ನವದೆಹಲಿ: ಶಿವಸೇನೆ (Shiv Sena) ಒಡೆದು ಎರಡು ಬಣಗಳಾಗಿ, ಪಕ್ಷದ ಚಿಹ್ನೆಗಾಗಿ ನಡೆಯುತ್ತಿದ್ದ ಹೋರಾಟಕ್ಕೆ ಅಂತೂ ಚುನಾವಣಾ ಆಯೋಗ (Election Commission) ಅಂತ್ಯ ಹಾಡಿದೆ. ಮಹಾರಾಷ್ಟ್ರ (Maharashtra) ಮುಖ್ಯಮಂತ್ರಿ ಆಗಿರುವ ಏಕನಾಥ್ ಶಿಂದೆ (Eknath Shinde) ಬಣವೇ ನಿಜವಾದ ಶಿವಸೇನೆ ಎಂದು ಶುಕ್ರವಾರ ಘೋಷಣೆ ಮಾಡಿದೆ. ಇದೀಗ ಬಿಲ್ಲು ಬಾಣದ ಗುರುತು ಶಿಂಧೆ ಬಣದ ಪಾಲಾಗಿದೆ. ಶಿವಸೇನೆ ಪಕ್ಷದ ಹೆಸರು ಹಾಗೂ ಬಿಲ್ಲುಬಾಣದ ಚಿಹ್ನೆ ಎರಡೂ ಏಕನಾಥ್ ಶಿಂಧೆ ಬಣಕ್ಕೆ ದೊರೆತಿರುವುದರಿಂದ ಉದ್ಧವ್ ಠಾಕ್ರೆ (Uddhav Thackeray) ಬಣಕ್ಕೆ ದೊಡ್ಡ ಹಿನ್ನಡೆ ಉಂಟಾಗಿದೆ. 2019ರ ಮಹಾರಾಷ್ಟ್ರ ವಿಧಾನಸೌಭೆ ಚುನಾವಣೆಯಲ್ಲಿ ಗೆದ್ದಿದ್ದ ಶಿವಸೇನೆಯ 55 ಅಭ್ಯರ್ಥಿಗಳ ಪೈಕಿ ಶೇ 70 ರಷ್ಟು ಮಂದಿ ಏಕನಾಥ್ ಶಿಂಧೆಯವರನ್ನು ಬೆಂಬಲಿಸಿದ್ದರು.
ಮೈತ್ರಿ ಸರ್ಕಾರ ಬೀಳಿಸಿದ್ದ ಶಿಂಧೆ
ಕಳೆದ ವಿಧಾನ ಸಭೆ ಚುನಾವಣೆ ನಂತರ ಮಹಾರಾಷ್ಟ್ರದಲ್ಲಿ ಬಹುವರ್ಷಗಳ ಬಿಜೆಪಿ ಮೈತ್ರಿಯಿಂದ ಹೊರಬಂದಿದ್ದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (NCP) ಮಹಾ ವಿಕಾಸ್ ಅಘಾಡಿ (MVA) ಹೆಸರಿನಲ್ಲಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ಆದರೆ ಶಿವಸೇನೆಯ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದ ಏಕನಾಥ್ ಶಿಂಧೆ ಈ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು, ರಾಜ್ಯದ ರಾಜಕೀಯ ಚಿತ್ರಣವನ್ನೇ ಬದಲಿಸಿದ್ದರು.
ಶಿವಸೇನೆಯಲ್ಲಿದ್ದ ತಮ್ಮ ಶಾಸಕರ ಬೆಂಬಲವನ್ನು ಪಡೆದುಕೊಂಡು ಮೈತ್ರಿ ಸರ್ಕಾರವನ್ನು ಉರುಳಿಸುವಲ್ಲಿ ಶಿಂಧೆ ಯಶಸ್ವಿಯಾದರು. ಜೊತೆಗೆ ಬಿಜೆಪಿ ಬೆಂಬಲವನ್ನು ಪಡೆದುಕೊಂಡು ಜೂನ್ 30ರಂದು ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು, ಬಿಜೆಪಿಯ ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿದ್ದರು.
ಚಿಹ್ನೆಗಾಗಿ ಸುಪ್ರಿಂ ಕದ ತಟ್ಟಿದ್ದ ಎರಡು ಬಣ
ಪಕ್ಷ ಒಡೆದು ಇಬ್ಭಾಗವಾದ ಮೇಲೆ ಚಿಹ್ನೆಗಾಗಿ ಪ್ರತಿಷ್ಠೆಯ ಸಂಘರ್ಷ ನಡೆದಿತ್ತು. ಎರಡೂ ಬಣಗಳು ತಮ್ಮದೇ ನೈಜ ಶಿವಸೇನೆ ಎಂದು ಎಂದು ಎರಡೂ ಬಣಗಳು ವಾಕ್ಸಮರಕ್ಕೆ ಇಳಿದಿದ್ದವು. ಇಬ್ಬರ ಜಗಳದ ನಂತರ ಬಿಲ್ಲು ಬಾಣದ ಗುರುತಿಗಾಗಿ ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಚುನಾವಣಾ ಆಯೋಗ ಮೊದಲು ಎರಡೂ ಬಣಗಳಿಗೂ ಚಿಹ್ನೆಯನ್ನು ಬಳಸದಂತೆ ಭಾರತೀಯ ಚುನಾವಣಾ ಆಯೋಗ ಆದೇಶ ನೀಡಿತ್ತು. ಎರಡು ಬಣಗಳಿಗೂ ಪ್ರತ್ಯೇಕವಾದ ಚಿಹ್ನೆಯನ್ನು ಹಂಚಿಕೆ ಮಾಡಲಾಗಿತ್ತು. ಆಗ ಶಿಂಧೆ ಬಣವು ಎರಡು ಕತ್ತಿ ಮತ್ತು ಗುರಾಣಿ ಚಿಹ್ನೆ ಪಡೆದಿದ್ದರೆ, ಉದ್ಧವ್ ಠಾಕ್ರೆ ಬಣವು ಪ್ರಜ್ವಲಿಸುವ ಜ್ಯೋತಿಯ ಚಿಹ್ನೆಯನ್ನು ಹೊಂದಿತ್ತು.
ಶಿಂಧೆಗೆ 40 ಶಾಸಕರು, 13 ಸಂಸದರ ಬೆಂಬಲ
ಶಿವಸೇನೆ ಗೆದ್ದಿರುವ 55 ಶಾಸಕರಲ್ಲಿ ಶಿಂಧೆ ಬಣವನ್ನು 40 ಶಾಸಕರು ಬೆಂಬಲಿಸುತ್ತಿದ್ದಾರೆ. ಗೆದ್ದಿರುವ ಶಾಸಕರು ಪಡೆದಿರುವ ಒಟ್ಟು 47,82440 ಮತಗಳಲ್ಲಿ 36,57327 ಮತಗಳನ್ನು ಗಳಿಸಿದವರು ಶಿಂಧೆ ಬಣದಲ್ಲಿದ್ದಾರೆ. ಅಂದರೆ ಶೇ.76 ರಷ್ಟು ಮತಗಳು ಇವರ ಪರ ಬಂದಿವೆ. ಉದ್ಧವ್ ಠಾಕ್ರೆ ಬಣದ 15 ಶಾಸಕರು 11,25,113 ಮತಗಳನ್ನು ಪಡೆದುಕೊಂಡಿದ್ದಾರೆ. ಅಂದರೆ ಶೇ. 23.5 ಮತಗಳನ್ನು ಹೊಂದಿದ್ದಾರೆ.
ಲೋಕಸಭೆ ಚುನಾವಣೆಯನ್ನು ತೆಗೆದುಕೊಂಡರೆ 18 ಸಂಸದರಲ್ಲಿ 13 ಸಂಸದರು ಶಿಂಧೆ ಬಣವನ್ನು ಬೆಂಬಲಿಸುತ್ತಿದ್ದಾರೆ. 5 ಸಂಸದರು ಠಾಕ್ರೆ ಪರವಾಗಿದ್ದಾರೆ. ಶಿಂಧೆ ಪರ ಇರುವ 13 ಸಂಸದರು ಒಟ್ಟು ಶಿವಸೇನೆ ಪಡೆದಿರುವ 1,02,45,143 ಮತಗಳಲ್ಲಿ 74,88,634 ಮತಗಳನ್ನು ಗಳಿಸಿದ್ದಾರೆ, ಅಂದರೆ ಶೇ.73 ಮತಗಳನ್ನು ಪಡೆದಿದ್ದಾರೆ. ಉದ್ಧವ್ ಠಾಕ್ರೆ ಬಣವನ್ನು ಬೆಂಬಲಿಸಿದ 5 ಸಂಸದರು 27,56,509 ಮತಗಳನ್ನು ಗಳಿಸಿದ್ದಾರೆ ಎಂದು ಶಿಂಧೆ ಬಣಕ್ಕೆ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನೀಡಿರುವ ಬಗ್ಗೆ ಸ್ಪಷ್ಟನೆ ನೀಡಿದೆ.
ಇಸಿ ಬಿಜೆಪಿ ಏಜೆಂಟ್
ಶಿವಸೇನೆ ಪಕ್ಷದ ಚಿಹ್ನೆ ಹಾಗೂ ಹೆಸರು ಕೈತಪ್ಪಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ "ಚುನಾವಣಾ ಆಯೋಗದ ನಿರ್ಧಾರವು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಭಾರತದಲ್ಲಿ ಯಾವುದೇ ಪ್ರಜಾಪ್ರಭುತ್ವ ಉಳಿದಿಲ್ಲ, ದೇಶದಲ್ಲಿ ಸರ್ವಾಧಿಕಾರ ಆರಂಭವಾಗಿದೆ ಎಂದು ಪ್ರಧಾನಿ ಘೋಷಿಸಬೇಕು " ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಪ್ರಿಂಕೋರ್ಟ್ಗೆ ಹೋಗಲು ನಿರ್ಧಾರ
ಏಕನಾಥ್ ಶಿಂಧೆ ಬಣ ಬಿಲ್ಲು ಬಾಣದ ಚಿಹ್ನೆ ಕದ್ದಿದೆ, ಈ ಕಳ್ಳತನಕ್ಕೆ ಜನರು ಸೇಡು ತೀರಿಸಿಕೊಳ್ಳಲಿದ್ದಾರೆ. ಚುನಾವಣಾ ಆಯೋಗದ ಆದೇಶದ ವಿರುದ್ಧ ಖಂಡಿತವಾಗಿ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ಸುಪ್ರೀಂ ಕೋರ್ಟ್ ಈ ಆದೇಶವನ್ನು ರದ್ದುಗೊಳಿಸುತ್ತದೆ ಮತ್ತು 16 ಶಾಸಕರನ್ನು ನ್ಯಾಯಾಲಯದಿಂದ ಅನರ್ಹಗೊಳಿಸಲಾಗುವುದು ಎಂಬ ನಂಬಿಕೆಯಿದೆ ಎಂದರು.
ಸುಪ್ರೀಂ ಕೋರ್ಟ್ ತೀರ್ಪಿಗೆ ಮುನ್ನ ಚುನಾವಣಾ ಆಯೋಗ ನಿರ್ಧಾರವನ್ನು ನೀಡಬಾರದು ಎಂದು ನಾನು ಹೇಳಿದ್ದೆ, ಶಾಸಕರು ಮತ್ತು ಸಂಸದರ ಸಂಖ್ಯೆಯನ್ನು ಆಧರಿಸಿ ಪಕ್ಷದ ಅಸ್ತಿತ್ವವನ್ನು ನಿರ್ಧರಿಸಿದರೆ ಬಂಡವಾಳಶಾಹಿಗಳು ಶಾಸಕ, ಸಂಸದರನ್ನು ಖರೀದಿಸಿ ಸಿಎಂ ಆಗಬಹುದು ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ