ನವ ದೆಹಲಿ (ಜೂನ್ 24); ಕೊರೋನಾ ಎರಡನೇ ಅಲೆಯಿಂದ ಕಂಗೆಟ್ಟಿರುವ ಎಲ್ಲಾ ರಾಜ್ಯ ಸರ್ಕಾರಗಳು ಯುವಕರ ಹಾಗೂ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ 12ನೇ ತರಗತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಿವೆ. ಆದರೆ, ಆಂಧ್ರಪ್ರದೇಶ ಸರ್ಕಾರ ಮಾತ್ರ ವಿಭಿನ್ನವಾಗಿ ಮುಂದಿನ ತಿಂಗಳು 12ನೇ ತರಗತಿ ಪರೀಕ್ಷೆ ನಡೆಸಿಯೇ ಸಿದ್ದ ಎಂದು ಪರೀಕ್ಷೆ ನಡೆಸುವ ಕೆಲಸಕ್ಕೆ ಮುಂದಾಗಿದೆ. ಆದರೆ, ಆಂಧ್ರಪ್ರದೇಶದ ಜಗನ್ಮೋಹನ್ ರೆಡ್ಡಿ ಸರ್ಕಾರದ ಈ ನಡೆಗೆ ಕಿಡಿಕಾರಿರುವ ಸುಪ್ರೀಂ ಕೋರ್ಟ್, "12ನೇ ತರಗತಿ ಪರೀಕ್ಷೆ ನಡೆಸಿ ಈ ಸಂದರ್ಭದಲ್ಲಿ ಒಂದೇ ಒಂದು ವಿದ್ಯಾರ್ಥಿ ಕೊರೋನಾಗೆ ಬಲಿಯಾದರೂ ಸಹ ಆಂಧ್ರಪ್ರದೇಶ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲಾಗುವುದು, ಅಲ್ಲದೆ ಮೃತ ವಿದ್ಯಾರ್ಥಿಯ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕಾಗುತ್ತದೆ" ಎಂದು ಸುಪ್ರೀಂ ಕೋರ್ಟ್ ಇಂದು ಎಚ್ಚರಿಕೆ ನೀಡಿದೆ.
ಆಂಧ್ರಪ್ರದೇಶ 12ನೇ ತರಗತಿ ಪರೀಕ್ಷೆ ನಡೆಸಲು ಮುಂದಾಗಿರುವ ನಿರ್ಣಯವನ್ನು ಖಂಡಿಸಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇಂದು ಈ ಅರ್ಜಿಯ ವಿಚಾರಣೆಗೆ ಮುಂದಾದ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, "ಇತರೆ ರಾಜ್ಯಗಳ ಪರೀಕ್ಷಾ ಮಂಡಳಿಗಳು ನೆಲದ ವಾಸ್ತವತೆಯ ಆಧಾರದ ಮೇಲೆ ಪ್ರಜ್ಞಾಪೂರ್ವಕವಾಗಿ ಪರೀಕ್ಷೆಗಳನ್ನು ನಡೆಸದಿರುವ ನಿರ್ಧಾರವನ್ನು ತೆಗೆದುಕೊಂಡಿವೆ.
ಈ ನಡುವೆ ಹೊಸ ರೂಪಾಂತರವಾದ 'ಡೆಲ್ಟಾ ಪ್ಲಸ್' ಸೋಂಕು ಭಯದ ವಾತಾವರಣ ನಿರ್ಮಾಣ ಮಾಡಿದೆ. ಈ ಸೋಂಕು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಎಂಬುದು ಯಾರಿಗೂ ಸ್ಪಷ್ಟವಾಗಿಲ್ಲ. ಇಂತಹ ಸಂದರ್ಭದಲ್ಲಿ 12ನೇ ತರಗತಿ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ಯಾರು ತೆಗೆದುಕೊಂಡರು ಮತ್ತು ಯಾವ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ? " ಎಂದು ನ್ಯಾಯಾಧೀಶರು ಕಟು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
"ಇದು ಪ್ರತಿಯೊಬ್ಬರ ಆರೋಗ್ಯದ ಪ್ರಶ್ನೆಯಾಗಿದೆ, ಪರೀಕ್ಷೆಗಳನ್ನು ನಡೆಸುವುದು ಮಾತ್ರವಲ್ಲ. ನಿಮ್ಮ ಯೋಜನೆಯ ಬಗ್ಗೆ ನಮಗೆ ಮನವರಿಕೆಯಾಗುತ್ತಿಲ್ಲ. ಹೀಗಾಗಿ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಂಡ ವ್ಯಕ್ತಿ ಅಥವಾ ಸರ್ಕಾರಿ ಸಂಸ್ಥೆಯನ್ನು ಗುರುತಿಸಿ ನ್ಯಾಯಾಲಯಕ್ಕೆ ವರದಿ ನೀಡಿ" ಎಂದು ನ್ಯಾಯಾಲಯವು ಆಂಧ್ರಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈ ಮುಂಚೆಯೇ ಆಂಧ್ರಪ್ರದೇಶ ಸರ್ಕಾರ ಹೈದ್ರಾಬಾದ್ ಉಚ್ಛ ನ್ಯಾಯಾಲಯಕ್ಕೆ 12ನೇ ತರಗತಿ ಪರೀಕ್ಷೆ ನಡೆಸುವ ಬಗ್ಗೆ ಅಫಿಡವಿಟ್ ಸಲ್ಲಿಸಿತ್ತು. ಈ ಅಫಿಡವಿಟ್‌ನಲ್ಲಿ, "ಬೇರೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಸರ್ಕಾರ 12ನೇ ತರಗತಿ ಅಂತಿಮ ಪರೀಕ್ಷೆಗಳನ್ನು ನಡೆಸಲು ಮುಂದಾಗಿದ್ದೇವೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಸುಧಾರಿತ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳನ್ನು ನಡೆಸಲಾಗುವುದು.
ಶಾಲೆಗಳ ಆಂತರಿಕ ಅಂಕಗಳ ಮೇಲೆ ರಾಜ್ಯ ಶಿಕ್ಷಣ ಮಂಡಳಿಗೆ ಯಾವುದೇ ನಿಯಂತ್ರಣವಿಲ್ಲ. ಇತರ ರಾಜ್ಯಗಳು ಪರ್ಯಾಯ ಮೌಲ್ಯಮಾಪನ ವ್ಯವಸ್ಥೆಯನ್ನು ಆಧಾರವಾಗಿ ತೆಗೆದುಕೊಂಡಿವೆ - ಮತ್ತು ಆಂತರಿಕ ಮೌಲ್ಯಮಾಪನಗಳು 12 ನೇ ತರಗತಿ ಫಲಿತಾಂಶಗಳನ್ನು ಘೋಷಿಸುವಷ್ಟು ನಿಖರವಾಗಿಲ್ಲದಿರಬಹುದು. ಹೀಗಾಗಿ ನಾವು ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ" ಎಂದು ಆಂಧ್ರಪ್ರದೇಶ ಸರ್ಕಾರ ಅಫಿಡವಿಟ್‌ನಲ್ಲಿ ತಿಳಿಸಿದೆ.
ಅಲ್ಲದೆ, ಅಫಿಡವಿಟ್‌ನಲ್ಲಿ ಪರೀಕ್ಷೆಗಳನ್ನು ನಡೆಸಲು ಎಷ್ಟು ಕೊಠಡಿಗಳಿವೆ ಎಂಬ ವಿವರಗಳನ್ನೂ ಉಲ್ಲೇಖಿಸಲಾಗಿದೆ. ಸಾಮಾಜಿಕ ದೂರ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು 15 ರಿಂದ 18 ವಿದ್ಯಾರ್ಥಿಗಳನ್ನು ಕೋಣೆಯಲ್ಲಿ ಕೂರಿಸಲಾಗುವುದು ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ