ಬ್ರೆಜಿಲ್ನ ಅಲಗೊವಾಸ್ ನಿವಾಸಿಯಾಗಿರುವ 8 ವರ್ಷದ ನಿಕೋಲ್ ಒಲಿವೆರಾಗೆ ಇರುವ ಖಗೋಳವಿಜ್ಞಾನದ ಮೇಲಿನ ಪ್ರೀತಿಯನ್ನು ವಯಸ್ಕರು ಸಹ ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು. ಒಲಿವೆರಾ ಕೇವಲ ಎರಡು ವರ್ಷದವಳಿದ್ದಾಗ, ತನ್ನ ತಾಯಿ ಬಳಿ ನಕ್ಷತ್ರವನ್ನೇ ಕೇಳಿದ್ದಳು. ಅವಳ ತಾಯಿ ಜಿಲ್ಮಾ ಜನಾಸೆ ಆಟಿಕೆಯ ನಕ್ಷತ್ರಗಳನ್ನು ತಂದುಕೊಟ್ಟಿದ್ದರು. ಆದರೆ, ತನ್ನ ಮಗುವಿಗೆ ಬೇಕಾಗಿರುವುದು ಆಕಾಶದಲ್ಲಿರುವ ನಿಜವಾದ ನಕ್ಷತ್ರ ಎಂಬುದನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಮೂರು ವರ್ಷ ತಗುಲಿದೆ.
ಕನಿಷ್ಠ ಪಕ್ಷ ನಿಜವಾದ ನಕ್ಷತ್ರವನ್ನು ನೋಡಬೇಕೆಂದು ಬಯಸಿದ್ದಳು ಒಲಿವೆರಾ. ಈಗ, 8 ವರ್ಷ ವಯಸ್ಸಿನ ನಿಕೋಲಿನ್ಹಾ (ಒಲಿವೇರಿಯಾಳ ಜನಪ್ರಿಯ ಹೆಸರು) ಏಳು ಕ್ಷುದ್ರಗ್ರಹಗಳನ್ನು ಪತ್ತೆಹಚ್ಚಿದ ಕಿರಿಯ ಖಗೋಳಶಾಸ್ತ್ರಜ್ಞೆ ಎನ್ನಲಾಗಿದೆ. ಬ್ರೆಜಿಲ್ ಮಾಧ್ಯಮ ವೆಬ್ಸೈಟ್ R7 ವರದಿಯ ಪ್ರಕಾರ, ಅಂತಾರಾಷ್ಟ್ರೀಯ ಖಗೋಳ ಶೋಧ ಸಹಯೋಗದಿಂದ ನಡೆಸಲ್ಪಡುವ ನಾಗರಿಕ-ವಿಜ್ಞಾನ ಕಾರ್ಯಕ್ರಮವಾದ ಕ್ಷುದ್ರಗ್ರಹ ಹಂಟ್ಗೆ ಆಲಿವೆರಾ ಕೊಡುಗೆ ನೀಡಿದ್ದು, ಅದರಲ್ಲಿ ನಾಸಾ ಸಹ ಸದಸ್ಯರು. ಆಕೆಯ ಭಾಗವಹಿಸುವಿಕೆಯಿಂದಲೇ ಏಳು ಕ್ಷುದ್ರಗ್ರಹಗಳ ಆವಿಷ್ಕಾರಕ್ಕೆ ಕಾರಣವಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆಲಿವೆರಾ ಸಾಧನೆಗಳ ಪಟ್ಟಿ ಆಕೆಯ ವಯಸ್ಸಿನಷ್ಟು ಕಡಿಮೆ ಏನಿಲ್ಲ. ಏಕೆಂದರೆ ಕ್ಷುದ್ರಗ್ರಹ ಹುಡುಕಾಟಗಳಲ್ಲಿನ ಒಳಹರಿವುಗಳಿಗಾಗಿ ಅಂತಾರಾಷ್ಟ್ರೀಯ ಖಗೋಳ ಶೋಧ ಸಹಯೋಗದಿಂದ ಈಕೆಯನ್ನು ಗೌರವಿಸಲಾಗಿದೆ. 6ನೇ ವಯಸ್ಸಿನಲ್ಲಿ, ಒಲಿವೆರಾ CEAAL ನಡೆಸುತ್ತಿದ್ದ ಕೋರ್ಸ್ನಲ್ಲಿ ಭಾಗವಹಿಸಿದ್ದಳು. ಎಲ್ಲಾ ತರಗತಿಗಳಿಗೆ ಹಾಜರಾದ ನಂತರ, ಪರೀಕ್ಷೆಯನ್ನೂ ತೆಗೆದುಕೊಂಡು ಉತ್ತೀರ್ಣಳಾದ ಬಾಲಕಿ 6 ವರ್ಷದ ಸಿಇಎಎಲ್ ಸದಸ್ಯೆ ಎನಿಸಿಕೊಂಡಿದ್ದಾಳೆ.
ಇನ್ನು, ಇತ್ತೀಚೆಗೆ ಕೊರೊನಾ ಸಾಂಕ್ರಾಮಿಕದ ಕಾರಣ ಆಕೆ ಶಾಲೆಗಳಿಗೆ ಹೋಗಿ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾಳಂತೆ. ಉಪನ್ಯಾಸಗಳು ಈಗ ಹೆಚ್ಚಾಗಿ ಆನ್ಲೈನ್ನಲ್ಲಿ ನಡೆಯುತ್ತಿದ್ದು, ಇದರಿಂದ ಮುಖಾಮುಖಿ ಚಟುವಟಿಕೆಗಳನ್ನು ಅಮಾನತುಗೊಳಿಸಲಾಗಿದೆ. ಈ ದೀರ್ಘ ನೀರಸ ದಿನಗಳು ಅವಳನ್ನು ದು:ಖಕ್ಕೀಡುಮಾಡಿದೆ ಎಂದು ಒಲಿವೆರಾ ತಾಯಿ ಹೇಳುತ್ತಾರೆ.
ಆದರೂ, ಯುವ ಖಗೋಳಶಾಸ್ತ್ರಜ್ಞೆ ತನ್ನ ಸಂಪನ್ಮೂಲವನ್ನು ಸೃಷ್ಟಿಸುವ ಮೂಲಕ ತನ್ನ ಬೇಸರವನ್ನು ಎದುರಿಸಲು ಒಂದು ನವೀನ ಮಾರ್ಗವನ್ನು ಕಂಡುಕೊಂಡಿದ್ದಾಳೆ. ಅದು ಅವಳ ಸ್ವಂತ ಯೂಟ್ಯೂಬ್ ಚಾನೆಲ್, ಅಲ್ಲಿ ಅವಳು ತನ್ನ ಇತರ ಮೂರು ಖಗೋಳವಿಜ್ಞಾನ-ಉತ್ಸಾಹಿ ಸ್ನೇಹಿತರೊಂದಿಗೆ ಕ್ಷುದ್ರಗ್ರಹಗಳು ಮತ್ತು ಬಾಹ್ಯಾಕಾಶದ ಬಗ್ಗೆ ಮಾತನಾಡುತ್ತಾಳೆ.
ಸಾಂದರ್ಭಿಕವಾಗಿ ಅವಳು ತನ್ನ ಚಾನೆಲ್ನಲ್ಲಿ ಪ್ರಾಧ್ಯಾಪಕರನ್ನು ಆಹ್ವಾನಿಸುತ್ತಾಳೆ. ಆಕೆಯ ಚಾನಲ್ ಈಗಾಗಲೇ 1,000 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ ಮತ್ತು ಆಕೆಯ ಇನ್ಸ್ಟಾಗ್ರಾಮ್ ಖಾತೆಯು 5,700 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದೆ. ಇನ್ನು, ಒಲಿವೆರಾ ಸ್ಪೇಸ್ ಕ್ಲಬ್ ಪಾಡ್ಕ್ಯಾಸ್ಟ್ ಇನ್ಸ್ಪೇಸ್ ಗುಂಪಿನ ಸದಸ್ಯೆಯೂ ಆಗಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ