ಭಾನುವಾರ ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳ ಮಂಡನೆ ವೇಳೆ ವಿಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಆಗ ಹಲವು ಶಾಸಕರು ಸದನದ ಬಾವಿಗೆ ಇಳಿದು ಉಪಸಭಾಪತಿ ಮೇಲೆ ದುರ್ವರ್ತನೆ ತೋರಿದ್ದರು. ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಇಂದು ಆ ಕಾರಣಕ್ಕೆ 8 ಸದಸ್ಯರನ್ನು ಒಂದು ವಾರ ಕಾಲ ಅಮಾನತುಗೊಳಿಸಿದ್ದಾರೆ.
ನವದೆಹಲಿ(ಸೆ. 21): ನಿನ್ನೆ ಭಾನುವಾರ ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳ ಮಂಡನೆ ವೇಳೆ ದುರ್ವರ್ತನೆ ತೋರಿದ್ದಾರೆಂದು ಕಾರಣ ನೀಡಿ ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರು ಎಂಟು ಸದಸ್ಯರನ್ನು ಅಮಾನತುಗೊಳಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ಡೆರೆಕ್ ಓಬ್ರಿಯಾನ್ ಮತ್ತು ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ ಅವರು ಅಮಾನತುಗೊಂಡ ಸಂಸದರ ಪೈಕಿ ಇದ್ದಾರೆ. ಇವರಿಬ್ಬರ ಜೊತೆ ಸಂಜಯ್ ಸಿಂಗ್, ರಾಜೀವ್ ಸತವ್, ಕೆ.ಕೆ. ರಾಗೇಶ್, ರಿಪುನ್ ಬೋರಾ, ಡೋಲಾ ಸೇನ್, ಸಯದ್ ನಜೀರ್ ಹುಸೇನ್ ಮತ್ತು ಇಳಮಾರನ್ ಕರೀಂ ಅವರು ಅಮಾನತುಗೊಂಡ ಇತರ ರಾಜ್ಯಸಭಾ ಸದಸ್ಯರಾಗಿದ್ಧಾರೆ. ರಾಜ್ಯಸಭಾಪತಿ ವೆಂಕಯ್ಯ ನಾಯ್ಡು ಅವರು ಈ ಎಂಟು ಮಂದಿಯನ್ನು ಒಂದು ವಾರ ಕಾಲ ಅಮಾನತುಗೊಳಿಸಿದ್ದಾರೆ.
ನಿನ್ನೆ ನಡೆದ ಅಧಿವೇಶನದ ವೇಳೆ ಕೃಷಿ ಸುಧಾರಣೆಗೆ ಸಂಬಂಧಿಸಿದ ಎರಡು ಮಸೂದೆಗಳನ್ನ ಮಂಡಿಸಲಾಗಿತ್ತು. ಈ ಮಸೂದೆಗಳು ರೈತ ವಿರೋಧಿ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ವಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಆಗ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ಕಲಾಪ ನಿರ್ವಹಿಸುತ್ತಿದ್ದರು. ಅವರ ಮೇಲೆ ಕೆಲ ಸದಸ್ಯರು ದುರ್ವರ್ತನೆ ತೋರಿದ್ದರು.
ಇಂದು ಡೆರೆಕ್ ಓಬ್ರಿಯನ್ ಅಧಿವೇಶನದಲ್ಲಿ ಮಾತನಾಡುವಾಗ ಮಧ್ಯಪ್ರವೇಶಿಸಿ ಸಭಾಪತಿ ವೆಂಕಯ್ಯ ನಾಯ್ಡು, ನಿನ್ನೆಯ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
“ನಿನ್ನೆ ರಾಜ್ಯಸಭೆಗೆ ಒಂದು ಕೆಟ್ಟ ದಿನ. ರಾಜ್ಯಸಭೆಯ ಕೆಲ ಸದಸ್ಯರು ಸದನದ ಬಾವಿಗೆ ಹೋಗಿ ಉಪಸಭಾಪತಿಗೆ ದೈಹಿಕವಾಗಿ ಬೆದರಿಕೆ ಹಾಕಿದ್ದಾರೆ. ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಇದು ಬಹಳ ದುರದೃಷ್ಟಕರ ಮತ್ತು ಖಂಡನಾರ್ಹ. ಸಂಸದರಿಗೆ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ತಿಳಿಸಬಯಸುತ್ತೇನೆ” ಎಂದು ಹೇಳಿದರು.
ಹಾಗೆಯೇ, ತೃಣಮೂಲ ಸಂಸದ ಡೆರೆಕ್ ಓಬ್ರಿಯಾನ್ ಅವರನ್ನು ಕೂಡಲೇ ಸದನದಿಂದ ಹೊರಹೋಗುವಂತೆ ಆದೇಶಿಸಿದರು. ಎಂಟು ಮಂದಿಯನ್ನು ಒಂದು ವಾರ ಕಾಲ ಅಮಾನತುಗೊಳಿಸಿರುವುದಾಗಿಯೂ ಅವರು ಸಭೆಗೆ ತಿಳಿಸಿದರು.
ಇನ್ನು, ಉಪಸಭಾಪತಿ ವಿರುದ್ಧ ವಿಪಕ್ಷಗಳು ನಡೆಸಿದ್ದ ಅವಿಶ್ವಾಸ ನಿರ್ಣಯವನ್ನು ಉಪರಾಷ್ಟ್ರಪತಿಗಳೂ ಆದ ವೆಂಕಯ್ಯ ನಾಯ್ಡು ಅವರು ತಿರಸ್ಕರಿಸಿದರು. ಈ ನಿರ್ಣಯ ಕ್ರಮಬದ್ಧವಾಗಿಲ್ಲ ಎಂದು ಕಾರಣವೊಡ್ಡಿ ಅವರು ಈ ನಿರ್ಧಾರ ತೆಗೆದುಕೊಂಡರು. ಕಲಾಪವನ್ನು ಮುಂದೂಡುವಂತೆ ಮನವಿ ಮಾಡಿದರೂ ಲೆಕ್ಕಿಸದೆ ಎರಡು ಕೃಷಿ ಮಸೂದೆಗಳ ಮಂಡನೆಗೆ ಅವಕಾಶ ನೀಡಿದ್ದ ಉಪಸಭಾಪತಿ ಹರಿವಂಶ್ ವಿರುದ್ಧ 12 ವಿಪಕ್ಷಗಳು ಅವಿಶ್ವಾಸ ನಿರ್ಣಯದ ನೋಟೀಸ್ ನೀಡಿದ್ದರು. ಹಾಗೆಯೇ, ಬಿಜೆಪಿ ಕೂಡ ನಿನ್ನೆ ದುರ್ವರ್ತನೆ ತೋರಿದ್ದ ಹಲವು ವಿಪಕ್ಷಗಳ ಸಂಸದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿತ್ತು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ