Stan Swamy - ವೆಂಟಿಲೇಟರ್​ನಲ್ಲಿ ಸ್ಟಾನ್ ಸ್ವಾಮಿ; ಮಹಾ ಸರ್ಕಾರಕ್ಕೆ ಮಾನವ ಹಕ್ಕು ಆಯೋಗ ನೋಟೀಸ್

ಕಳೆದ ವರ್ಷದ ಅಕ್ಟೋಬರ್​ನಲ್ಲಿ ಎನ್ಐಎಯಿಂದ ಬಂಧಿತರಾಗಿದ್ದ ಸ್ಟಾನ್ ಸ್ವಾಮಿ ಅವರು ಮೇ ತಿಂಗಳಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ಭಾನುವಾರ ಅವರ ಆಕ್ಸಿಜನ್ ಮಟ್ಟ ಕಡಿಮೆಯಾದ್ದರಿಂದ ವೆಂಟಿಲೇಟರ್ ಸಪೋರ್ಟ್ ಕೊಡಲಾಗಿದೆ.

ಸ್ಟಾನ್ ಸ್ವಾಮಿ

ಸ್ಟಾನ್ ಸ್ವಾಮಿ

  • News18
  • Last Updated :
  • Share this:
ಮುಂಬೈ (ಜುಲೈ 05): ಎಲ್ಗಾರ್ ಪರಿಷದ್ ಕಾರ್ಯಕ್ರಮ ಹಾಗೂ ನಂತರದ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಗಳಲ್ಲೊಬ್ಬರಾದ ಫಾದರ್ ಸ್ಟ್ಯಾನ್ ಸ್ವಾಮಿ ಅವರ ಆರೋಗ್ಯ ಸ್ಥಿತಿ ಕಳವಳಕಾರಿಯಾಗಿದೆ ಎಂಬ ಮಾಹಿತಿ ಕೇಳಿಬಂದಿದೆ. ಮಹಾರಾಷ್ಟ್ರದ ತಲೋಜಾ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಸ್ಟಾನ್ ಸ್ವಾಮಿ ಅವರನ್ನ ಕೆಲ ವಾರಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಆರೋಗ್ಯದಲ್ಲಿ ಇನ್ನಷ್ಟು ವ್ಯತ್ಯಯವಾಗಿ ನಿನ್ನೆ ಭಾನುವಾರ ಸ್ವಾಮಿ ಅವರಿಗೆ ವೆಂಟಿಲೇಟರ್ ಸಪೋರ್ಟ್ ನೀಡಲಾಗಿದೆ. ಆದರೆ, ನ್ಯಾಯಾಂಗ ಬಂಧನಕ್ಕೂ ಮುನ್ನ ಆರೋಗ್ಯವಾಗಿದ್ದ ಸ್ಟ್ಯಾನ್ ಸ್ವಾಮಿ ಅವರ ಸ್ಥಿತಿ ಈ ಮಟ್ಟಕ್ಕೆ ತಲುಪಿರುವ ವಿಚಾರವನ್ನು ಕೆಲ ಸಂಘಟನೆಗಳು ಬಾಂಬೆ ಹೈಕೋರ್ಟ್ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಗಮನಕ್ಕೆ ತಂದಿವೆ. ಮಾನವ ಹಕ್ಕು ಆಯೋಗ ಈ ಸಂಬಂಧ ನಿನ್ನೆ ಮಹಾರಾಷ್ಟ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದ್ದು, ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಹಾಗೆಯೇ, 84 ವರ್ಷದ ಫಾದರ್ ಸ್ಟ್ಯಾನ್ ಸ್ವಾಮಿ ಅವರಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ನೀಡುವಂತೆಯೂ ಸೂಚಿಸಿದೆ. ಇನ್ನು, ಬಾಂಬೆ ಹೈಕೋರ್ಟ್ ನಾಳೆ ಮಂಗಳವಾರ ಸ್ಟ್ಯಾನ್ ಸ್ವಾಮಿ ಅವರಿಗೆ ಜಾಮೀನು ನೀಡಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲಿದೆ.

ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಒಂಬತ್ತು ತಿಂಗಳ ಹಿಂದೆ, ಅಂದರೆ ಅಕ್ಟೋಬರ್ ತಿಂಗಳಲ್ಲಿ ಅವರನ್ನ ಬಂಧಿಸಿ ನ್ಯಾಯಾಂಗ ಕಸ್ಟಡಿಗೆ ಪಡೆಯಲಾಗಿತ್ತು. ಆ ನಂತರ ಅವರ ಆರೋಗ್ಯ ಸ್ಥಿತಿ ಕುಂದುತ್ತಲೇ ಇದೆ ಎಂಬ ಆರೋಪ ಕೇಳಿಬಂದಿದೆ. ಎಪ್ರಿಲ್ 26ರಂದು ಅವರ ಆರೋಗ್ಯ ಸ್ಥಿತಿ ದೃಷ್ಟಿಯಿಂದ ಮಧ್ಯಂತರ ಜಾಮೀನು ಕೊಡುವಂತೆ ಅರ್ಜಿ ಸಲ್ಲಿಲಾಗಿತ್ತು. ನಂತರ ಕೋರ್ಟ್ ನಿರ್ದೇಶನದ ಮೇರೆಗೆ ಮೇ 28ರಂದು ಅವರನ್ನ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಬಹುಕಟ್ಟು ಸಮುದಾಯ ಹಕ್ಕುಗಳ ಹೋರಾಟಗಾರರೂ ಆಗಿದ್ದ ಸ್ಟಾನ್ ಸ್ವಾಮಿ ಅವರನ್ನ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಅವರ ಆಕ್ಸಿಜನ್ ಮತ್ತು ಹಾರ್ಟ್ ರೇಟ್​ಗಳಲ್ಲಿ ವ್ಯತ್ಯವಾದ್ದರಿಂದ ವೆಂಟಿಲೇಟರ್ ಸಪೋರ್ಟ್ ಕೊಡಲಾಗಿದೆ. ಇಲ್ಲಿನ ವೈದ್ಯರ ಪ್ರಕಾರ, ಸ್ಟಾನ್ ಸ್ವಾಮಿ ಅವರಿಗೆ ಕೋವಿಡ್​ವೋತ್ತರ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದು, ಅದರಿಂದಾಗಿ ಈ ಸ್ಥಿತಿ ಬಂದಿದೆಯಂತೆ.

ಇದನ್ನೂ ಓದಿ: ಮುಸ್ಲಿಮರು ಭಾರತದಲ್ಲಿರಬಾರದು ಎನ್ನುವವ ಹಿಂದೂವೇ ಅಲ್ಲ: ಆರೆಸ್ಸೆಸ್ ಮುಖಸ್ಥ ಭಾಗವತ್

ಆದರೆ, ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಪಿಯುಡಿಆರ್) ಎಂಬ ಸಂಘಟನೆ ಸೇರಿದಂತೆ ಹಲವರು ಸ್ಟಾನ್ ಸ್ವಾಮಿ ಅವರ ಆರೋಗ್ಯ ಹದಗೆಡವುದರ ಹಿಂದೆ ಕಾಣದ ಕೈಗಳ ಕೈವಾಡ ಇರುವುದರ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಸ್ವಾಮಿ ಅವರ ಪರ ವಕೀಲ ದೇಸಾಯಿ ಕೂಡ ಇದನ್ನು ಪುನರುಚ್ಚರಿಸಿದ್ಧಾರೆ. ಸ್ವಾಮಿ ಅವರ ಪರವಾಗಿ ಸಲ್ಲಿಸಲಾದ ಮಧ್ಯಂತರ ಜಾಮೀನು ಅರ್ಜಿಯ ಈ ಹಿಂದಿನ ಕೆಲ ವಿಚಾರಣೆಗಳಲ್ಲೂ ಈ ಬಗ್ಗೆ ಕೋರ್ಟ್ ಬಳಿ ಆತಂಕ ವ್ಯಕ್ತಪಡಿಸಲಾಗಿದೆ.

ತಾನು ಬಂಧನಕ್ಕೊಳಗಾಗುವ ಮುನ್ನ ದೈಹಿಕವಾಗಿ ಸ್ವತಂತ್ರವಾಗಿ ಕೆಲಸ ಮಾಡಲು ಸಮರ್ಥನಿದ್ದೆ. ನಾನೇ ಊಟ ಮಾಡುತ್ತಿದ್ದೆ, ನಡೆಯುತ್ತಿದ್ದೆ, ಸ್ನಾನ ಮಾಡುತ್ತಿದ್ದೆ. ಆದರೆ, ನ್ಯಾಯಾಂಗ ಕಸ್ಟಡಿಗೆ ಒಳಗಾದ ನಂತರ ಒಂದೊಂದಾಗಿಯೇ ನನ್ನ ದೈಹಿಕ ಸಾಮರ್ಥ್ಯ ಕುಂದುತ್ತಾ ಹೋಗಿದೆ ಎಂದು ಸ್ಟಾನ್ ಸ್ವಾಮಿ ಅವರೇ ಒಮ್ಮೆ ತನ್ನ ಆರೋಗ್ಯದ ಬಾಂಬೆ ಹೈಕೋರ್ಟ್​ಗೆ ತಿಳಿಸಿದ್ದರು. ತನಗೆ ಜಾಮೀನು ನೀಡಿ ಮನೆಯಲ್ಲೇ ಚಿಕಿತ್ಸೆ ಪಡೆಯಲಾಗುವಂತೆ ಮಾಡಿ ಎಂದು ಅವರು ಕೋರಿದ್ಧಾರೆ. ನಾಳೆ ಮಂಗಳವಾರ ಬಾಂಬೆ ಉಚ್ಚ ನ್ಯಾಯಾಲಯ ಈ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತದೆ.

ಸ್ಟಾನ್ ಸ್ವಾಮಿ ಅವರಿಗೆ ಪಾರ್ಕಿನ್ಸನ್ ರೋಗ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿವೆ. ಜೈಲಿಗೆ ಹೋದ ಬಳಿಕ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಈಗಾಗಲೇ ಒಂಬತ್ತು ತಿಂಗಳ ಕಾಲ ಬಂಧನದಲ್ಲಿರುವುದರಿಂದ ಅವರಿಗೆ ಮಧ್ಯಂತರ ಜಾಮೀನು ಕೊಡಿ ಎಂಬುದು ಅವರ ಪರ ವಕೀಲರು ಮಾಡುತ್ತಿರುವ ವಾದವಾಗಿದೆ.
Published by:Vijayasarthy SN
First published: