ಜೈಪುರ (ಆಗಸ್ಟ್ 14); ರಾಜಸ್ಥಾನದ ಕಾಂಗ್ರೆಸ್ ಶಾಸಕರ ಒಗ್ಗಟ್ಟು ಕೊನೆಗೂ ಗೆಲುವು ಸಾಧಿಸಿದೆ. ಚುನಾಯಿತ ಸರ್ಕಾರವನ್ನು ಕೆಡವಲು ಕೆಲವರು ನಡೆಸಿದ ಕುತಂತ್ರ ವಿಫಲವಾಗಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಕುಟುಕಿದ್ದಾರೆ.
ಇಂದು ನಡೆದ ರಾಜಸ್ಥಾನ ವಿಧಾನಸಭಾ ಅಧಿವೇಶದಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಗೆಹ್ಲೋಟ್ ಸರ್ಕಾರವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಇಂದು ಗೆಹ್ಲೋಟ್ ಮಂಡಿಸಿದ ವಿಶ್ವಾಸ ಮತ ಗೊತ್ತುವಳಿ ಪರ 125 ಮತಗಳು ದಾಖಲಾಗಿದ್ದರೆ, ಅವರ ವಿರುದ್ಧವಾಗಿ 75 ಮತಗಳು ಮಾತ್ರ ಚಲಾವಣೆಗೊಂಡವು.
ಕಾಂಗ್ರೆಸ್ ನ ಎಲ್ಲಾ ಬಂಡಾಯಗಾರರು ಸೇರಿ 107 ಸದಸ್ಯರು, 13 ಪಕ್ಷೇತರ ಶಾಸಕರು, ಸಿಪಿಎಂ ಇಬ್ಬರು ಸದಸ್ಯರು ಸೇರಿ ಒಟ್ಟು 125 ಮತಗಳು ಅಶೋಕ್ ಗೆಹ್ಲೋಟ್ ಪರವಾಗಿ ಮತ ಚಲಾಯಿಸಿದರು. ಹೀಗಾಗಿ ಒಂದು ತಿಂಗಳ ಕಾಲ ಅನಿಶ್ಚಿತತೆಯಲ್ಲಿದ್ದ ರಾಜಸ್ಥಾನ ಸರ್ಕಾರಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ.
Winning the trust vote in the Assembly is a message to the forces that are trying to destabilize elected govts in the country. Their every tactic failed in Rajasthan.
It is the people’s unwavering trust in us & unity of our Congress MLAs that has brought this victory.
— Ashok Gehlot (@ashokgehlot51) August 14, 2020
ರಾಜಸ್ಥಾನ ಸರ್ಕಾರ ಉರುಳಿಹೋಗುವ ಎಲ್ಲಾ ಲಕ್ಷಣಗಳಿದ್ದರೂ ಒಂದು ತಿಂಗಳಾಂತ್ಯದಲ್ಲಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಸರ್ಕಾರ ಸೇಫಾಗಿದೆ. ಗೆಹ್ಲೋಟ್ ವಿರುದ್ಧ ಬಂಡಾಯ ಎದ್ದಿದ್ದ ಸಚಿನ್ ಪೈಲಟ್ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯೊಂದಿಗೆ ಮಾತುಕತೆ ನಡೆಸಿದ ಬಳಿಕ ಬಂಡಾಯ ತಣ್ಣಗಾಗಿತ್ತು. ಇದು ಗೆಹ್ಲೋಟ್ ಗೆಲುವಿನ ಹಾದಿಯನ್ನು ಸುಗಮಗೊಳಿಸಿತ್ತು.
ಬಹುಜನ ಸಮಾಜ ಪಕ್ಷದ ಆರು ಸದಸ್ಯರನ್ನು ಕಾಂಗ್ರೆಸ್ ಸೇರ್ಪಡೆಗೆ ಒಪ್ಪಿಗೆ ನೀಡುವ ಸ್ಪೀಕರ್ ನಿರ್ಧಾರಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು. ರಾಜಸ್ಥಾನ ಹೈಕೋರ್ಟ್ ಕೂಡ ಅದೇ ಮಾರ್ಗವನ್ನು ಅನುಸರಿಸಿತ್ತು. ಆದರೆ ಇಂದು ವಿಶ್ವಾಸ ಮತ ಯಾಚಿಸಿದ ಗೆಹ್ಲೋಟ್ ಗೆಲುವು ಕಂಡರು. ಹಾಗಾಗಿ ಗೆಹ್ಲೋಟ್ ಸರ್ಕಾರ ಮುಂದಿನ ಅವಧಿ ಪೂರೈಸುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸೇರಿ 19 ಶಾಸಕರು ಬಂಡಾಯದ ಬಾವುಟ ಹಾರಿಸಿದ ಸಂದರ್ಭವನ್ನು ಬಳಸಿಕೊಂಡು ಸರ್ಕಾರ ರಚನೆಗೆ ಮುಂದಾಗಿದ್ದ ಬಿಜೆಪಿಗೆ ಮುಖಭಂಗ ಉಂಟಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ