ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Ex- Prime minister) ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ ಅಂತ ಹೇಳಬಹುದು. ಇತ್ತೀಚೆಗಷ್ಟೇ ಅವರು ಮಹಿಳೆಯೊಂದಿಗೆ ನಡೆಸಿದ ಸಂಭಾಷಣೆಯ ಆಡಿಯೋ ತುಣುಕು ಸೋರಿಕೆಯಾದ (Audio Leak) ಬಗ್ಗೆ ತೀವ್ರ ವಿವಾದದಲ್ಲಿ ಸಿಲುಕಿದ್ದು ಬಹುತೇಕರಿಗೆ ತಿಳಿದೇ ಇರುತ್ತದೆ. ಪಾಕಿಸ್ತಾನದ ಪತ್ರಕರ್ತ ಸೈಯದ್ ಅಲಿ ಹೈದರ್ ಯೂಟ್ಯೂಬ್ನಲ್ಲಿ (YouTube) ಹಂಚಿಕೊಂಡಿರುವ ಆಡಿಯೋ ತುಣುಕುಗಳು ಸಾರ್ವತ್ರಿಕ ಚುನಾವಣೆಗೆ ಕೆಲವು ತಿಂಗಳುಗಳ ಮೊದಲು ಪಾಕ್ ರಾಷ್ಟ್ರವನ್ನು ಬೆಚ್ಚಿ ಬೀಳಿಸಿತ್ತು. ಕೆಲವು ವರದಿಗಳು (Report) ಈ ಆಡಿಯೋ ಪಾಕಿಸ್ತಾನ ಪ್ರಧಾನಿ ಕಚೇರಿಯಿಂದ ಹೊರಬಂದಿದೆ ಎಂದು ಹೇಳಿವೆ.
ಈ ವರ್ಷದ ಆರಂಭದಲ್ಲಿ ಇಮ್ರಾನ್ ಖಾನ್ ಅವರು ತಮ್ಮ ಅಧಿಕಾರವನ್ನು ಕಳೆದುಕೊಂಡರು. ಅದಷ್ಟೇ ಅಲ್ಲದೆ ಇತ್ತೀಚೆಗೆ ಅವರ ಮಹಿಳೆಯೊಂದಿಗೆ ನಡೆಸಿದ ಸಂಭಾಷಣೆಗಳು ಸೋರಿಕೆಯಾದುದರ ಬಗ್ಗೆ ಭಾರಿ ಸುದ್ದಿಯಲ್ಲಿದ್ದರು ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಆಡಿಯೋ ತುಣುಕುಗಳನ್ನು ನಕಲಿ ಎಂದು ಹೇಳಿದೆ ಮತ್ತು ಸರ್ಕಾರವು ತಮ್ಮ ಮುಖ್ಯಸ್ಥರನ್ನು ಗುರಿಯಾಗಿಸಲು ಈ ರೀತಿಯಾದ ನಕಲಿ ವೀಡಿಯೋಗಳು ಮತ್ತು ಆಡಿಯೋಗಳನ್ನು ಬಳಸುತ್ತಿದೆ ಎಂದು ಆರೋಪಿಸಿತ್ತು. ಈಗ ಮತ್ತೊಮ್ಮೆ ಇಮ್ರಾನ್ ಖಾನ್ ಸುದ್ದಿಯಲ್ಲಿರುವುದು ಮತ್ತೊಂದು ವಿಚಾರಕ್ಕೆ ಅಂತ ಹೇಳಬಹುದು.
ಪಾಕ್ ಮಾಜಿ ಪ್ರಧಾನಿ ಪತ್ನಿ ರೆಹಾಮ್ ಈಗ ಬೇರೊಬ್ಬರ ಹೆಂಡತಿ
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಾಮ್ ಖಾನ್ ಅಮೆರಿಕ ಮೂಲದ ಪಾಕಿಸ್ತಾನಿ ನಟ ಮಿರ್ಜಾ ಬಿಲಾಲ್ ಅವರನ್ನು ವಿವಾಹವಾಗಿದ್ದಾರೆ.
2014 ಮತ್ತು 2015 ರ ನಡುವೆ ಇಮ್ರಾನ್ ಖಾನ್ ಅವರನ್ನು ಮದುವೆಯಾಗಿದ್ದ 49 ವರ್ಷದ ಬ್ರಿಟಿಷ್-ಪಾಕಿಸ್ತಾನಿ ಪತ್ರಕರ್ತೆ, ಯುಎಸ್ ನಗರ ಸಿಯಾಟಲ್ ನಲ್ಲಿ ನಡೆದ ಸರಳ ನಿಖಾ ಸಮಾರಂಭದಲ್ಲಿ ಬಿಲಾಲ್ ಅವರನ್ನು ಕೈ ಹಿಡಿದಿರುವುದಾಗಿ ತಮ್ಮ ಟ್ವಿಟರ್ ಖಾತೆಯ ಪುಟದಲ್ಲಿ ಘೋಷಿಸಿದರು.
"ಮಿರ್ಜಾ ಬಿಲಾಲ್ ಪೋಷಕರ ಆಶೀರ್ವಾದದಿಂದ ಮತ್ತು ನನ್ನ ಮಗನ ಸಹಕಾರದಿಂದ ಸಿಯಾಟಲ್ ನಲ್ಲಿ ನಾವು ಸುಂದರವಾದ ನಿಖಾ ಸಮಾರಂಭವನ್ನು ನಡೆಸಿದ್ದೇವೆ" ಎಂದು ರೆಹಾಮ್ ಟ್ವೀಟ್ ಮಾಡಿದ್ದಾರೆ.
ಅವರು ನಿಖಾ ಸಮಾರಂಭದ ತನ್ನ ಮತ್ತು ಬಿಲಾಲ್ ಅವರ ಫೋಟೋಗಳನ್ನು ಸಹ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಫೋಟೋ ದಂಪತಿಗಳು ತಮ್ಮ ಮದುವೆಯ ಉಂಗುರಗಳನ್ನು ತೊಟ್ಟಿರುವ ಕೈಗಳನ್ನು ಹಿಡಿದುಕೊಂಡಿರುವ ಫೋಟೋವನ್ನು ತೋರಿಸುತ್ತದೆ.
ಇದನ್ನೂ ಓದಿ: Coronavirus Cases: ಚೀನಾದಲ್ಲಿ ಕೊರೊನಾ ಹಾಹಾಕಾರ, ಅಮೆರಿಕಾದಲ್ಲೂ ಕೇಸ್ ಹೆಚ್ಚಳ, ಭಾರತದಲ್ಲೂ ಭಾರೀ ಅಲರ್ಟ್!
ರೆಹಾಮ್ ಮತ್ತು ಬಿಲಾಲ್ ಇಬ್ಬರಿಗೂ ಇದು ಮೂರನೇ ಮದುವೆಯಂತೆ
ರೆಹಾಮ್ ಮತ್ತು ಬಿಲಾಲ್ ಇಬ್ಬರಿಗೂ ಇದು ಮೂರನೇ ಮದುವೆಯಾಗಿದೆ. ಬಿಲಾಲ್ ಒಬ್ಬ ಕಾರ್ಪೊರೇಟ್ ವೃತ್ತಿಪರರಾಗಿದ್ದು, ಅವರು ಈ ಹಿಂದೆ ಮಾಡೆಲ್ ಆಗಿ ಕೆಲಸ ಮಾಡಿದ್ದು, ‘ದಿ 4 ಮೆನ್ ಶೋ’, ‘ದಿಲ್ ಪೇ ಮತ್ ಲೇ ಯಾರ್’ ಮತ್ತು ‘ನ್ಯಾಷನಲ್ ಏಲಿಯನ್ ಬ್ರಾಡ್ ಕಾಸ್ಟ್’ ನ ಭಾಗವಾಗಿದ್ದರು ಎಂದು ವರದಿಗಳು ಹೇಳಿವೆ.
ರೆಹಾಮ್ ಮೊದಲು ಇಜಾಜ್ ರೆಹಮಾನ್ ಅವರನ್ನು ವಿವಾಹವಾದರು, ಅವರು ಒಬ್ಬ ಮನೋವೈದ್ಯರಾಗಿದ್ದರು. ಈ ದಂಪತಿಗಳು 1993 ರಲ್ಲಿ ವಿವಾಹವಾದರು ಮತ್ತು 2005 ರಲ್ಲಿ ವಿಚ್ಛೇದನ ಪಡೆದರು.
ಇಮ್ರಾನ್ ಖಾನ್ ಅವರೊಂದಿಗಿನ ಅವರ ಎರಡನೇ ವಿವಾಹ ಸಂಬಂಧ ಕೇವಲ 10 ತಿಂಗಳುಗಳ ಕಾಲ ಮಾತ್ರ ಇತ್ತು. ಈ ಜೋಡಿ 2014ರಲ್ಲಿ ಮದುವೆಯಾಗಿದ್ದು, 2015ರಲ್ಲಿ ವಿಚ್ಛೇದನ ಪಡೆದಿದ್ದರು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ರೆಹಾಮ್ 2018 ರಲ್ಲಿ "ರೆಹಾಮ್ ಖಾನ್" ಎಂಬ ತನ್ನ ಆತ್ಮಚರಿತ್ರೆಯನ್ನು ಪ್ರಕಟಿಸಿದರು, ಇದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಮುಖ್ಯಸ್ಥರೊಂದಿಗಿನ ಅವರ ವಿವಾಹದ ಸುತ್ತ ಸುತ್ತುತ್ತದೆ ಮತ್ತು 70 ವರ್ಷದ ಕ್ರಿಕೆಟಿಗ-ರಾಜಕಾರಣಿಯಾಗಿ ಬದಲಾದ ವ್ಯಕ್ತಿಯ ಮಾದಕವಸ್ತುಗಳು ಮತ್ತು ದುರುಪಯೋಗದ ಬಗ್ಗೆ ಹೇಳುತ್ತದೆ ಎಂದು ವರದಿ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ