ಕೊಲ್ಕೊತ್ತಾ: ಕಳೆದ ಕೆಲವು ತಿಂಗಳುಗಳಿಂದ ಆರ್ಥಿಕ ಬಿಕ್ಕಟ್ಟನ್ನು (Economic Crisis) ಎದುರಿಸುತ್ತಿರುವ ನೆರೆಯ ರಾಷ್ಟ್ರ ಪಾಕಿಸ್ತಾನವನ್ನು (Pakistan) ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಸಂಕಷ್ಟದಿಂದ ಪಾರು ಮಾಡಲಿದ್ದಾರೆ ಎಂದು ಭಾರತದ ಗುಪ್ತಚರ ಸಂಸ್ಥೆ 'ರಾ' (RAW) ಮಾಜಿ ಮುಖ್ಯಸ್ಥ ಅಮರ್‌ಜಿತ್ ಸಿಂಗ್ ದುಲತ್ (Amarjit Singh Dulat) ಅಭಿಪ್ರಾಯಪಟ್ಟಿದ್ದಾರೆ. ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಈ ವರ್ಷದ ಅಂತ್ಯದ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಕಡೆಗೆ ಸ್ನೇಹಪೂರ್ವಕ ನಡೆಯನ್ನು ಅನುಸರಿಸಬಹುದು ಎಂದು ಹೇಳಿದ್ದಾರೆ.
ಇದು ಗುಪ್ತಚರ ಇಲಾಖೆಯ ಮಾಹಿತಿ ಅಲ್ಲ, ನನ್ನ ಅನುಭವದ ಮಾತು ಎಂದು ಹೇಳಿರುವ ಅಮರ್‌ಜಿತ್ ಸಿಂಗ್ ದುಲತ್, ಪಾಕಿಸ್ತಾನದ ಜತೆಗೆ ಮಾತುಕತೆ ನಡೆಸಲು ಪ್ರತಿ ಗಳಿಗೆಯೂ ಉತ್ತಮವಾದ ಸಮಯವೇ. ನಮ್ಮ ನೆರೆಹೊರೆಯವರ ಜತೆ ನಾವು ನಿರಂತರ ಮಾತುಕತೆಗಳನ್ನು ನಡೆಸುತ್ತಿರಬೇಕು. ಇನ್ನಷ್ಟು ಹೆಚ್ಚು ಸಾರ್ವಜನಿಕರನ್ನು ತೊಡಗಿಸಿಕೊಳ್ಳುವ ಮುಕ್ತವಾದ ಮಾತುಕತೆ ಮುಂದುವರಿಸುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Uddhav Thackeray: ಕೇಂದ್ರ ಚುನಾವಣಾ ಆಯೋಗ ಪ್ರಧಾನಿ ನರೇಂದ್ರ ಮೋದಿಯ ಗುಲಾಮ: ಉದ್ಧವ್ ಠಾಕ್ರೆ ಆಕ್ರೋಶ
ನೆರೆ ರಾಷ್ಟ್ರದೊಂದಿಗೆ ಉತ್ತಮ ಬಾಂಧವ್ಯ ಬೇಕು
ಮುಂದುವರಿದು ಮಾತನಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಪೋಷಿತ ಭಯೋತ್ಪಾದನೆ ನಿಗ್ರಹ ಅಗತ್ಯವಿತ್ತು. ಅದರಂತೆ ಸೇನಾ ಬಲ ಪ್ರಯೋಗ ನಡೆಸಿ ಯಶಸ್ಸು ಸಾಧಿಸಲಾಗಿದೆ. ಆದರೆ, ಇನ್ಮುಂದೆ ಕಾಶ್ಮೀರಿಗರಲ್ಲಿ ಭಾರತೀಯರು ಎಂಬ ಅಭಿಮಾನ ಬೆಳೆಸುವ ಕೆಲಸ ಆಗಬೇಕಿದೆ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ರಷ್ಯಾ-ಚೀನಾ-ಇರಾನ್ ಒಟ್ಟಾಗಿ ಅಮೆರಿಕವನ್ನು ಹತ್ತಿಕ್ಕಲು ಸಂಚು ಹೆಣೆಯುತ್ತಿದ್ದು, ಭಾರತವು ಈ ಬಗ್ಗೆ ಜಾಗ್ರತೆ ವಹಿಸಬೇಕು. ನಮ್ಮ ನೆರೆ ರಾಷ್ಟ್ರಗಳ ಜತೆಗೆ ಉತ್ತಮ ಬಾಂಧವ್ಯ ಹೊಂದಿರುವುದು ಯಾವಾಗಲೂ ಸುರಕ್ಷಿತ ಹಾಗೂ ಜಾಣ ನಡೆ ಎಂದು ಅಮರ್‌ಜಿತ್ ಸಿಂಗ್ ದುಲತ್ ಕೇಂದ್ರದ ನರೇಂದ್ರ ಮೋದಿ ಸರಕಾರಕ್ಕೆ ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ: Narendra Modi: ಕನ್ನಡ ಭಾಷೆಯನ್ನು ಸುಲಭವಾಗಿ ಕಲಿಯುವ ವಿಧಾನ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ!
ರಾಹುಲ್ ಗಾಂಧಿಯ ಬಗ್ಗೆಯೂ ಮೆಚ್ಚುಗೆ
ಇನ್ನು ತಾವು ಬರೆದ 'ಎ ಲೈಫ್ ಇನ್ ದಿ ಶ್ಯಾಡೋಸ್' ಪುಸಕ್ತದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಮರ್‌ಜಿತ್ ಸಿಂಗ್ ದುಲತ್ , 'ಕಾಶ್ಮೀರದಲ್ಲಿ ಉಗ್ರವಾದದ ಜತೆಗೆ ಸ್ಥಳೀಯ ಅಸ್ಮಿತೆಯು ಅಳಿಸಿ ಹೋಗುತ್ತಿದೆ. ಪ್ರಾದೇಶಿಕತೆ ಉಳಿಯಬೇಕು. ಕಾಶ್ಮೀರಿ ಸಂಸ್ಕೃತಿ, ಪರಂಪರೆಯ ರಕ್ಷಣೆಯಾಗಬೇಕು. ಇಂಥದ್ದೊಂದು ಕಾರ್ಯದ ಆಶಾಕಿರಣವು ಮೊನ್ನೆ ರಾಹುಲ್ ಗಾಂಧಿ ಅವರು ಲಾಲ್‌ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಸಂದರ್ಭದಲ್ಲಿ ನನಗೆ ಗೋಚರಿಸಿತು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿ ಕೊಂಡಿದ್ದ ಭಾರತ್ ಜೋಡೋ ಯಾತ್ರೆಯ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಕಳಿಸಿದ ಕೆಲವೇ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀನಗರದಲ್ಲಿ ಓಪನ್ ಜೀಪ್‌ನಲ್ಲಿ ಸಂಚರಿಸಬಹುದು. ಕಾಶ್ಮೀರಿಗರು ಅಂಥ ಭವ್ಯ ಸ್ವಾಗತ ಕೋರುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅಮರ್‌ಜಿತ್ ಸಿಂಗ್ ದುಲತ್, ಈಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಪುನಃ ರಾಜ್ಯದ ಸ್ಥಾನಮಾನ ಸ್ಥಾಪನೆಗೆ ಸಿದ್ಧತೆಗಳು ನಡೆಯುತ್ತಿವೆ. ಇದು ತ್ವರಿತಗತಿಯಲ್ಲಿ ಆದಾಗ ಕಾಶ್ಮೀರಿಗರಲ್ಲಿ ಕೇಂದ್ರ ಸರಕಾರದ ಮೇಲೆ ವಿಶ್ವಾಸ ಹೆಚ್ಚಲಿದೆ. 370ನೇ ವಿಧಿ ರದ್ದತಿಗೂ ಇದ್ದ ಪರಿಸ್ಥಿತಿಗಿಂತ ಈಗ ಕಣಿವೆ ರಾಜ್ಯದಲ್ಲಿ ಹೆಚ್ಚು ಶಾಂತ ಸ್ಥಿತಿ ಇದೆ ಎಂದು ಅಭಿಪ್ರಾಯಪಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ