ಚೆನ್ನೈ (ಜೂ. 30): ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದಲ್ಲಿ ಪೊಲೀಸರ ವಶದಲ್ಲಿದ್ದ ಜಯರಾಜ್ ಮತ್ತು ಅವರ ಮಗ ಬೆನ್ನಿಕ್ಸ್ ಸಾವನ್ನಪ್ಪಿದ್ದರು. ಈ ಘಟನೆಗೆ ದೇಶಾದ್ಯಂತ ಭಾರೀ ವಿರೋಧ, ಹೋರಾಟಗಳು ವ್ಯಕ್ತವಾಗಿದ್ದವು. ಇದೀಗ ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ ಸತ್ಯಾಂಶವಿಲ್ಲ ಎಂಬುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. ಹಾಗೇ, ಇದಕ್ಕೆ ಸಾಕ್ಷಿಗಳೂ ಇವೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ತಮಿಳುನಾಡಿನಲ್ಲಿ 63 ವರ್ಷದ ಜಯರಾಜ್ ಮತ್ತು ಅವರ ಮಗ ಜೆ. ಬೆನ್ನಿಕ್ಸ್ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬುದಕ್ಕೆ ಸಾಕ್ಷಿಗಳಿವೆ. ಸಿಸಿಟಿವಿ ದೃಶ್ಯಾವಳಿಗಳಿಗೂ, ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿರುವ ಮಾಹಿತಿಗೂ ವ್ಯತ್ಯಾಸವಿದೆ. ಸಿಬಿಐ ಆದಷ್ಟು ಬೇಗ ಇದರ ಸಂಪೂರ್ಣ ತನಿಖೆಯನ್ನು ಮಾಡಬೇಕು. ಜಯರಾಜ್ ಕುಟುಂಬಸ್ಥರು ತಮಗೆ ನ್ಯಾಯ ಸಿಕ್ಕೇಸಿಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಹೀಗಾಗಿ, ಒಂದೇ ಒಂದು ಸೆಕೆಂಡ್ ಕೂಡ ಹಾಳುಮಾಡದೆ ಪೊಲೀಸರು ತನಿಖೆ ನಡೆಸಬೇಕು. ಸಿಬಿಐನವರು ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವವರೆಗೆ ತಿರುನೆಲ್ವೆಲಿಯ ಡಿಐಜಿ ಇದರ ತನಿಖೆ ನಡೆಸಬಹುದು ಎಂದು ಕೋರ್ಟ್ ತಿಳಿಸಿದೆ.
ಇದನ್ನೂ ಓದಿ: TikTok: ಟಿಕ್ಟಾಕ್ ಆ್ಯಪ್ ತೆಗೆದುಹಾಕಿದ ಗೂಗಲ್ ಪ್ಲೇ ಸ್ಟೋರ್, ಆ್ಯಪ್ ಸ್ಟೋರ್
ತೂತುಕುಡಿ ಜಿಲ್ಲೆಯ ಜಯರಾಜ್ ಅವರು ಮರದ ವ್ಯಾಪಾರಿಯಾಗಿದ್ದು, ಜೂನ್.19ರಂದು ರಾತ್ರಿ 9 ಗಂಟೆಯ ನಂತರವೂ ಅಂಗಡಿ ತೆರೆದಿದ್ದ ಕಾರಣ ಪೊಲೀಸರು ಜಯರಾಜ್ ಅವರನ್ನು ವಶಕ್ಕೆ ಪಡೆದುಕೊಂಡು ಠಾಣೆಯಲ್ಲಿರಿಸಿಕೊಂಡಿದ್ದರು. ಜಯರಾಜ್ ಅವರ ಪುತ್ರ ಬೆನ್ನಿಕ್ಸ್ ಮೊಬೈಲ್ ಅಂಗಡಿ ನಡೆಸುತ್ತಿದ್ದು, ತಂದೆಯನ್ನು ಪೊಲೀಸರು ಕರೆದೊಯ್ದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡುವಂತೆ ಪೊಲೀಸ್ ಠಾಣೆಗೆ ತೆರಳಿದ್ದರು. ಮಾತಿನ ಚಕಮಕಿ ಬಳಿಕ ಪೊಲೀಸರು ಬೆನ್ನಿಕ್ಸ್ನನ್ನೂ ವಶಕ್ಕೆ ಪಡೆದು, ಕೇಸ್ ದಾಖಲಿಸಿದ್ದರು.
ಇದನ್ನೂ ಓದಿ: ತಮಿಳುನಾಡಿನ ಪೊಲೀಸ್ ಕಸ್ಟಡಿಯಲ್ಲಿ ದಾರುಣ ಸಾವುಂಡ ಜಯರಾಜ್ ಮತ್ತು ಬೆನಿಕ್ಸ್; ಪ್ರಕರಣದ ಒಂದು ಟೈಮ್ಲೈನ್
ತಂದೆಯನ್ನು ಬಿಡುಗಡೆ ಮಾಡುವಂತೆ ಠಾಣೆ ಎದುರು ಪ್ರತಿಭಟಿಸಿದ ಕಾರಣ ಬೆನ್ನಿಕ್ಸ್ಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದರು. ಅಲ್ಲದೆ ಜಯರಾಜ್ ಅವರಿಗೂ ಥಳಿಸಿದ್ದರು ಎಂದು ಅವರ ಸಂಬಂಧಿಕರು ಪೊಲೀಸರ ಮೇಲೆ ಆರೋಪ ಮಾಡಿದ್ದಾರೆ. ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜೂನ್ 23ರಂದು ಇಬ್ಬರೂ ಸಾವನ್ನಪ್ಪಿದ್ದರು. ಪೊಲೀಸರ ದೌರ್ಜನ್ಯದಿಂದಲ್ಏ ಅವರಿಬ್ಬರೂ ಸಾವನ್ನಪ್ಪಿದರು ಎಂದು ಜೂನ್ 24ರಂದು ತಮಿಳುನಾಡಿನ ಹಲವೆಡೆ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನ ಬಂದ್ ಮಾಡಿ ಪ್ರತಿಭಟಿಸಿದ್ದರು.
ಈ ಪ್ರಕರಣದ ಬಗ್ಗೆ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತೂತುಕುಡಿ ಎಸ್ಪಿ ಅರುಣ್ ಗೋಪಾಲನ್ ಅವರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಿತ್ತು. ಬಳಿಕ, ತೂತುಕುಡಿ ಪೊಲೀಸ್ ವಿಭಾಗವು ಸಾತ್ತಾನ್ಕುಳಂ ಠಾಣೆಯ ಎಸ್ಐಗಳಾದ ಬಾಲಕೃಷ್ಣನ್ ಮತ್ತು ಪಿ ರಘು ಗಣೇಶ್ ಅವರನ್ನು ಅಮಾನತುಗೊಳಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ