Evening Digest: ರಷ್ಯಾ ದಾಳಿಗೆ ಕನ್ನಡಿಗ ಬಲಿ: ಸುದ್ದಿ ತಿಳಿಸುವಾಗ ಭಾವುಕರಾದ ಸಿಎಂ ಬೊಮ್ಮಾಯಿ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ರಷ್ಯಾ ದಾಳಿಗೆ ಕನ್ನಡಿಗ ಬಲಿ: ಭಾರತೀಯರ ಪಾಲಿಗೆ ಆಘಾತಕಾರಿ ಸುದ್ದಿ ಹೊರ ಬಿದ್ದಿದೆ. ಇಂದು ಬೆಳಗ್ಗೆ ಖಾರ್ಕಿವ್‌ನಲ್ಲಿ ನಡೆದ ರಷ್ಯಾದ ಶೆಲ್ ದಾಳಿಗೆ ಭಾರತೀಯ ವಿದ್ಯಾರ್ಥಿ ಬಲಿಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ಮೃತ ವಿದ್ಯಾರ್ಥಿ ನಮ್ಮ ರಾಜ್ಯದ ಹಾವೇರಿ ಜಿಲ್ಲೆಯ ನವೀನ್​ (21) ಆಗಿದ್ದು (Haveri Medical Student Naveen), ರಾಜ್ಯದ ಪಾಲಿಗೆ ದುಃಖಕರವಾಗಿದೆ. ಮೃತ ನವೀನ್ ಸ್ನೇಹಿತ ಉಕ್ರೇನ್​ ನಲ್ಲಿರುವ ವಿದ್ಯಾರ್ಥಿ ಯಶ್ವಂತ್ ರೆಡ್ಡಿ ನ್ಯೂಸ್‌ 18ಗೆ ಮಾಹಿತಿ ನೀಡಿದ್ದು, ನನ್ನ ಗೆಳೆಯ ನವೀನ್​ ಮೃತಪಟ್ಟಿದ್ದಾನೆ. ಕಾರ್ಕೀವ್‌ನಲ್ಲಿ ನನಗೆ ಜಾಕೆಟ್ ಎಲ್ಲ ಕೊಟ್ಟು ನನ್ನ ಪ್ರಾಣ ಉಳಿಸಿದ್ದು ನವೀನ್. ಈಗ ಅವನೇ ಸಾವಿನ ಮನೆ ಸೇರಿದ್ದಾನೆ. ತುಂಬಾ ಬೇಸರ ಆಗ್ತಿದೆ, ಒಂದು ಪ್ರಾಣ ಹೋಯ್ತು. ನವೀನ್ ತುಂಬಾ ಒಳ್ಳೆಯವನು, ನಾವೆಲ್ಲರೂ ಒಟ್ಟಿಗೆ ಇದ್ವಿ ಎಂದು ಕಣ್ಣೀರಿಟ್ಟಿದ್ದಾರೆ.

ಸುದ್ದಿ ತಿಳಿಸುವಾಗ ಭಾವುಕರಾದ ಸಿಎಂ ಬೊಮ್ಮಾಯಿ

ನವೀನ್ ತಂದೆ ಜೊತೆ ‌ಮಾತಾಡಿದ್ದೇನೆ. ಅವ್ರು ನಮಗೆ ಬಹಳ ಬೇಕಾದ ಕುಟುಂಬ. ಅವ್ರ ಕಸೀನ್ ಬ್ರದರ್ ದುಬೈ ನಲ್ಲಿ ಇದ್ದಾರೆ ಅವ್ರು ನನಗೆ ಸ್ನೇಹಿತರು. ವಿದೇಶಾಂಗ ಇಲಾಖೆ ಸಚಿವರ ಜೊತೆ ಮಾತಾಡಿದ್ದೇನೆ. ಮೃತದೇಹ ಹಸ್ತಾಂತರದ ಬಗ್ಗೆ ಚರ್ಚೆ ಮಾಡಿದ್ದೇನೆ. ಸದ್ಯ ಅಲ್ಲಿ ವಾರ್ ಝೋನ್ ಇದೆ. ಹೀಗಾಗಿ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಇಲ್ಲ. ಅದರಲ್ಲವನ್ನ ಪರಿಶೀಲಿಸಿ ಬಾಡಿ ತರಲು ಸಾಧ್ಯವಾ ನೋಡ್ತೀವಿ. ಪ್ರಧಾನಿ ಕಚೇರಿಗೂ ಮಾತಾಡಿದ್ದೇನೆ. ಪ್ರಧಾನಿ ಮೋದಿ ಅವರು ನವೀನ್​​ ಅವರ ಕುಟುಂಬದ ಜೊತೆ ಮಾತಾಡಿದ್ದಾ.ರೆ ಎಲ್ಲಾ ವಿವರ ‌ಪ್ರಧಾನಿ ಕಚೇರಿಗೆ ನಾನೇ ನೀಡಿದ್ದೇನೆ. ಸದ್ಯಕ್ಕೆ ಆಗದೇ ಹೋದ್ರು 2-3 ದಿನಕ್ಕೆ ಬಾಡಿ ತರಲು ಸಾಧ್ಯವೇ ಚರ್ಚೆ ಮಾಡಿದ್ದೇನೆ. ರಾಯಭಾರಿ ಕಚೇರಿ ಜೊತೆ ಈ‌ ಬಗ್ಗೆ ಮಾತಾಡಿದ್ದೇನೆ. ಈ ವೇಳೆ ಭಾವುಕರಾಗಿ ಅರ್ಧಕ್ಕೆ ಮಾತು ನಿಲ್ಲಿಸಿ ಸಿಎಂ ಬೊಮ್ಮಾಯಿ ಹೊರಟು ಹೋದರು.

ನವೀನ್​ ತಂದೆಗೆ ಕರೆ ಮಾಡಿದ ಪ್ರಧಾನಿ ಮೋದಿ

ಉಕ್ರೇನ್​​ ನಲ್ಲಿ ಹತನಾಗಿರುವ ಭಾರತೀಯ ವಿದ್ಯಾರ್ಥಿ ನವೀನ್​ ಅವರ ತಂದೆಗೆ ಖುದ್ದು ಪ್ರಧಾನಿ ಮೋದಿ ಕರೆ ಮಾಡಿ ಸಂತಾಪಗಳನ್ನು ತಿಳಿಸಿದ್ದಾರೆ. ನೋವು ಭರಿಸುವ ಶಕ್ತಿ ದೇವರು ನೀಡಲಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಮೋದಿ ನವೀನ್​ ತಂದೆ ಶೇಖರಗೌಡಗೆ ಧೈರ್ಯ ತುಂಬಿದ್ದಾರೆ. ಇಂದು ಬೆಳಗ್ಗೆ ಖಾರ್ಕಿವ್‌ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಶೆಲ್ ದಾಳಿಯಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ ಎಂದು ತಿಳಿಸಲು ವಿಷಾದಿಸುತ್ತೇವೆ. ಸಚಿವಾಲಯವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ  ಅರಿಂದಮ್ ಬಾಗ್ಚಿ ಟ್ವೀಟ್​​ ಮಾಡಿದ್ದಾರೆ.

ಸರ್ಕಾರದ ವಿರುದ್ಧ ವಿಪಕ್ಷಗಳ ಕಿಡಿ

ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಕೂಡ ನವೀನ್​ ಸಾವಿಗೆ ಸಂತಾಪ ಸೂಪಿಸಿದ್ದಾರೆ. ಹಲವು ಕನಸುಗಳನ್ನು ಹೊತ್ತ ಯುವ ವೈದ್ಯಕೀಯ ವಿದ್ಯಾರ್ಥಿಯನ್ನು ಹೊತ್ತ ಆತ ಪ್ರಯಣಕ್ಕೆ ಬಿಜೆಪಿ ಇತಿಶ್ರೀ ಹಾಡಿದೆ. ಯುದ್ಧ ಆರಂಭಕ್ಕೂ ಮುನ್ನವೇ ರಷ್ಯಾ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡುವಂತೆ ಎಚ್ಚರಿಕೆ ನೀಡಿತ್ತು. ಆದರೆ, ಸರ್ಕಾರದ ನಿರ್ಲಕ್ಷ್ಯಕ್ಕೆ ನವೀನ್​ ಬೆಲೆತರುವಂತೆ ಆಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಷ್ಯಾ ದಾಳಿಯಿಂದ ಕನ್ನಡಿಗ ವಿದ್ಯಾರ್ಥಿ ಸಾವನ್ನಪ್ಪಿರುವ ಸುದ್ದಿ ಶಿವರಾತ್ರಿ ದಿನ ಬರಸಿಡಿಲಿನಂತೆ ಅಪ್ಪಳಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ನವೀನ್‌ ಅವರ ಪಾರ್ಥೀವ ಶರೀರವನ್ನು ಆದಷ್ಟು ಬೇಗ ಅವರ ಕುಟುಂಬಕ್ಕೆ ತಲುಪಿಸುವ ಕೆಲಸ ಸರಕಾರದಿಂದ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಮತ್ತೆ ಬಂದ್?

ಮುಂದಿನ ಸೂಚನೆ ಬರುವವರೆಗೆ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನಗಳನ್ನು (International Flights) ಸ್ಥಗಿತಗೊಳಿಸಲಾಗುವುದು ಎಂದು ಏವಿಯೇಷನ್ ರೆಗ್ಯುಲೇಟರ್ ಡೈರೆಕ್ಟೋರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಪ್ರಕಟಿಸಿದೆ. ಅದೇ ಅಧಿಸೂಚನೆಯಲ್ಲಿ, ಡಿಜಿಸಿಎ ಅಂತಾರಾಷ್ಟ್ರೀಯ ಎಲ್ಲಾ ಸರಕು ಕಾರ್ಯಾಚರಣೆಗಳಿಗೆ (CARGO Flights) ಮತ್ತು ಪ್ರಾಧಿಕಾರದಿಂದ ನಿರ್ದಿಷ್ಟವಾಗಿ ಅನುಮೋದಿಸಲಾದ ವಿಮಾನಗಳಿಗೆ ಈ ಸೂಚನೆ ಅನ್ವಯಿಸುವುದಿಲ್ಲ ಎಂದು ಸುತ್ತೋಲೆ ಹೊರಡಿಸಿದೆ. ಕೊರೊನಾ ಲಾಕ್‌ಡೌನ್‌ (Covid 19 Lockdown) ಸಂದರ್ಭದಲ್ಲಿ ದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನವನ್ನು ನಿರ್ಬಂಧ ಮಾಡಲಾಗಿತ್ತು. ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ಮೇಲಿನ ನಿರ್ಬಂಧಗಳು ಫೆಬ್ರವರಿ 28ಕ್ಕೆ ಕೊನೆಗೊಳ್ಳಬೇಕಿತ್ತು. ಆದರೆ ಇದೀಗ ಮತ್ತೆ ಗಡುವನ್ನು ವಿಸ್ತರಿಸಲಾಗಿದೆ. ಇದಕ್ಕೂ ಮುನ್ನ, ಡಿಜಿಸಿಎ ಫೆಬ್ರವರಿ 28ರವರೆಗೆ ಅಂತರಾಷ್ಟ್ರೀಯ ವಿಮಾನಗಳ ಮೇಲಿನ ನಿಷೇಧದ ವಿಸ್ತರಣೆಯನ್ನು ಘೋಷಿಸಿತ್ತು. ಕೊರೊನಾ ವೈರಸ್ ಸಾಂಕ್ರಾಮಿಕ ಕಾರಣದಿಂದಾಗಿ ಮಾರ್ಚ್ 23, 2020ರಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ
Published by:Kavya V
First published: