ಕೊಲ್ಕತ್ತಾ (ಏ. 12): ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ದಿನಕ್ಕೊಂದು ಹೈಡ್ರಾಮಾಗೆ ಸಾಕ್ಷಿಯಾಗುತ್ತಿದೆ. ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಗೆ 24 ಗಂಟೆಗಳ ಕಾಲ ಚುನಾವಣಾ ಪ್ರಚಾರದಲ್ಲಿ ತೊಡಗದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಇಂದು ರಾತ್ರಿ 8 ಗಂಟೆಯಿಂದ ನಾಳೆ ರಾತ್ರಿ 8 ಗಂಟೆಯವರೆಗೆ ದೀದಿ ಪ್ರಚಾರವನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಕೇಂದ್ರ ಭದ್ರತಾ ಪಡೆಗಳ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.
ಕೇಂದ್ರ ಭದ್ರತಾ ಪಡೆಗಳ ವಿರುದ್ಧ ಸಂಘರ್ಷಕ್ಕಿಳಿಯುವಂತೆ ಜನರನ್ನು ಪ್ರಚೋದಿಸಿದ ಆರೋಪದ ಮೇಲೆ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಇದಕ್ಕೆ ಕೂಡಲೇ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗ ಅಸಂವಿಧಾನಿಕವಾಗಿ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ. ಆಯೋಗದ ಕ್ರಮವನ್ನು ಖಂಡಿಸಿ ನಾಳೆ ಮಧ್ಯಾಹ್ನ 12 ಗಂಟೆಗೆ ಗಾಂಧಿ ಪ್ರತಿಮೆ ಎದುರು ಧರಣಿ ಕೂರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: Kumbha mela: ಮಾಸ್ಕ್ ಇಲ್ಲ, ಅಂತರವೂ ಇಲ್ಲ; ಕುಂಭಮೇಳದಲ್ಲಿ ಕೊರೋನಾ ನಿಯಮಗಳ ಉಲ್ಲಂಘನೆಯಿಂದ ಟೆನ್ಶನ್..!
ಟಿಎಂಸಿಯ ಹಿರಿಯ ನಾಯಕ ಡೆರಕ್ ಓಬ್ರೇನ್ ಆಯೋಗದ ಆದೇಶವನ್ನು ತೀವ್ರವಾಗಿ ಖಂಡಿಸಿದ್ದು, ಇಂದು ಪ್ರಜಾಪ್ರಭುತ್ವದಲ್ಲಿ ಕರಾಳ ದಿನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಒಬ್ಬರ ವಿರುದ್ಧ ಈ ರೀತಿ ಆಯೋಗ ನಿರ್ಬಂಧ ಹೇರಿರುವುದು ಅಪರೂಪದಲ್ಲಿ ಅಪರೂಪ. ಚುನಾವಣಾ ಆಯೋದ ನಿರ್ಗಮಿತ ಆಯುಕ್ತ ಸುನೀಲ್ ಅರೋರ ಇಂದು ನಿವೃತ್ತಿಗೂ ಮುನ್ನ ಮಮತಾ ಬ್ಯಾನರ್ಜಿ ಅವರ ವಿರುದ್ಧ ಆದೇಶ ಹೊರಡಿಸಿದ್ದಾರೆ.
ಇನ್ನು ಕೇಂದ್ರ ಭದ್ರತಾ ಪಡೆಗಳ ವಿರುದ್ಧ ಸಂಘರ್ಷಕ್ಕಿಳಿಯುವಂತೆ ಜನರಿಗೆ ಪ್ರಚೋದಿಸಿದರ ಕುರಿತು ಸ್ಪಷ್ಟನೆ ಕೋರಿ ಆಯೋಗ ದೀದಿಗೆ ನೋಟಿಸ್ ಜಾರಿ ಮಾಡಿತ್ತು. ಆದರೆ ನೋಟಿಸ್ಗೆ ಮಮತಾ ಬ್ಯಾನರ್ಜಿ ಉತ್ತರಿಸದ ಹಿನ್ನೆಲೆಯಲ್ಲಿ 24 ಗಂಟೆಗಳ ಕಾಲ ಪ್ರಚಾರಕ್ಕೆ ನಿರ್ಬಂಧವೇರಿ ಆದೇಶ ಹೊರಡಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ