ನನ್ನ ತಾಯಿ ಹುಟ್ಟು ದಿನ ನನಗೇ ಗೊತ್ತಿಲ್ಲ, ಎನ್​ಪಿಆರ್​ ಫಾರ್ಮ್​ನಿಂದ ವಿವಾದಾತ್ಮಕ ಷರತ್ತುಗಳನ್ನು ಕೈಬಿಡಿ; ನಿತೀಶ್ ಕರೆ

ನನ್ನ ತಾಯಿ ಯಾವಾಗ ಜನಿಸಿದರು ಎಂಬುದು ನನಗೆ ಗೊತ್ತಿಲ್ಲ. ಹೀಗಾಗಿ ಎನ್ಆರ್​ಸಿಯನ್ನು ಜಾರಿಗೆ ತರುವ ಅಗತ್ಯವಿಲ್ಲ ಎಂದು ನಿತೀಶ್ ಕುಮಾರ್ ಬಿಹಾರ ವಿಧಾನಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

MAshok Kumar | news18-kannada
Updated:February 25, 2020, 5:22 PM IST
ನನ್ನ ತಾಯಿ ಹುಟ್ಟು ದಿನ ನನಗೇ ಗೊತ್ತಿಲ್ಲ, ಎನ್​ಪಿಆರ್​ ಫಾರ್ಮ್​ನಿಂದ ವಿವಾದಾತ್ಮಕ ಷರತ್ತುಗಳನ್ನು ಕೈಬಿಡಿ; ನಿತೀಶ್ ಕರೆ
ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​.
  • Share this:
ಪಾಟ್ನಾ (ಫೆಬ್ರವರಿ 25); ರಾಷ್ಟ್ರದಾದ್ಯಂತ ಏಪ್ರಿಲ್.1 ರಿಂದ ಎನ್​ಪಿಆರ್​ ಕೆಲಸಗಳು ಆರಂಭವಾಗಲಿದ್ದು, ಈ ನಮೂನೆಯಲ್ಲಿರುವ ವಿವಾದಾತ್ಮಕ ಷರತ್ತುಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ಬಿಹಾರದ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

"ನನ್ನ ತಾಯಿ ಯಾವಾಗ ಜನಿಸಿದರು ಎಂಬುದು ನನಗೆ ಗೊತ್ತಿಲ್ಲ. ಹೀಗಾಗಿ ಎನ್ಆರ್​ಸಿಯನ್ನು ಜಾರಿಗೆ ತರುವ ಅಗತ್ಯವಿಲ್ಲ" ಎಂದು ನಿತೀಶ್ ಕುಮಾರ್ ಬಿಹಾರ ವಿಧಾನಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಸಿಎಎ ಮತ್ತು ಎನ್ಆರ್​ಸಿಯನ್ನು ಬಿಹಾರದಲ್ಲಿ ವಿರೋಧ ಪಕ್ಷಗಳು ಈಗಾಗಲೇ "ಕಪ್ಪು ಕಾನೂನು" ಎಂದು ಹೀಗೆಳೆಯುತ್ತಾ ಬಿಜೆಪಿಯ ವಿರುದ್ಧ ಮುಗಿಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರದ ವಿಧಾನಸಭೆಯಲ್ಲಿ ಎನ್ಆರ್​ಸಿ ಕುರಿತು ಹೀಗೊಂದು ಹೇಳಿಕೆ ನೀಡಿರುವುದು ಕಮಲ ಪಾಳಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪರಿಣಾಮ ಬಿಜೆಪಿ ನಾಯಕರು ಅಸಮಾಧಾನ ತೋಡಿಕೊಂಡರೆ ಸಿಎಎ ಕುರಿತ ಚರ್ಚೆಗೆ ವಿರೋಧ ಪಕ್ಷಗಳು ಒತ್ತಾಯಿಸಿದವು.

ಆದರೆ, ಪ್ರಶ್ನಾವಳಿ ಸಂದರ್ಭದಲ್ಲಿ ಸಿಎಎ-ಎನ್ಆರ್​​ಸಿ ಕುರಿತು ಚರ್ಚೆ ನಡೆಸುವುದು ಸರಿಯಲ್ಲ. ಇನ್ನೂ ಮಧ್ಯಾಹ್ನ 2 ಗಂಟೆಗೆ ಬಜೆಟ್ ಮಂಡನೆ ಇದ್ದು ಇದಕ್ಕೆ ಅನುವು ಮಾಡಿಕೊಡಿ. ಮುಂದಿನ ಅಧಿವೇಶನದಲ್ಲಿ ಸಿಎಎ-ಎನ್ಆರ್​ಸಿ ಕುರಿತು ವಿಸ್ಕೃತ ಚರ್ಚೆ ನಡೆಸೋಣ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರೋಧ ಪಕ್ಷಗಳ ಬಳಿ ಮನವಿ ಮಾಡಿಕೊಂಡರು.

ಆದರೆ, ನಿತೀಶ್ ಕುಮಾರ್ ಮಾತಿಗೆ ಟಾಂಗ್ ನೀಡಿದ್ದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, “ಕಳೆದ ತಿಂಗಳು ಕರೆಯಲ್ಪಟ್ಟ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು "ಮುಂದಿನ ಅಧಿವೇಶನ" ದಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ದುರಾದೃಷ್ಟವಶಾತ್ ಈ ಅಧಿವೇಶನದಲ್ಲೂ ಅದೇ ಆಶ್ವಾಸನೆ ನೀಡುತ್ತಿದ್ದಾರೆ” ಎಂದು ಸರ್ಕಾರದ ಕಾಲೆಳೆದರು.

ಆದರೂ ಸ್ಪೀಕರ್ ವಿಜಯ್ ಕುಮಾರ್ ಚೌಧರಿ ಸಿಎಎ ಚರ್ಚೆಗೆ ಅನುವು ಮಾಡಿಕೊಡದೆ ಸದನ ಮುಂದೂಡಿಕೆ ನಿರ್ಣಯವನ್ನು ಅಂಗೀಕರಿಸಿದರು. ಈ ವೇಳೆ ಪ್ರತಿಪಕ್ಷಗಳು "ಕಪ್ಪು ಕಾನೂನು" ಎಂದು ಘೋಷಣೆ ಕೂಗಲು ಆರಂಭಿಸಿದ್ದರು. ಆದರೆ, ಇದನ್ನು ಬಿಜೆಪಿ ಮಂತ್ರಿಗಳಾದ ನಂದ್ ಕಿಶೋರ್ ಯಾದವ್ ಮತ್ತು ವಿಜಯ್ ಕುಮಾರ್ ಸಿನ್ಹಾ ತೀವ್ರವಾಗಿ ಆಕ್ಷೇಪಿಸಿದರು. ಅಲ್ಲದೆ, "ಸಂಸತ್ತು ಕಪ್ಪು ಕಾನೂನನ್ನು ಅಂಗೀಕರಿಸುತ್ತದೆಯೇ?" ಎಂದು ವಿರೋಧ ಪಕ್ಷವನ್ನು ಪ್ರಶ್ನಿಸಿದರು.

ಈ ವೇಳೆ ಎರಡೂ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಎರಡೂ ಕಡೆಯ ಸದಸ್ಯರು ಬಾವಿಗೆ ಇಳಿದು ಪ್ರತಿಭಟಿಸಲು ಮುಂದಾದರು. ಪರಿಣಾಮ ಸಭೆಯನ್ನು 15 ನಿಮಿಷಗಳ ಕಾಲ ಮುಂದೂಡಲಾಗಿತ್ತು.ಇದನ್ನೂ ಓದಿ : ಓಪನ್ ಕೋರ್ಟ್​ನಲ್ಲಿ ಅಮೂಲ್ಯಾಳನ್ನು ಹಾಜರುಪಡಿಸುವುದು ಅಸಾಧ್ಯ; ಡಿಸಿಪಿ ರಮೇಶ್ ಬಾನೋತ್ ಮನವಿ
First published:February 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ