ಇದು ಲಂಚ ಯೋಜನೆಯಲ್ಲದೇ ಮತ್ತೇನು? ಚುನಾವಣಾ ಬಾಂಡ್​ಗಳ ಎಲ್ಲಾ ವಿವರ ಬಹಿರಂಗಗೊಳಿಸಿ: ಸಂಸತ್​ನಲ್ಲಿ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ

ಎಲೆಕ್ಟೋರಲ್ ಬಾಂಡ್​ಗಳು ಅಕ್ರಮ ಹಣ ವರ್ಗಾವಣೆಗೆ ಎಡೆ ಮಾಡಿಕೊಟ್ಟಿದೆ. ಈ ಹಣ ನೇರ ಪ್ರಧಾನಿ ಕಾರ್ಯಾಲಯ ತಲುಪಿದೆ. ಬಿಜೆಪಿ ಸರ್ಕಾರ ಕೆಲವೇ ಉದ್ಯಮಿಗಳನ್ನ ಇಟ್ಟುಕೊಂಡು ಈ ದೇಶದ ಶೇ. 90ರಷ್ಟು ವ್ಯವಹಾರ ನಿಭಾಯಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಟೀಕಿಸಿದ್ದಾರೆ.

news18
Updated:November 21, 2019, 5:11 PM IST
ಇದು ಲಂಚ ಯೋಜನೆಯಲ್ಲದೇ ಮತ್ತೇನು? ಚುನಾವಣಾ ಬಾಂಡ್​ಗಳ ಎಲ್ಲಾ ವಿವರ ಬಹಿರಂಗಗೊಳಿಸಿ: ಸಂಸತ್​ನಲ್ಲಿ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ
ಪ್ರಾತಿನಿಧಿಕ ಚಿತ್ರ
  • News18
  • Last Updated: November 21, 2019, 5:11 PM IST
  • Share this:
ನವದೆಹಲಿ(ನ. 21): ಸಂಸತ್​ನ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳಲ್ಲಿ ಇಂದು ಕೇಂದ್ರದ ಎಲೆಕ್ಟೋರಲ್ ಬಾಂಡ್ ಯೋಜನೆಯೆ ಹೆಚ್ಚು ಸದ್ದು ಮಾಡಿತು. ಚುನಾವಣಾ ಬಾಂಡ್ ಹೆಸರಲ್ಲಿ ಕೇಂದ್ರ ಸರ್ಕಾರ ಲಂಚ ಯೋಜನೆ ರೂಪಿಸಿದೆ ಎಂದು ಆರೋಪಿಸಿರುವ ವಿಪಕ್ಷ ಕಾಂಗ್ರೆಸ್, ಎಲೆಕ್ಟೋರಲ್ ಬಾಂಡ್ ಯೋಜನೆಯ ಎಲ್ಲಾ ವಿವರಗಳನ್ನು ಬಹಿರಂಗಪಡಿಸಿ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿತು. ಚುನಾವಣಾ ಬಾಂಡ್ ಯೋಜನೆ ವಿರೋಧಿಸಿ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಕಾಂಗ್ರೆಸ್ ಸಂಸದರು ತೀವ್ರ ಪ್ರತಿಭಟನೆ ನಡೆಸಿದರು.

ಚುನಾವಣಾ ಬಾಂಡ್ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ವ್ಯಕ್ತಪಡಿಸಿದ್ದ ಆಕ್ಷೇಪಗಳನ್ನ ಸರ್ಕಾರ ಲೆಕ್ಕಕ್ಕೆ ತೆಗೆದುಕೊಂಡಿಲ್ಲದಿರುವುದು ಆರ್​ಟಿಐ ಮಾಹಿತಿಯಿಂದ ತಿಳಿದುಬಂದಿದೆ. ಎರಡು ದಿನದಿಂದ ಈ ವಿಚಾರವನ್ನಿಟ್ಟುಕೊಂಡು ಕೇಂದ್ರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರು, ಈ ಎಲೆಕ್ಟೋರಲ್ ಬಾಂಡ್ ಅಥವಾ ಚುನಾವಣಾ ದೇಣಿಗೆಯನ್ಜು ರಾಜಕೀಯ ಲಂಚ ಯೋಜನೆ ಎಂದು ಬಣ್ಣಿಸುತ್ತಿದ್ದಾರೆ.

ಇದನ್ನೂ ಓದಿ: ಲಂಕಾದಲ್ಲಿ ತಮಿಳಿಗ ಮುತ್ತಯ್ಯ ಮುರಳೀಧರನ್ ರಾಜ್ಯಪಾಲರಾಗಲು ತಮಿಳಿಗರಿಂದಲೇ ವಿರೋಧ; ಪೇಚಿಗೆ ಸಿಲುಕಿದ ಸ್ಪಿನ್ ಮಾಂತ್ರಿಕ

“ಮೊದಲಿಗೆ, ಈ ಯೋಜನೆಯು ಲೋಕಸಭಾ ಚುನಾವಣೆಗಳಿಗೆ ಸೀಮಿತವಾಗಿತ್ತು. 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ಕಾರ್ಯಾಲಯವು ಎಲೆಕ್ಟೋರಲ್ ಬಾಂಡ್​ಗಳಿಗೆ ಬಾಗಿಲು ತೆರೆಯಿತು” ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಅವರು ಸಂಸತ್​ನಲ್ಲಿ ಆರೋಪಿಸಿದರು.

“ಚುನಾವಣಾ ಬಾಂಡ್ ಯೋಜನೆ ಒಂದು ದೊಡ್ಡ ಹಗರಣವಾಗಿದೆ. ಇದರ ಬಗ್ಗೆ ಬಗ್ಗೆ ತುರ್ತು ಗಮನ ಹರಿಸಬೇಕಿದೆ” ಎಂದು ಮತ್ತೊಬ್ಬ ಕಾಂಗ್ರೆಸ್ ಸಂಸದ ಆಧೀರ್ ರಂಜನ್ ಚೌಧರಿ ಆಪಾದಿಸಿದರು.

ಆದರೆ, ಚುನಾವಣಾ ಬಾಂಡ್ ವಿಚಾರದ ಬಗ್ಗೆ ಕಾಂಗ್ರೆಸ್ ಹೆಚ್ಚೆಚ್ಚು ಚರ್ಚೆ ನಡೆಸಲು ಮುಂದಾಗುತ್ತಿರುವಂತೆಯೇ ರಾಜ್ಯಸಭಾ ಅಧ್ಯಕ್ಷರು ಕಲಾಪವನ್ನು ಮುಂದೂಡಿದರು. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಬಳಿಕ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಈ ವಿಚಾರವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸುವಂತೆ ಸೂಚಿಸಿದರು.

ದಿವಂಗತ ಅರುಣ್ ಜೇಟ್ಲಿ ಹಣಕಾಸು ಸಚಿವರಾಗಿದ್ದಾಗ ಎಲೆಕ್ಟೋರಲ್ ಬಾಂಡ್ ಯೋಜನೆ ಜಾರಿಗೆ ತರಲಾಗಿದೆ. ಇಲ್ಲಿಯವರೆಗೆ 6,000 ಕೋಟಿ ಮೌಲ್ಯದ ಚುನಾವಣಾ ಬಾಂಡ್​ಗಳು ಮಾರಾಟವಾಗಿವೆ. ಮೊದಲ ಹಂತದಲ್ಲಿ ಮಾರಾಟವಾದ 222 ಕೋಟಿ ಪೈಕಿ ಶೇ. 95ರಷ್ಟು ಭಾಗವು ಬಿಜೆಪಿಗೇ ಸಂದಾಯವಾಗಿದೆ ಎಂಬ ಅಂಶವು ಎಡಿಆರ್ ಕಲೆಹಾಕಿದ ಮಾಹಿತಿಯಿಂದ ತಿಳಿದುಬಂದಿದೆ.ಇದನ್ನೂ ಓದಿ: ಬ್ರಿಟಿಷ್ ಪೆಟ್ರೋಲಿಯಂ ಹಿಂದಿಕ್ಕಿ ವಿಶ್ವದ 6ನೇ ಅತಿದೊಡ್ಡ ಆಯಿಲ್ ಕಂಪನಿ ಪಟ್ಟಕ್ಕೇರಿದ ರಿಲಯನ್ಸ್​ ಇಂಡಸ್ಟ್ರೀಸ್

ಮಾಹಿತಿ ಹಕ್ಕು ಕಾಯ್ದೆ ಅಡಿ ಬಂದಿರುವ ಉತ್ತರದ ಪ್ರಕಾರ, ಕೇಂದ್ರ ಸರ್ಕಾರವು ಎಲೆಕ್ಟೋರಲ್ ಬಾಂಡ್ ಯೋಜನೆ ರೂಪಿಸಲು ಹೊರಟಾಗ ಆರ್​ಬಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಬಾಂಡ್​ಗಳು ಅಕ್ರಮ ಹಣ ವಹಿವಾಟಿಗೆ ಎಡೆ ಮಾಡಿಕೊಡುತ್ತದೆ ಎಂದು ಎಚ್ಚರಿಸಿತ್ತೆನ್ನಲಾಗಿದೆ. ಆರ್​ಬಿಐನ ಆತಂಕದ ಮಧ್ಯೆಯೂ ಕೇಂದ್ರ ಸರ್ಕಾರ ಚುನಾವಣಾ ಬಾಂಡ್ ಯೋಜನೆ ಜಾರಿಗೊಳಿಸಿದಂತಿದೆ.

“ಶ್ರೀಮಂತ ಕಂಪನಿಗಳು ಮತ್ತು ವ್ಯಕ್ತಿಗಳು ರಾಜಕೀಯ ಪಕ್ಷಗಳು, ಅದರಲ್ಲೂ ಆಡಳಿತಾರೂಢ ಪಕ್ಷದ ಮೇಲೆ ಹಣದ ಮೂಲಕ ಸುಲಭವಾಗಿ ಪ್ರಭಾವ ಬೀರಲು ಸಾಧ್ಯವಾಗಲಿದೆ ಎಂದು ನಾವು ಅನೇಕರು ಆಕ್ಷೇಪ ವ್ಯಕ್ತಪಿಸಿದ್ದೆವು” ಎಂದು ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರು ಲೋಕಸಭೆಯಲ್ಲಿ ವಾದಿಸಿದರು.

ಎಲೆಕ್ಟೋರಲ್ ಬಾಂಡ್​ಗಳು ಅಕ್ರಮ ಹಣ ವರ್ಗಾವಣೆಗೆ ಎಡೆ ಮಾಡಿಕೊಟ್ಟಿದೆ. ಈ ಹಣ ನೇರ ಪ್ರಧಾನಿ ಕಾರ್ಯಾಲಯ ತಲುಪಿದೆ. ಬಿಜೆಪಿ ಸರ್ಕಾರ ಕೆಲವೇ ಉದ್ಯಮಿಗಳನ್ನ ಇಟ್ಟುಕೊಂಡು ಈ ದೇಶದ ಶೇ. 90ರಷ್ಟು ವ್ಯವಹಾರ ನಿಭಾಯಿಸುತ್ತಿದೆ ಎಂದು ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಟೀಕಿಸಿದರು.

“ಈ ಯೋಜನೆಯಲ್ಲಿ ನೇರ ಪ್ರಧಾನಿಯೇ ಪಾಲುದಾರರಾಗಿದ್ದಾರೆ. ಹೊರದೇಶಗಳಲ್ಲಿರುವ ಖಾತೆಗಳಿಂದ ಕಪ್ಪು ಹಣವನ್ನು ತರುತ್ತೇವೆಂದು ಬಿಜೆಪಿ ಸರ್ಕಾರ ಆಶ್ವಾಸನೆ ನೀಡಿತ್ತು. ಆದರೆ, ಈಗ ಉಲ್ಟಾ ಆಗುತ್ತಿದೆ” ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಆಕ್ರೋಶ ವ್ಯಕ್ತಪಡಿಸಿದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 21, 2019, 5:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading