ಬರೇಲಿ: ದಿನ ಬೆಳಗಾದರೆ ಅದೆಷ್ಟೋ ಮಂದಿ ದೇವಾಲಯಕ್ಕೆ ಹೋಗುತ್ತಾರೋ ಬಿಡುತ್ತಾರೋ, ಆದರೆ ಬಾರ್ (Bar) ಮುಂದೆ ಮಾತ್ರ ತಪ್ಪದೇ ಹಾಜರಾಗುತ್ತಾರೆ. ಒಮ್ಮೆ ಪರಮಾತ್ಮ ಹೊಟ್ಟೆ ಒಳಗೆ ಸೇರಿದರೆ ಕೆಲವರಂತೂ ಜಗತ್ತನ್ನೇ ಮರೆತು ಬಿಟ್ಟಿರುತ್ತಾರೆ. ಕೆಲ ಮಂದಿ ರಸ್ತೆಯಲ್ಲಿಯೇ ಬಿದ್ದು ಒದ್ದಾಡಿದರೆ, ಇನ್ನೂ ಸ್ವಲ್ಪ ಜನ ಬಾಯಿಗೆ ಬಂದಂತೆ ಮಾತನಾಡುತ್ತಿರುತ್ತಾರೆ. ಮತ್ತೆ ಕೆಲವರು ಎಣ್ಣೆ (Alcohol) ನಶೆಯಲ್ಲಿ ಕ್ರೂರವಾಗಿ ವರ್ತಿಸುವುದು, ಇತರರ ಮೇಲೆ ದಬ್ಬಾಳಿಕೆ ನಡೆಸುವುದನ್ನು ನಾವು ಕೇಳಿರುತ್ತೇವೆ. ಆದರೆ ವ್ಯಕ್ತಿಯೋರ್ವ ಕುಡಿದ ಅಮಲಿನಲ್ಲಿ ನಂಚಿಕೊಳ್ಳಲು ನಾಯಿಮರಿಗಳ (Dog) ಬಾಲ ( Tail), ಕಿವಿ (Ear) ಕತ್ತರಿಸಿ ಅದಕ್ಕೆ ಉಪ್ಪು ಸವರಿ ತಿಂದು ಮದ್ಯ ಸೇವಿಸಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ(Uttar Pradesh) ನಡೆದಿದೆ.
ಬರೇಲಿ ಜಿಲ್ಲೆಯ ಫರೀದ್ಪುರ ಪ್ರದೇಶದ ಎಸ್ಡಿಎಂ ಕಾಲೋನಿಯಲ್ಲಿ ಘಟನೆ
ಸಾಮಾನ್ಯವಾಗಿ ಮದ್ಯ ಸೇವಿಸುವವರು ನಂಚಿಕೊಳ್ಳಲು ಉಪ್ಪಿನ ಕಾಯಿ, ಚಿಪ್ಸ್, ಸೌತೆಕಾಯಿ, ಕ್ಯಾರಂಟ್, ಚಿಕನ್, ಮಟನ್, ಫಿಶ್ ಹೀಗೆ ಹಲವಾರು ತಿಂಡಿಗಳನ್ನು ನಂಚಿಕೊಳ್ಳುತ್ತಾ, ಮದ್ಯವನ್ನು ಸೇವಿಸುತ್ತಾರೆ. ಆದರೆ ವ್ಯಕ್ತಿಯೋರ್ವ ಮುಗ್ದ ನಾಯಿಮರಿಗಳ ಕಿವಿ, ಬಾಲ ಕತ್ತರಿಸಿ, ಅದಕ್ಕೆ ಉಪ್ಪು ಸವರಿ ತಿನ್ನುತ್ತಾ ಮದ್ಯ ಸೇವಿಸಿದ್ದಾನೆ. ಇನ್ನೂ ಬರೇಲಿ ಜಿಲ್ಲೆಯ ಫರೀದ್ಪುರ ಪ್ರದೇಶದ ಎಸ್ಡಿಎಂ ಕಾಲೋನಿಯಲ್ಲಿ ಈ ಘಟನೆ ವರದಿಯಾಗಿದೆ.
ನಾಯಿ ಮರಿಗಳ ಸ್ಥಿತಿ ಚಿಂತಾಜನಕ
ಈ ಕುರಿತಂತೆ ಪ್ರತಿಕ್ರಿಯಿಸಿದ ಪೊಲೀಸರು, ವ್ಯಕ್ತಿ ನಾಯಿ ಮರಿಗಳಲ್ಲಿ ಒಂದು ನಾಯಿ ಮರಿಯ ಕಿವಿ ಮತ್ತು ಇನ್ನೊಂದು ನಾಯಿ ಮರಿಯ ಬಾಲವನ್ನು ಕತ್ತರಿಸಿದ್ದಾನೆ. ಇದರಿಂದ ಎರಡೂ ನಾಯಿ ಮರಿಗಳಿಗೂ ತೀವ್ರ ರಕ್ತಸ್ರಾವವಾಗಿದ್ದು, ಅವುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವುಗಳ ಸ್ಥಿತಿ ಚಿಂತಾಜನಕವಾಗಿದ್ದು, ಎರಡೂ ಮರಿಗಳಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಆರೋಪಿಯನ್ನು ಮುಖೇಶ್ ವಾಲ್ಮೀಕಿ ಎಂದು ಗುರುತಿಸಲಾಗಿದ್ದು, ಆರೋಪಿ ಮತ್ತು ಮುಖೇಶ್ ವಾಲ್ಮೀಕಿ ಎಂಬ ಮತ್ತೋರ್ವ ವ್ಯಕ್ತಿ ಮದ್ಯಪಾನ ಸೇವಿಸುತ್ತಿದ್ದಾಗ ಈ ಅಮಾನವೀಯ ಕೃತ್ಯವೆಸಗಿದ್ದಾನೆ. ಇದೀಗ ಈ ಬಗ್ಗೆ ಪ್ರಾಣಿಗಳ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯ ಸದಸ್ಯರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿ ವಿರುದ್ಧ ಪ್ರಕರಣ ದಾಖಲು
ಸದ್ಯ ಪೊಲೀಸರು ಆರೋಪಿ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಖಿಲೇಶ್ ಚೌರಾಸಿಯಾ ಅವರು, ಈ ಸಂಬಂಧ ತನಿಖೆ ಆರಂಭಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ನಾಯಿ ಮರಿಯನ್ನು ಕಲ್ಲು ಹೊಡೆದು ಕೊಂದಿದ್ದ ಮತ್ತೊಂದು ಘಟನೆ
ಬರೇಲಿ ಜಿಲ್ಲೆಯಲ್ಲಿ ಪ್ರಾಣಿಹಿಂಸೆ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಇದೇ ಮೊದಲಲ್ಲ. ಈ ಮುನ್ನ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ (ICAR-IVRI) ಇಲಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಯಾರೋ ಇಲಿಯ ಬಾಲಕ್ಕೆ ಕಲ್ಲು ಕಟ್ಟಿ ಚರಂಡಿಯಲ್ಲಿ ಮುಳುಗಿಸಿ ಸಾಯಿಸಲು ಯತ್ನಿಸಿರುವ ಪ್ರಕರಣ ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ ಮತ್ತೊಂದು ಪ್ರಕರಣದಲ್ಲಿ ನಾಯಿ ಮರಿಯನ್ನು ಕಲ್ಲಿನಿಂದ ಹೊಡೆದು ಕೊಂದು ಅದರ ದೇಹವನ್ನು ಆರೋಪಿಗಳು ಬಚ್ಚಿಟ್ಟಿದ್ದರು.
ಒಟ್ಟಾರೆ, ನಾಯಿ ಮರಿಯನ್ನು ಮನೆಯ ಸದಸ್ಯನಂತೆ ಸಾಕುವ, ಪ್ರೀತಿಸುವವರ ಮಧ್ಯೆ ಇಂತಹ ಕ್ರೂರ ಜನ, ಮುಗ್ದ ಪ್ರಾಣಿಗಳಿಗೆ ಚಿತ್ರ ಹಿಂಸೆ ನೀಡುತ್ತಿರುವ ಘಟನೆಗಳು ಕೂಡ ಹೆಚ್ಚಾಗುತ್ತಿದೆ. ಇಂತಹ ಜನರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡು ಆರೋಪಿಗಳಿಗೆ ತಕ್ಕ ಶಿಕ್ಷೆ ಒದಗಿಸಬೇಕು ಎಂಬುವುದೇ ಎಲ್ಲರ ಆಶಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ