Coronavirus: ಭಾರತದಲ್ಲಿ ಕೊರೊನಾ ರಣಕೇಕೆ ಹೆಚ್ಚಾಗಿರುವ ಬೆನ್ನಲ್ಲೇ ದುಬೈ ಮತ್ತು ಭಾರತದ ನಡುವೆ ವಿಮಾನ ಹಾರಾಟವನ್ನು ಭಾನುವಾರದಿಂದ 10 ದಿನಗಳವರಗೆ ರದ್ದು ಮಾಡಲು ಎಮಿರೇಟ್ಸ್ ಏರ್ಲೈನ್ಸ್ ನಿರ್ಧರಿಸಿದೆ. ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವುದೇ ಇದಕ್ಕೆ ಮೂಲ ಕಾರಣ ಎನ್ನಲಾಗಿದೆ.
ಈಗಾಗಲೇ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಭಾರತ ಯಾತ್ರೆಯನ್ನು ಮೊಟಕುಗೊಳಿಸಿದ್ದಾರೆ. ಜೊತೆಗೆ ಬ್ರಿಟನ್ ಭಾರತ ಪ್ರಯಾಣಕ್ಕೆ ಕಠಿಣ ಕ್ರಮಗಳನ್ನ ಜಾರಿ ಮಾಡಿದೆ. ಫ್ರಾನ್ಸ್ ಕೂಡಾ ಭಾರತದಿಂದ ಆಗಮಿಸುವ ಎಲ್ಲಾ ಪ್ರಯಾಣಿಕರಿಗೆ 10 ದಿನಗಳ ಕ್ವಾರಂಟೈನ್ ಸೂಚಿಸಿದೆ.
ಸಂಯುಕ್ತ ಅರಬ್ ರಾಷ್ಟ್ರ ಈಗಾಗಲೇ 10 ಲಕ್ಷ ಡೋಸ್ಗಳಷ್ಟು ಕೋವಿಡ್ ವ್ಯಾಕ್ಸಿನ್ ನೀಡಿರುವುದಾಗಿ ಹೇಳಿದೆ. ಲಸಿಕೆ ಪಡೆಯದವರಿಗೆ ಹೆಚ್ಚಿನ ಕೋವಿಡ್ ನಿಯಮಗಳು ಇರಲಿವೆ ಎಂದು ಎಚ್ಚರಿಕೆ ಕೂಡಾ ನೀಡಿದೆ. ತನ್ನ ಪ್ರಜೆಗಳಿಗೆ ಮಾತ್ರವಲ್ಲದೇ ವಿದೇಶಿಯರಿಗೂ ದುಬೈನಲ್ಲಿ ಕೋವಿಡ್ ಲಸಿಕೆ ನೀಡಲಾಗ್ತಿದೆ. ಗಲ್ಫ್ ರಾಷ್ಟ್ರಗಳಲ್ಲಿ ಇದುವರಗೆ 5 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ.
ದುಬೈ ಮತ್ತು ಅಬುಧಾಬಿಯಲ್ಲಿ ಕಟ್ಟುನಿಟ್ಟಾದ ಮಾಸ್ಕ್ ಮತ್ತು ಸಾಮಾಜಿಕ ಅಂತರದ ನಿಯಮಗಳು ಜಾರಿಯಲ್ಲಿವೆ. ಅದನ್ನು ಹೊರತುಪಡಿಸಿದರೆ ಈ ನಗರಗಳಲ್ಲಿ ಜನಜೀವನ ಸಾಮಾನ್ಯವಾಗಿ ನಡೆಯುತ್ತಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಕೊರೊನಾ ಸೋಂಕಿನ ಪರಿಸ್ಥಿತಿ ವಿಪರೀತ ಹದಗೆಟ್ಟಿದ್ದು ದೊಡ್ಡ ದೊಡ್ಡ ಆಸ್ಪತ್ರೆಗಳು ಕೂಡಾ ಆಕ್ಸಿಜನ್ ಕೊರತೆಯಿಂದ ನಲುಗಿಹೋಗಿವೆ. ಸರ್ಕಾರಗಳು ಆಕ್ಸಿಜನ್, ಐಸಿಯು, ವ್ಯಾಕ್ಸಿನ್ ಗಳನ್ನು ಹೊಂದಿಸಲು ಹರಸಾಹಸ ಪಡುತ್ತಿವೆ. ಸಾರ್ವಜನಿಕರು ಕೂಡಾ ಸಾಮಾಜಿಕ ಜಾಲತಾಣಗಳ ಮೂಲಕ ಸಹಾಯಕ್ಕಾಗಿ ಬೇಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ