕಲಿಯಾ, ಮುಂಬೈನ ಸಿಯಾನ್ ಭಾಗದ ಯುವಕ. ಆತನ ಊರಿನಿಂದ ನೇಮಕಗೊಂಡಿದ್ದು, ಆತನನ್ನು ಮೊದಲು ಬಂಧಿಸಲಾಯಿತು. ಮೂಲಗಳು ಹೇಳುವಂತೆ ಇದು ಮೂಲಭೂತವಾದ ಭಾರತೀಯ ಯುವಕರಿಗೆ ತರಬೇತಿ ನೀಡಲು ಪಾಕ್-ಐಎಸ್‌ಐ ಅಳವಡಿಸಿಕೊಂಡ ಹೊಸ ವಿಧಾನವಾಗಿದೆ. ಮತ್ತೊಬ್ಬ ಆರೋಪಿ ಒಸಾಮಾ, ಅಲಿಯಾಸ್ ಸಾಮಿ, ಪಾಕಿಸ್ತಾನದ ತರಬೇತಿಯ ಬಗ್ಗೆ ಮಂಗಳವಾರ ತನಿಖಾ ಸಂಸ್ಥೆಗಳಿಗೆ ಬಹಿರಂಗಪಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಮತ್ತು ಯುಪಿ ಪೊಲೀಸ್ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಆರು ಮಂದಿ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಬಂಧಿತ ಭಯೋತ್ಪಾದಕರಿಗೂ ಆಗಸ್ಟ್ನಲ್ಲಿ ಪಂಜಾಬ್ನಲ್ಲಿ ನಡೆದ ಟಿಫಿನ್ ಬಾಕ್ಸ್ ಬಾಂಬ್ ದಾಳಿಗೂ ಸಂಬಂಧವಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಅಮೃತಸರದ ದಲೆಕೆ ಹಳ್ಳಿಯ ಚರಂಡಿಯ ಬಳಿ ಐದು ಹ್ಯಾಂಡ್ ಗ್ರೆನೇಡ್‌ಗಳು ಮತ್ತು 100 ಪಿಸ್ತೂಲ್ ಕಾರ್ಟ್ರಿಡ್ಜ್‌ಗಳೊಂದಿಗೆ ಟಿಫಿನ್ ಬಾಂಬ್ ಪತ್ತೆಯಾಗಿದ್ದು, ಪ್ರಮುಖ ಭಯೋತ್ಪಾದಕ ಸಂಚುಗಳನ್ನು ಪೊಲೀಸರು ಭೇದಿಸಿದ್ದಾರೆ ಎಂದು ಹೇಳಿಕೊಂಡಿರುವ ಎಟಿಎಸ್ ಪಂಜಾಬ್ ನಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ.
ಇಬ್ಬರು ಭಯೋತ್ಪಾದಕರು ಸೇರಿದಂತೆ ಆರು ಜನರನ್ನು ಉತ್ತರ ಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರದಿಂದ ಬಂಧಿಸಲಾಗಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ಸಂಘಟಿಸುವಲ್ಲಿ ಪಾಕ್-ಐಎಸ್‌ಐ ಮತ್ತು ಅಂಡರ್‌ವರ್ಲ್ಡ್ ನಡುವಿನ ನಂಟನ್ನು ಬಂಧನಗಳು ಬಹಿರಂಗಪಡಿಸಿದವು. ಮುಂಬರುವ ಹಬ್ಬದ ಸಮಯದಲ್ಲಿ ಪ್ರಮುಖ ನಗರಗಳಲ್ಲಿ ದೊಡ್ಡ ಸಭೆಗಳನ್ನು ಗುರಿಯಾಗಿಸಲು ಮಾಡ್ಯೂಲ್ ಬಯಸಿದೆ ಎಂದು ಮೂಲಗಳು ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ