ಆಮ್ ಆದ್ಮಿಗೆ ಮತ್ತೊಂದು ಶಾಕ್..! ಆಶುತೋಷ್ ರಾಜೀನಾಮೆ

ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಗುರುತಿಸಿಕೊಂಡು ಕೇಜ್ರಿವಾಲ್ ಜೊತೆ ಆಮ್ ಆದ್ಮಿ ಪಕ್ಷ ಕಟ್ಟಿದ ಆಶುತೋಷ್ ಇದೀಗ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ಟಿವಿ ಪತ್ರಕರ್ತರಾಗಿದ್ದ ಆಶುತೋಷ್ ಅವರು ಮಾಧ್ಯಮಕ್ಕೆ ಮರಳುವ ಸಾಧ್ಯತೆ ಇದೆ.


Updated:August 15, 2018, 1:30 PM IST
ಆಮ್ ಆದ್ಮಿಗೆ ಮತ್ತೊಂದು ಶಾಕ್..! ಆಶುತೋಷ್ ರಾಜೀನಾಮೆ
ಆಶುತೋಷ್

Updated: August 15, 2018, 1:30 PM IST
- ನ್ಯೂಸ್18 ಕನ್ನಡ

ನವದೆಹಲಿ(ಆ. 15): ದೇಶಕ್ಕೆ ಹೊಸ ಮಾದರಿಯ ರಾಜಕಾರಣ ಮತ್ತು ಆಡಳಿತ ನೀಡುವ ಭರವಸೆಯೊಂದಿಗೆ ಅಸ್ತಿತ್ವಕ್ಕೆ ಬಂದ ಆಮ್ ಆದ್ಮಿ ಪಕ್ಷ ಕಳೆದ ಐದಾರು ವರ್ಷಗಳಿಂದ ಒಂದಿಲ್ಲೊಂದು ಹೊಡೆತ ಪಡೆಯುತ್ತಾ ಬಂದಿದೆ. ಅನೇಕ ದಿಗ್ಗಜರು ಆ ಪಕ್ಷ ತೊರೆದು ಹೋಗಿದ್ದಾರೆ. ಈ ಪಟ್ಟಿಗೆ ಪಕ್ಷದ ಸಂಸ್ಥಾಪಕ ಸದಸ್ಯ ಆಶುತೋಷ್ ಸೇರ್ಪಡೆಯಾಗಿದ್ದಾರೆ. ತಾವು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಆಶುತೋಷ್ ಅವರು ಟ್ವೀಟ್ ಮಾಡಿ ಪ್ರಕಟಿಸಿದ್ದಾರೆ. ತೀರಾ ವೈಯಕ್ತಿಕ ಕಾರಣಗಳಿಗಾಗಿ ಅವರು ಪಕ್ಷ ಬಿಡುತ್ತಿದ್ದಾರೆನ್ನಲಾಗಿದೆ.

“ಪ್ರತಿಯೊಂದು ಪ್ರಯಾಣಕ್ಕೂ ಅಂತ್ಯವೆಂಬುದು ಇರುತ್ತದೆ. ಆಮ್ ಆದ್ಮಿ ಜೊತೆಗಿನ ನನ್ನ ಕ್ರಾಂತಿಕಾರಕ ಬಾಂಧವ್ಯಕ್ಕೂ ಕೊನೆ ಬಂದಿದೆ. ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯು ನನ್ನ ರಾಜೀನಾಮೆ ಅಂಗೀಕರಿಸುವ ವಿಶ್ವಾಸ ನನ್ನಲ್ಲಿದೆ. ನನ್ನ ನಿರ್ಧಾರಕ್ಕೆ ತೀರಾ ವೈಯಕ್ತಿಕ ಕಾರಣವಿದೆ. ನನ್ನಿಡೀ ಪಯಣದಲ್ಲಿ ನನಗೆ ಬೆಂಬಲವಾಗಿ ನಿಂತ ಪಕ್ಷ ಹಾಗೂ ಎಲ್ಲರಿಗೂ ಧನ್ಯವಾದಗಳು,” ಎಂದು ಆಶುತೋಷ್ ಟ್ವೀಟ್ ಮಾಡಿದ್ದಾರೆ.


Loading...

ಅದರ ಜೊತೆಗೆ, ತನ್ನ ಖಾಸಗಿ ವಿಚಾರವನ್ನು ಕೆದಕಬೇಡಿ. ತಾನು ಯಾರಿಗೂ ಬೈಟ್ ಕೊಡುವುದಿಲ್ಲ ಎಂದೂ ಆಶುತೋಷ್ ಅವರು ಮಾಧ್ಯಮ ಮಂದಿಗೆ ಮನವಿ ಮಾಡಿಕೊಂಡಿದ್ದಾರೆ.ಆಪ್ ಮೂಲಗಳ ಪ್ರಕಾರ, ಆಶುತೋಷ್ ಅವರ ರಾಜೀನಾಮೆಯನ್ನು ಪಕ್ಷ ಇನ್ನೂ ಅಂಗೀಕರಿಸಿಲ್ಲ. ದಿಲ್ಲಿ ಸರಕಾರದ ಸಚಿವ ಗೋಪಾಲ್ ರಾಯ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆಶುತೋಷ್ ಅವರನ್ನು ಭೇಟಿ ಮಾಡಿ ಮಾತನ್ನಾಡುತ್ತೇನೆ ಎಂದು ಹೇಳಿದ್ದಾರೆ.ಏನು ಕಾರಣವಿರಬಹುದು?
ಆಮ್ ಆದ್ಮಿ ಪಕ್ಷದ ಕೆಲ ವ್ಯವಹಾರ ಮತ್ತು ಧೋರಣೆ ಬಗ್ಗೆ ಆಶುತೋಷ್ ಅವರಲ್ಲಿ ಭಿನ್ನಾಭಿಪ್ರಾಯಗಳಿದ್ದವೆನ್ನಲಾಗಿದೆ. ವೈಯಕ್ತಿಕ ಜೀವನ ಬೇರೆ, ರಾಜಕೀಯ ಜೀವನ ಬೇರೆ ಎಂಬ ನಿಲುವು ಆಶುತೋಷ್ ಅವರದ್ದಾಗಿತ್ತು. ಯಾವುದೋ ವೈಯಕ್ತಿಕ ಜೀವನದ ವಿವಾದ ಅಥವಾ ಹಗರಣ ಉದ್ಭವಿಸಿದರೆ ತಲೆದಂಡ ಮಾಡಲಾಗುವ ಕ್ರಮವನ್ನು ಅವರು ಬಲವಾಗಿ ವಿರೋಧಿಸುತ್ತಿದ್ದರು. ಉದಾಹರಣೆಗೆ, ಸೆಕ್ಸ್ ಹಗರಣದಲ್ಲಿ ಆಪ್ ಮುಖಂಡ ಸಂದೀಪ್ ಕುಮಾರ್ ಸಿಲುಕಿಕೊಂಡಾಗ ಕೇಜ್ರಿವಾಲ್ ಅವರು ನೈತಿಕ ಕಾರಣವೊಡ್ಡಿ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದರು. ಈ ಸಂದರ್ಭದಲ್ಲಿ ಸಂದೀಪ್ ಕುಮಾರ್ ಅವರಿಗೆ ಬೆಂಬಲವಾಗಿ ನಿಂತಿದ್ದು ಆಶುತೋಷ್ ಅವರೆಯೇ. ವೈಯಕ್ತಿಕ ಮತ್ತು ಸಾರ್ವಜನಿಕ ಜೀವನ ಎರಡನ್ನೂ ಪ್ರತ್ಯೇಕವಾಗಿ ನೋಡಬೇಕು. ಸಂದೀಪ್ ಕುಮಾರ್ ಅವರು ಮಾಡಿದ್ದು ರೇಪ್ ಅಲ್ಲ, ಬದಲಾಗಿ ಒಪ್ಪಿಗೆಯ ಸೆಕ್ಸ್ ಅಷ್ಟೇ. ಇದರಲ್ಲಿ ಯಾವುದೇ ಅಪರಾಧ ಕಾಣುತ್ತಿಲ್ಲ. ಅವರನ್ನು ಪಕ್ಷದಿಂದ ಉಚ್ಛಾಟಿಸಿದ ಕ್ರಮ ಸರಿಯಲ್ಲ ಎಂದು ಹೇಳಿದ್ದರು.

ಆಶುತೋಷ್ ಅವರು ರಾಜ್ಯಸಭಾ ಸ್ಥಾನದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ವಿಚಾರದಲ್ಲಿ ಅವರಿಗೆ ಆಮ್ ಆದ್ಮಿ ಪಕ್ಷದ ಟಿಕೆಟ್ ಸಿಗಲಿಲ್ಲ. ಸುಶೀಲ್ ಗುಪ್ತ, ನಾರಾಯಣ್ ದಾಸ್ ಗುಪ್ತ ಮತ್ತು ಸಂಜಯ್ ಸಿಂಗ್ ಅವರನ್ನು ಕೇಜ್ರಿವಾಲ್ ಅವರು ರಾಜ್ಯಸಭೆಗೆ ನಾಮಿನೇಟ್ ಮಾಡಿದ್ದರು. ಇದು ಆಶುತೋಷ್ ಅವರನ್ನು ನಿರಾಸೆಗೊಳಿಸಿತ್ತು. ಗೋವಾದಲ್ಲಿ ಆಮ್ ಆದ್ಮಿ ಪಕ್ಷವನ್ನು ಚುನಾವಣಾ ಕಣಕ್ಕಿಳಿಸುವುದಕ್ಕೂ ಅವರ ವಿರೋಧವಿತ್ತೆನ್ನಲಾಗಿದೆ.

ಇದೇ ವೇಳೆ, ಆಶುತೋಷ್ ಅವರು ವೈಯಕ್ತಿಕ ಜೀವನದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆನ್ನಲಾಗಿದೆ. ಅವರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ವೈಯಕ್ತಿಕ ಜೀವನಕ್ಕೆ ಧಕ್ಕೆ ತಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆಶುತೋಷ್ ಅವರು ಆಪ್ ಸೇರುವ ಮುನ್ನ ಪತ್ರಕರ್ತರಾಗಿದ್ದರು. ಈಗ ಅವರು ಮರಳಿ ಗೂಡು ಸೇರುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, 2019ರ ಚುನಾವಣೆವರೆಗೂ ಅವರು ಮಾಧ್ಯಮದಲ್ಲಿದ್ದು, ಆ ನಂತರ ಮುಂದಿನ ದಾರಿಯನ್ನು ಹಿಡಿಯುವ ನಿರೀಕ್ಷೆ ಇದೆ.

ಆಮ್ ಆದ್ಮಿಗೆ ಸಂಕಷ್ಟ?
ಆಮ್ ಆದ್ಮಿ ಪ್ರಾರಂಭವಾದಾಗಿನಿಂದ ಸಾಕಷ್ಟು ವಿವಾದಗಳು ತಲೆದೋರುತ್ತಲೇ ಇವೆ. ಹಲವಾರು ಮಂದಿ ಆ ಪಕ್ಷವನ್ನು ತ್ಯಜಿಸಿದ್ದಾರೆ. ಪಕ್ಷದ ಸಹಸಂಸ್ಥಾಪಕರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಕಾರಣವೊಡ್ಡಿ ಉಚ್ಛಾಟಿಸಲಾಗಿತ್ತು. ಕ್ಯಾಪ್ಟನ್ ಗೋಪಿನಾಥ್, ವಿನೋದ್ ಕುಮಾರ್ ಬಿನ್ನಿ, ಶಾಜಿಯಾ ಇಲ್ಮಿ, ಮಧು ಭಡೂರಿ, ಕುಮಾರ್ ವಿಶ್ವಾಸ್, ಸಾಹಿಲ್ ಕುಮಾರ್ ಮೊದಲಾದವರು ಪಕ್ಷವನ್ನ ತೊರೆದುಹೋಗಿದ್ದಾರೆ. ಕರ್ನಾಟಕದಲ್ಲಿ ರವಿಕೃಷ್ಣ ರೆಡ್ಡಿ ಕೂಡ ಆಮ್ ಆದ್ಮಿ ಪಕ್ಷದಿಂದ ಹೊರಹೋಗಿದ್ದಾರೆ. ಈಗ ಆಶುತೋಷ್ ಕೂಡ ಪಕ್ಷದಿಂದ ದೂರ ಹೋಗಿರುವುದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಬಲವಾದ ಪೆಟ್ಟು ಬೀಳುವ ಸಾಧ್ಯತೆ ಇಲ್ಲದಿಲ್ಲ.
First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ