ನವದೆಹಲಿ(ಸೆ. 25): ರೈತರು, ಕಾರ್ಮಿಕರ ಕಲ್ಯಾಣದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಹಿಂದಿನ ಸರ್ಕಾರಗಳು ವಂಚನೆ ಮಾಡಿವೆ. ಅವರದ್ದು ಬರೀ ಪೊಳ್ಳು ಆಶ್ವಾಸನೆಗಳಾಗಿವೆ. ನಮ್ಮ ಸರ್ಕಾರ ಜಾರಿಗೆ ತರುತ್ತಿರುವ ಕೃಷಿ ಮತ್ತು ಕಾರ್ಮಿಕ ಸುಧಾರಣೆಗಳು ರೈತರ ಮತ್ತು ಕಾರ್ಮಿಕರ ಅಭ್ಯುದಯಕ್ಕೆ ಎಡೆ ಮಾಡಿಕೊಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ಧಾರೆ. ಕೇಂದ್ರದ ಕೃಷಿ ಮಸೂದೆಗಳ ವಿರುದ್ಧ ನಡೆಸಲಾಗುತ್ತಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ದೇಶದ ಜನತೆಗೆ ಪ್ರಧಾನಿ ಮೋದಿ ಈ ಸಂದೇಶ ರವಾನಿಸಿದ್ದಾರೆ.
“ರೈತರು ಮತ್ತು ಕಾರ್ಮಿಕರ ಹೆಸರಿನಲ್ಲಿ ಈ ಹಿಮದೆ ಅನೇಕ ಬಾರಿ ಸರ್ಕಾರಗಳು ಸ್ಥಾಪನೆಯಾಗಿವೆ. ಆದರೆ, ಅವು ಮಾಡಿರುವುದಾದರೂ ಏನನ್ನು? ಬರೀ ಪೊಳ್ಳು ರೈತರು ಮತ್ತು ಕಾರ್ಮಿಕರಿಗೆ ಅರಿವಾಗದ ರೀತಿಯಲ್ಲಿ ಆಶ್ವಾಸನೆ ಮತ್ತು ಕಾನೂನುಗಳ ಸಿಕ್ಕುಗಳನ್ನ ಸೃಷ್ಟಿಸಿವೆ ಅಷ್ಟೇ” ಎಂದು ಮೋದಿ ಹೇಳಿದ್ದಾರೆ.
“ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಈ ಪರಿಸ್ಥಿತಿಯನ್ನು ಸುಧಾರಿಸಲು ನಿರಂತರವಾಗಿ ಹೆಜ್ಜೆ ಇರಿಸುತ್ತಿದೆ. ರೈತರ ಬೆಳೆಗಳಿಗೆ ಈ ಮೊದಲು ನೀಡಲಾಗುತ್ತಿದ್ದ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯನ್ನು ಹೆಚ್ಚಿಸಿದ್ದೇವೆ. ರೈತರು ತಮ್ಮ ಬೆಳೆ ಬೆಳೆಯಲು ತಗುಲುವ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚು ದರವನ್ನು ಎಂಎಸ್ಪಿಯಾಗಿ ನಿಗದಿ ಮಾಡಿದ್ದೆವೆ…. ಪಶುಸಾಕಾಣಿಕೆ ರೈತರು ಮತ್ತು ಮೀನುಗಾರರಿಕೆಯಲ್ಲಿ ತೊಡಗಿದವರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ನ ಸೌಲಭ್ಯ ವಿಸ್ತರಿಸಿದ್ಧೇವೆ.
ಇದನ್ನೂ ಓದಿ: Bharat Bandh – ದೇಶಾದ್ಯಂತ ಭಾರತ್ ಬಂದ್; ಉತ್ತರ ಭಾರತದಲ್ಲಿ ಪ್ರತಿಭಟನೆ ತೀವ್ರ
”ಸ್ವಾತಂತ್ರ್ಯ ಬಂದು ಹಲವು ದಶಕಗಳ ಕಾಲ ರೈತರು ಮತ್ತು ಕಾರ್ಮಿಕರ ಹೆಸರಿನಲ್ಲಿ ಹಲವು ಸ್ಲೋಗನ್ಗಳನ್ನ ಸೃಷ್ಟಿಸಲಾಯಿತು. ದೊಡ್ಡದೊಡ್ಡ ಪ್ರಣಾಳಿಕೆಗಳನ್ ಬರೆಯಲಾಯಿತು. ಆದರೆ, ಕಾಲಾನಂತರದಲ್ಲಿ ಇವೆಲ್ಲಾ ಎಷ್ಟು ಪೊಳ್ಳು ಎಂಬುದು ಸಾಬೀತಾಗಿದೆ. ರೈತರಿಗೆ ಯಾವಾಗಲೂ ಸುಳ್ಳು ಹೇಳುತ್ತಾ ಬಂದ ಕೆಲ ಜನರು ಈಗ ತಮ್ಮ ರಾಜಕೀಯ ಸ್ವಾರ್ಥಕ್ಕೋಸ್ಕರ ರೈತರನ್ನ ಗೊಂದಲಕ್ಕೆ ಕೆಡವಿದ್ದಾರೆ. ಊಹಾಪೋಹಗಳನ್ನ ಹರಡುತ್ತಿದ್ದಾರೆ” ಎಂದು ಪ್ರಧಾನಿ ಮೋದಿ ಕುಟುಕಿದ್ದಾರೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಮೂರು ಕೃಷಿ ಮಸೂದೆಗಳನ್ನ ಸಂಸತ್ನ ಎರಡೂ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆದಿದೆ. ರಾಷ್ಟ್ರಪತಿ ಅಂಕಿತ ಹಾಕಿದ ನಂತರ ಇವು ಕಾಯ್ದೆಗಳಾಗಿ ಜಾರಿಗೆ ಬರಲಿವೆ. ಆದರೆ, ಕಾಂಗ್ರೆಸ್ ಸೇರಿದಂತೆ ಬಹುತೇಕ ವಿಪಕ್ಷಗಳು ಈ ಮಸೂದೆಗಳನ್ನ ಬಲವಾಗಿ ವಿರೋಧಿಸಿವೆ. ಕೃಷಿ ಕ್ಷೇತ್ರವನ್ನು ಖಾಸಗಿಯವರಿಗೆ ವಹಿಸಿ ರೈತರನ್ನು ಭೂಮಿರಹಿತರನ್ನಾಗಿ ಹಾಗೂ ಗುಲಾಮರನ್ನಾಗಿ ಮಾಡುವ ಹುನ್ನಾರ ಎಂಬುದು ವಿಪಕ್ಷಗಳ ಟೀಕೆ. ಹಾಗೆಯೇ, ಕಾಯ್ದೆಯಲ್ಲಿ ಎಂಎಸ್ಪಿಯನ್ನು ಸೇರಿಸಿಲ್ಲ ಎಂಬುದೂ ಪ್ರಮುಖ ಆಕ್ಷೇಪವಾಗಿದೆ. ಆದರೆ, ಹಿಂದಿನ ಕಾಯ್ದೆಗಳಲ್ಲೂ ಎಂಎಸ್ಪಿ ಇರಲಿಲ್ಲ. ಈಗಲೂ ಅದನ್ನು ಸೇರಿಸಿಲ್ಲ ಅಷ್ಟೇ. ಎಂಎಸ್ಪಿ ನೀಡುವುದು ಅದು ಕೇವಲ ಆಡಳಿತಾತ್ಮಕ ನಿರ್ಧಾರ ಮಾತ್ರ. ತಮ್ಮ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಸೌಲಭ್ಯಕ್ಕೆ ಯಾವತ್ತೂ ವಿರೋಧ ಮಾಡಿಲ್ಲ. ಬದಲಾಗಿ, ಬೆಂಬಲ ಬೆಲೆ ಪ್ರಮಾಣವನ್ನು ಹೆಚ್ಚಿಸಿದ್ದೇವೆ ಎಂಬುದು ಸರ್ಕಾರದ ವಾದ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ