ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ 2020-21ರ ಹಣಕಾಸು ವರ್ಷಕ್ಕೆ ಭವಿಷ್ಯ ನಿಧಿ ಠೇವಣಿಗಳ ಬಡ್ಡಿದರವನ್ನು ಮಾರ್ಚ್ 4 ರಂದು ಘೋಷಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಕೇಂದ್ರ ಮಂಡಳಿಯ ಟ್ರಸ್ಟಿಗಳು (ಸಿಬಿಟಿ) ಶ್ರೀನಗರದಲ್ಲಿ ಸಭೆ ಸೇರಲಿದ್ದು, ಈ ವೇಳೆ ಬಡ್ಡಿದರವನ್ನು ಪ್ರಕಟಿಸುವ ಪ್ರಸ್ತಾಪವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ಪಿಟಿಐ ವರದಿ ತಿಳಿಸಿದೆ.
ಮುಂದಿನ ಸಿಬಿಟಿ ಸಭೆ ಮಾರ್ಚ್ 4 ರಂದು ಶ್ರೀನಗರದಲ್ಲಿ ನಡೆಯಲಿದೆ ಎಂದು ಸೋಮವಾರ ಮಾಹಿತಿ ನೀಡಿದ್ದು, ಅಜೆಂಡಾ ಪತ್ರಿಕೆಗಳನ್ನು ಶೀಘ್ರದಲ್ಲೇ ಕಳುಹಿಸುವ ಸಾಧ್ಯತೆಯಿದೆ ಎಂದು ಇಪಿಎಫ್ಒ ಟ್ರಸ್ಟಿ ಕೆ.ಇ. ರಘುನಾಥನ್ ತಿಳಿಸಿದ್ದಾರೆ. ಆದರೆ, ಸಭೆ ಬಗ್ಗೆ ಕಳಿಸಿರುವ ಮೇಲ್ನಲ್ಲಿ 2020-21ರ ಆರ್ಥಿಕ ವರ್ಷದ ಬಡ್ಡಿದರದ ಕುರಿತು ಚರ್ಚೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಅವರು ಹೇಳಿದರು.
ಕೋವಿಡ್ 19 ಪಿಡುಗು ಹಿನ್ನೆಲೆ ಈ ಹಣಕಾಸಿನ ಅವಧಿಯಲ್ಲಿ ಹೆಚ್ಚಿನ ಹಣ ಹಿಂಪಡೆಯುವಿಕೆ ಮತ್ತು ಸದಸ್ಯರ ಕಡಿಮೆ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು, ಈ ಹಣಕಾಸು ವರ್ಷದಲ್ಲಿ (2020-21) ಇಪಿಎಫ್ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2019-20ರಲ್ಲಿ ಒದಗಿಸಿದ ಶೇಕಡಾ 8.5ಕ್ಕಿಂತ ಕಡಿಮೆಗೊಳಿಸಬಹುದು ಎಂಬ ಊಹಾಪೋಹಗಳು ಹೆಚ್ಚಾಗಿದೆ.
ಇದನ್ನೂ ಓದಿ: Crime News: ಮುಂಬೈ ಬಳಿ 13 ವರ್ಷದ ಬಾಲಕಿ ಮೇಲೆ ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ
ಕಳೆದ ವರ್ಷ ಮಾರ್ಚ್ನಲ್ಲಿ ಇಪಿಎಫ್ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು 2019-20ರಲ್ಲಿ ಏಳು ವರ್ಷಗಳ ಕನಿಷ್ಠ 8.5 ಕ್ಕೆ ಇಳಿಸಿತ್ತು. 2018-19ರಲ್ಲಿ ಬಡ್ಡಿ ದರ ಶೇ 8.65 ರಷ್ಟಿತ್ತು. 2019-20ರಲ್ಲಿ ಒದಗಿಸಲಾದ ಇಪಿಎಫ್ (ನೌಕರರ ಭವಿಷ್ಯ ನಿಧಿ) ಬಡ್ಡಿದರವು 2012-13ರ ನಂತರ ಕಡಿಮೆ ಪ್ರಮಾಣವಾಗಿದ್ದು, ಅದು ಶೇಕಡಾ 8.5 ರಷ್ಟಿತ್ತು.
ಇಪಿಎಫ್ಒ ತನ್ನ ಚಂದಾದಾರರಿಗೆ 2016-17ನೇ ಸಾಲಿಗೆ ಶೇ 8.65 ರಷ್ಟು ಬಡ್ಡಿದರವನ್ನು ನೀಡಿದ್ದು, 2017-18ರಲ್ಲಿ ಶೇ .8.55 ರಷ್ಟು ಬಡ್ಡಿ ದರ ನೀಡಿತ್ತು. ಇನ್ನು, 2015-16ರಲ್ಲಿ ಬಡ್ಡಿದರ ಶೇ .8.8 ರಷ್ಟು ಹೆಚ್ಚಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ