ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಎಂಬ ಗಾದೆ ಮಾತು ಕೇಳಿರಬೇಕಲ್ವ..? ಅಂದರೆ ರಕ್ಷಿಸಬೇಕಾದವರೇ, ಎಲ್ಲವನ್ನೂ ನಾಶ(Destroy) ಮಾಡುವುದು ಅಥವಾ ವಂಚಿಸುವುದು ಎಂದರ್ಥ. ನಾವು ಹೇಳಲು ಹೊರಟಿರುವ ಈ ಸ್ಟೋರಿಯೂ ಅಂತದ್ದೇ. ಬ್ಯಾಂಕ್ ಹಣವನ್ನು, ಗ್ರಾಹಕರನ್ನು ಕಾಪಾಡಬೇಕಾದ ಬ್ಯಾಂಕ್ ಮ್ಯಾನೇಜರ್ ( Bank Manager)ಆಗಿದ್ದವ ತಾನು ಸಂಬಳ ಪಡೆದ ಬ್ಯಾಂಕ್‌ಗೆ ಮೋಸ ಮಾಡಿ, ಕೋಟ್ಯಂತರ ರೂ. ಮೊತ್ತದ ಹಣ ವಂಚಿಸಿದ್ದಾರೆ. (Fraud ) ಈಗ ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಅನ್ನೋ ಹಾಗೆ ಆರೋಪಿಗೆ ಜೈಲು ಶಿಕ್ಷೆಯಾಗಿದೆ. ನಾವು ಹೇಳಲು ಹೊರಟಿರುವ ಈ ಘಟನೆ ನಡೆದಿರುವುದು (Telangana) ತೆಲಂಗಾಣದಲ್ಲಿ.
2 ಲಕ್ಷ ರೂಪಾಯಿ ದಂಡ
ಹೌದು, ಬ್ಯಾಂಕ್ ವಂಚನೆ ಪ್ರಕರಣವೊಂದರ ಸಂಬಂಧ ಹೈದರಾಬಾದ್‌ನ ಸಿಬಿಐ ನ್ಯಾಯಾಲಯವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ರ್ಯಾಂಚ್‌ವೊಂದರ ಮಾಜಿ ಮ್ಯಾನೇಜರ್ ಪ್ರವೀಣ್ ಸಿಂಗ್‌ಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 2 ಲಕ್ಷ ರೂಪಾಯಿ ದಂಡ ವಿಧಿಸಿದೆ. ಡಿಸೆಂಬರ್ 30, 2021ರಂದು ಕೋರ್ಟ್ ಪ್ರವೀಣ್ ಸಿಂಗ್‌ಗೆ ಈ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: SBI ಉಚಿತವಾಗಿ ನೀಡುತ್ತಿದೆ 2 ಲಕ್ಷ ರೂ.ವರೆಗಿನ ಲಾಭ: ಹೇಗೆ ಗೊತ್ತಾ?
2010 ರಂದು ಆರೋಪ
ವಿಶೇಷ ಅವಧಿಯ ಠೇವಣಿ ರಸೀದಿಗಳನ್ನು (STDR) ಅವಧಿಗೆ ಮುಂಚಿತವಾಗಿ ರದ್ದುಪಡಿಸುವ ಮೂಲಕ ಎಸ್‌ಬಿಐಗೆ ವಂಚಿಸಲು ಅಪರಿಚಿತ ವ್ಯಕ್ತಿಗಳೊಂದಿಗೆ ಸಂಚು ರೂಪಿಸಿದ್ದಕ್ಕಾಗಿ, ನಕಲಿ ಹೆಸರಿನಲ್ಲಿ ರಚಿಸಲಾದ ಅವರ ಸ್ವಂತ ಖಾತೆಗಳು ಮತ್ತು ಖಾತೆಗಳಿಗೆ ಹಣವನ್ನು ದುರುಪಯೋಗಪಡಿಸಿಕೊಂಡರು ಮತ್ತು ಬ್ಯಾಂಕ್‌ಗೆ 4.03 ಕೋಟಿ ರೂ. ವಂಚಿಸಿದರು ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರವೀಣ್ ಸಿಂಗ್ ವಿರುದ್ಧ ಏಪ್ರಿಲ್ 26, 2010 ರಂದು ಆರೋಪ ಮಾಡಿತ್ತು.
ಬಳಿಕ, ಈ ಸಂಬಂಧದ ತನಿಖೆಯ ನಂತರ, ಸಿಬಿಐ ಆರೋಪಿಗಳ ವಿರುದ್ಧ ಮಾರ್ಚ್ 31, 2011ರಂದು ಚಾರ್ಜ್ ಶೀಟ್ ಸಲ್ಲಿಸಿತು. ನಂತರ, ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ತಪ್ಪಿತಸ್ಥನೆಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ..?
ಆರೋಪಿ 4 ಕೋಟಿ ರೂ.ಗೂ ಅಧಿಕ ಮೊತ್ತವನ್ನು ದುರ್ಬಳಕೆ ಮಾಡಿಕೊಂಡಿದ್ದರು. ಆರೋಪಿ ಹೂಡಿದ ಸಂಚಿನಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಗೆ ಭಾರಿ ನಷ್ಟವಾಗಿತ್ತು.ಬಳಿಕ, ವಂಚನೆಯನ್ನು ಪತ್ತೆ ಮಾಡಿದ ದೇಶದ ಅತಿ ದೊಡ್ಡ ಬ್ಯಾಂಕ್, ಈ ವಿಷಯವನ್ನು ಪರಿಶೀಲಿಸಲು ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಿತು ಮತ್ತು ನಂತರ, ಬ್ಯಾಂಕ್ ಕೇಂದ್ರ ತನಿಖಾ ಸಂಸ್ಥೆ (CBI) ಯನ್ನು ಸಂಪರ್ಕಿಸಲು ನಿರ್ಧರಿಸಿತು. ಇನ್ನು, ಆರೋಪಿಗಳ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಲು ಸಿಬಿಐ 100ಕ್ಕೂ ಹೆಚ್ಚು ಜನರ ಸಾಕ್ಷ್ಯವನ್ನು ದಾಖಲಿಸಿದೆ.
CBI ಚಾರ್ಜ್‌ಶೀಟ್
ತನಿಖಾ ಸಂಸ್ಥೆ ಆರೋಪಿಗಳ ವಿರುದ್ಧ ಹಲವಾರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ವಿವಿಧ ಹೇಳಿಕೆಗಳನ್ನು ದಾಖಲಿಸಿದ ನಂತರ ಮತ್ತು ಡಿಜಿಟಲ್ ಮತ್ತು ಡಾಕ್ಯುಮೆಂಟರಿ ಪುರಾವೆಗಳನ್ನು ಸಂಗ್ರಹಿಸಿದ ನಂತರ, CBI ಚಾರ್ಜ್‌ಶೀಟ್ ಸಲ್ಲಿಸುವ ಮೊದಲು ಕಾನೂನು ಅಭಿಪ್ರಾಯವನ್ನೂ ತೆಗೆದುಕೊಂಡಿತ್ತು.
ಇದನ್ನೂ ಓದಿ: FD ಮೇಲಿನ ಬಡ್ಡಿದರವನ್ನು ಹೆಚ್ಚಿಸಿದ SBI: ಸಿಗಲಿದೆ ಮೊದಲಿಗಿಂತ ಹೆಚ್ಚು ಆದಾಯ, ಹೊಸ ದರಗಳನ್ನು ತಿಳಿಯಿರಿ
ಬಳಿಕ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ರೀಸರ್ಚ್ ಸೆಂಟರ್, ಇಮಾರತ್ ಶಾಖೆಯ ಮ್ಯಾನೇಜರ್ ಆಗಿದ್ದ ಪ್ರವೀಣ್ ಸಿಂಗ್‌ಗೆ ಶಿಕ್ಷೆ ವಿಧಿಸುವ ಮೊದಲು ಸಿಬಿಐ ನ್ಯಾಯಾಲಯಕ್ಕೆ ಪೂರಕ ದಾಖಲೆ, ಸಾಕ್ಷ್ಯಗಳನ್ನು ಒದಗಿಸಿತ್ತು ಎಂದು ತಿಳಿದುಬಂದಿದೆ. ನಂತರ, ಈ ಎಲ್ಲ ದಾಖಲೆ, ಸಾಕ್ಷ್ಯಗಳನ್ನು ಪರಿಶೀಲಿಸಿದ ಕೆಳ ಹಂತದ ನ್ಯಾಯಾಲಯ, ಎಸ್‌ಬಿಐ ಮಾಜಿ ಮ್ಯಾನೇಜರ್ ತಪ್ಪು ಮಾಡಿರುವುದು ಸಾಬೀತಾದ ಹಿನ್ನೆಲೆ ಆತನಿಗೆ 7 ವರ್ಷಗಳ ಕಠಿಣ ಸಜೆ ಹಾಗೂ 2 ಲಕ್ಷ ರೂ. ದಂಡವನ್ನೂ ವಿಧಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ