ನವ ದೆಹಲಿ. ಕೊರೋನಾ ಸಾಂಕ್ರಾಮಿಕ ಪಿಡುಗು ಆವರಿಸಿರುವ ಇಂದಿನ ದಿನಗಳಲ್ಲಿ ಸಾಮಾನ್ಯ ಜನ ಪ್ರತಿನಿತ್ಯ ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಒಂದು ಕಡೆ ಹಣದುಬ್ಬರ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಸಣ್ಣ ಉಳಿತಾಯದ ಮೇಲಿನ ಬಡ್ಡಿ ದರಗಳು ನಿರಂತರವಾಗಿ ಕಡಿಮೆಯಾಗುತ್ತಿವೆ. ಈ ನಡುವೆ ನೌಕರರ ಭವಿಷ್ಯ ನಿಧಿ ಸಂಸ್ಥೆ ಕಾರ್ಮಿಕರ ಪಿಎಫ್ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಲು ಮತ್ತೊಮ್ಮೆ ಮುಂದಾಗಿದೆ ಎಂಬ ವರದಿಗಳು ಇದೀಗ ಹೊರ ಬೀಳುತ್ತಿದೆ.
ಹೂಡಿಕೆ ಮೇಲಿನ ಆದಾಯ ಕ್ಷೀಣಿಸುತ್ತಿರುವ ಕಾರಣದಿಂದಾಗಿ ಪಿಎಫ್ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡುವ ಅನಿವಾರ್ಯ ಎದುರಾಗಿದೆ ಎಂದು ಹೇಳಲಾಗುತ್ತಿದೆ. 2019-20 ರ ಆರ್ಥಿಕ ವರ್ಷದಲ್ಲಿ ಪಿಎಫ್ ಮೇಲಿನ ಬಡ್ಡಿದರವನ್ನು ಶೇ.8.65 ರಿಂದ ಶೇ.8.55 ಕ್ಕೆ ಇಳಿಸಲಾಗಿದೆ. ಆದರೆ, ಇದನ್ನು ಹಣಕಾಸು ಸಚಿವಾಲಯ ಇನ್ನೂ ಅನುಮೋದಿಸಿಲ್ಲ. ಹಣಕಾಸು ಸಚಿವಾಲಯ ಅನುಮೋದನೆ ನೀಡಿದ ನಂತರ ಕಾರ್ಮಿಕ ಸಚಿವಾಲಯ ನೂತನ ಬಡ್ಡಿ ದರವನ್ನು ಜಾರಿಗೆ ತರಲಿದೆ.
ಎಕನಾಮಿಕ್ ಟೈಮ್ಸ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪಿಎಫ್ ಮೇಲಿನ ಬಡ್ಡಿದರಗಳ ಬಗ್ಗೆ ನಿರ್ಧರಿಸಲು ಇಪಿಎಫ್ಒ ಶೀಘ್ರದಲ್ಲೇ ಹಣಕಾಸು ಇಲಾಖೆ, ಹೂಡಿಕೆ ಇಲಾಖೆ ಮತ್ತು ಲೆಕ್ಕಪರಿಶೋಧನಾ ಸಮಿತಿಯೊಂದಿಗೆ ಸಭೆ ನಡೆಸಲಿದೆ.
ಈ ಸಭೆಯು ಪಿಎಫ್ನಲ್ಲಿ ಪಾವತಿಸಲು ಇಪಿಎಫ್ಒ ನೀಡಬಹುದಾದ ಬಡ್ಡಿದರಗಳ ಬಗ್ಗೆ ನಿರ್ಧರಿಸುತ್ತದೆ. ಅಸಲಿಗೆ ಇಪಿಎಫ್ಒ ತನ್ನ ಒಟ್ಟು ನಿಧಿಯ ಶೇ.85ರಷ್ಟನ್ನು ಸಾಲ ಮಾರುಕಟ್ಟೆಯಲ್ಲಿ (ಬಾಂಡ್ಗಳು) ಹೂಡಿಕೆ ಮಾಡಿದ್ದರೆ, ಉಳಿದ ಶೇ.15 ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಇಟಿಎಫ್ ಮೂಲಕ ಹೂಡಿಕೆ ಮಾಡಿದೆ.
ಕಳೆದ ವರ್ಷದ ಮಾರ್ಚ್ ಅಂತ್ಯದ ವೇಳೆಗೆ, ಇಪಿಎಫ್ಒ ಷೇರುಗಳಲ್ಲಿ ಒಟ್ಟು ಹೂಡಿಕೆ 74,324 ಕೋಟಿ ಆಗಿತ್ತು ಮತ್ತು ಈ ಹೂಡಿಕೆಯ ಮೇಲೆ ಇಪಿಎಫ್ಒ ಶೇ. 14.74 ರಷ್ಟು ಲಾಭವನ್ನು ಗಳಿಸಿತ್ತು.
ಇಪಿಎಫ್ಒ ಲಾಭದಲ್ಲಿದ್ದರೂ ಬಡ್ಡಿದರಗಳನ್ನು ಏಕೆ ಕಡಿಮೆ ಮಾಡಲಾಗುತ್ತದೆ? ಎಂಬುದು ಪ್ರಮುಖ ಪ್ರಶ್ನೆ. ಅಸಲಿಗೆ ಇಪಿಎಫ್ಒ 18 ಲಕ್ಷ ಕೋಟಿಗಿಂತ ಹೆಚ್ಚು ಹೂಡಿಕೆ ಮಾಡಿದೆ. ಈ ಮೊತ್ತದಲ್ಲಿ ಎನ್ಬಿಎಫ್ಸಿಗಳಾದ ದಿವಾನ್ ಹೌಸಿಂಗ್ ಮತ್ತು ಐಎಲ್ ಆಂಡ್ ಎಫ್ಎಸ್ನಲ್ಲಿ 4,500 ಕೋಟಿ ರೂ ಹೂಡಿಕೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ