ರಾತ್ರಿ ಕರ್ಫ್ಯೂ ಹಿಂಪಡೆದ ಸರ್ಕಾರ
ಸಿಎಂ ನೇತೃತ್ವದಲ್ಲಿ ಇಂದು ಕೋವಿಡ್ ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ನೈಟ್ ಕರ್ಫ್ಯೂ ರದ್ದು ಮಾಡಲು ನಿರ್ಧರಿಸಲಾಗಿದೆ. ಸೋಮವಾರದಿಂದ ಎಲ್ಲ ತರಗತಿಗಳು ಆರಂಭ ಮಾಡಲಾಗುವುದು . ಅಲ್ಲದೇ ಸಭೆಯಲ್ಲಿ ಹೋಟೆಲ್ ಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ತೀರ್ಮಾನಿಸಲಾಗಿದ್ದು, ಸಿನಿಮಾ ಹಾಲ್ಗಳನ್ನು 50:50 ರಷ್ಟು ಮುಂದುವರಿಸಲು, ಮದುವೆಗೆ 200 ಬದಲು 300 ಜನರು ಭಾಗವಹಿಸಲು ಅನುಮತಿ ನೀಡಲಾಗಿದೆ.
ಬೊಮ್ಮಾಯಿ ಸರ್ಕಾರದ ಸಾಧನೆಗೆ ಟೀಕೆ
ಬಣ್ಣ ಬಣ್ಣದ ಜಾಹಿರಾತು ಕೊಟ್ಟು ಸುಳ್ಳು ಹೇಳ್ತಾರೆ. ಎರಡೂವರೆ ವರ್ಷದಲ್ಲಿ ಏನೇನು ಮಾಡಿದ್ದಾರೆ. ಇದರ ಬಗ್ಗೆ ಅವರು ಹೇಳಬೇಕಿತ್ತು, ಹೇಳಿಲ್ಲ. ಕೋವಿಡ್ ಬಗ್ಗೆ ಹೇಳಿಕೆ ಮೇಲೆ ಹೇಳಿಕೆ ಕೊಡ್ತಾರೆ. ಎರಡನೇ ಅಲೆಯಲ್ಲಿ ಏನು ಕೊಟ್ರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ವೆಂಟಿಲೇಟರ್, ಆಕ್ಸಿಜನ್, ಮೆಡಿಸಿನ್ ಯಾವುದೂ ಕೊಡಲಿಲ್ಲ. ವೆಂಟಿಲೇಟರ್ ನೋಡಿಕೊಳ್ಳುವವರಿಲ್ಲ. ಖರೀದಿ ಮಾಡಿದ ವೆಂಟಿಲೇಟರ್ ಧೂಳು ಹಿಡಿದಿವೆ. ಮೂರೂವರೆ ಲಕ್ಷ ಜನ ಕೋವಿಡ್ ನಿಂದ ಸಾವನ್ನಪ್ಪಿದರು. ಇವರು ಸತ್ತವರ ಸಂಖ್ಯೆ ಹೇಳಿದ್ದು 38 ಸಾವಿರ ಮಾತ್ರ. ಇದೊಂದು ಸುಳ್ಳಿನ ಸರ್ಕಾರ ಎಂದು ಕಿಡಿಕಾರಿದರು
ಕಾಂಗ್ರೆಸ್ ವಿರುದ್ಧ ಮತ್ತೆ ಅಸಮಾಧಾನ ಹೊರ ಹಾಕಿದ ಇಬ್ರಾಹಿಂ
ಹುಬ್ಬಳ್ಳಿ - ಕಾಂಗ್ರೆಸ್ ಪಕ್ಷವನ್ನು ನಾನು ಬಿಡ್ತಿಲ್ಲ. ಕಾಂಗ್ರೆಸ್ಸೇ ನನ್ನನ್ನು ಬಿಟ್ಟಿದ್ದು, ಒಂದರ್ಥದಲ್ಲಿ ರೇಪ್ ಮಾಡಿಸಿಕೊಂಡವರ ಸ್ಥಿತಿ ನನ್ನದಾಗಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ನಾಯಕರು, ಹೈಕಮಾಂಡ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಬಿಟ್ಟು, ಜೆಡಿಎಸ್ ಸೇರುವ ಹೊಸ್ತಿಲಲ್ಲಿರೋ ಇಬ್ರಾಹಿಂ, ತಮ್ಮ ಸೀನಿಯಾರಿಟಿಗೆ ಬೆಲೆ ಸಿಗದೇ ಇರೋ ಕಡೆ ನಾನಿರೋಲ್ಲ ಎಂದು ದೃಢವಾದ ನಿರ್ಧಾರ ಪ್ರಕಟಿಸಿದ್ದಾರೆ.
8 ನಿಮಿಷದಲ್ಲಿ ತಿಮ್ಮಪ್ಪನ ಸರ್ವದರ್ಶನದ ಟಿಕೆಟ್ ಖಾಲಿ
ತಿಮ್ಮಪ್ಪನ ದರ್ಶನಕ್ಕೆ ಭಕ್ತರ ಬೇಡಿಕೆ ಹೇಗಿರುತ್ತದೆ ಎಂದರೇ ಈ ಆನ್ಲೈನ್ ಟಿಕೆಟ್ಗಳು ಕೆಲವೇ ಗಂಟೆಗಳಲ್ಲಿ ಖಾಲಿಯಾಗಿ ದಾಖಲೆ ಸೃಷ್ಟಿಸಿದೆ. ಈ ಬಾರಿ ಕೂಡ ಅದೇ ರೀತಿ ದಾಖಲೆ ನಿರ್ಮಿಸಲಾಗಿದೆ. 2022ರ ಫೆಬ್ರವರಿ ಸೇವೆಗಾಗಿ ಟಿಡಿಟಿ ಶುಕ್ರವಾರ ಅಂದರೆ 2022 ಜನವರಿ 28ರಂದು ಟಿಕೆಟ್ ಬುಕ್ಕಿಂಗ್ಗೆ ತೆರೆದಿರುವುದಾಗಿ ತಿಳಿಸಿತು. ಶುಕ್ರವಾರ 300 ರೂಪಾಯಿಯ ವಿಶೇಷ ದರ್ಶನ ಟಿಕೆಟ್ ಅನ್ನು ಡಿಟಿಡಿ ಬಿಡುಗಡೆ ಮಾಡಿತು. ಈ ಟಿಕೆಟ್ 40 ನಿಮಿಷಗಳಲ್ಲಿ ಪೂರ್ಣಗೊಂಡಿದೆ. ಈ ಟಿಕೆಟ್ ಅಡಿ ದಿನಕ್ಕೆ 12 ಸಾವಿರದಂತೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ಇದರೊಂದಿಗೆ 40 ನಿಮಿಷಗಳಲ್ಲಿ 3 ಲಕ್ಷದ 36 ಸಾವಿರ ಟಿಕೆಟ್ಗಳು ಬುಕ್ ಆಗಿವೆ. ಇನ್ನು ಇಂದು ಬೆಳಗ್ಗೆ 9 ಗಂಟೆಗೆ ಟಿಟಿಡಿ ಸರ್ವದರ್ಶನ ಟೋಕನ್ಗಳನ್ನು ಬಿಡುಗಡೆ ಮಾಡಿದೆ. ಇವುಗಳು ಕೇವಲ 8 ನಿಮಿಷಗಳಲ್ಲಿ ಬುಕ್ ಆಗಿವೆ.
ಎಸ್ಬಿಐಗೆ ನೋಟಿಸ್ ಜಾರಿ ಮಾಡಿದ ದೆಹಲಿ ಮಹಿಳಾ ಆಯೋಗ
ದೇಶದ ಅತಿದೊಡ್ಡ ಬ್ಯಾಂಕಿಂಗ್ ಸೇವೆ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಮಹಿಳಾ ವಿರೋಧ ನಿಯಮ ಹೊಂದುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದೆ. ಮೂರು ತಿಂಗಳಿಗೂ ಹೆಚ್ಚಿನ ಗರ್ಭಿಣಿಯರನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಪರಿಗಣಿಸಿ ಅವರನ್ನು ಹೆರಿಗೆಯಾದ ನಾಲ್ಕು ತಿಂಗಳ ಒಳಗೆ ಕೆಲಸಕ್ಕೆ ಸೇರ್ಪಡೆಗೊಳಿಸಲಾಗುವುದು ಎಂಬ ಹೊಸ ನಿಯಮ ಜಾರಿಗೆ ತಂದಿದೆ. ಗರ್ಭಿಣಿಯರ ಕುರಿತು ಜಾರಿ ಮಾಡಿರುವ ನೂತನ ನಿಯಮಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗಿದ್ದು, ಈ ಸಂಬಂಧ ದೆಹಲಿ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಇದಕ್ಕೆ ಮಂಗಳವಾರದೊಳಗೆ ಉತ್ತರಿಸುವಂತೆ ಗಡುವು ನೀಡಿದೆ.
ಸಿದ್ದರಾಮಯ್ಯ ಎಲ್ಲವನ್ನು ಹಳದಿ ಕಣ್ಣಿಂದ ನೋಡುತ್ತಾರೆ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಎಲ್ಲ ವಿಚಾರಕ್ಕೂ ರಿಯಾಕ್ಷನ್ ಕೊಡಬೇಕು ಎಂಬ ಚಟ ಇದೆ, ಇಲ್ಲಿದ್ದರೆ ಅವರಿಗೆ ಸಮಾಧಾನ ವಿರಲ್ಲ. ಸರ್ಕಾರ ಏನೂ ಸಾಧನೆ ಮಾಡಿಲ್ಲ ಅಂತಾರೆ, ಅವರಿಗೆ ನಾನು ಮಾಡಿದ್ದು ಮಾತ್ರ ಸರಿ ಎಂಬ ಭಾವನೆ ಇದೆ. ಅಲ್ಲದೇ, ಅವರಿಗೆ ಹೆಚ್ಚು ಬಜೆಟ್ ಮಂಡನೆ ಮಾಡಿದ್ದೇನೆಂಬ ಅಹಂ ಇದೆ. ಅವರು ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡ್ತಾರೆ ಎಂದು ಸಿದ್ಧರಾಮಯ್ಯ ವಿರುದ್ಧ ಕಂದಾಯ ಸಚಿವ ಆರ್. ಅಶೋಕ್ ವಾಗ್ಧಾಳಿ ನಡೆಸಿದ್ದಾರೆ.
Published by:Seema R
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ