ಡ್ಯ್ರಾಗನ್ ದೇಶ ದಕ್ಷಿಣ ಚೀನಾ ಸಮುದ್ರದ ಮೇಲೆ ಹಕ್ಕು ಸ್ಥಾಪನೆ ಮಾಡಲು ಮುಂದಾದ ಕ್ರಮವನ್ನು ಭಾರತ, ಅಮೆರಿಕ ನಂತರ ಇದೀಗ ಆಸ್ಟ್ರೇಲಿಯಾ ಸಹ ವಿರೋಧಿಸಿದೆ. ಈ ಮೂಲಕ ದಕ್ಷಿಣ ಚೀನಾ ಸಮುದ್ರ ವಿವಾದ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ವಿವಾದವಾಗಿ ಬೆಳಯುತ್ತಿದೆ. ಅಲ್ಲದೆ, ಚೀನಾ ಮೇಲೆ ಅಂತಾರಾಷ್ಟ್ರೀಯ ಒತ್ತಡವೂ ಹೆಚ್ಚುತ್ತಿದೆ.
ದಕ್ಷಿಣ ಚೀನಾ ಸಮುದ್ರವನ್ನು ಸ್ವಚ್ಛಗೊಳಿಸುವ ಸಲುವಾಗಿ ಚೀನಾ ಹೊಸ ತಂತ್ರಜ್ಞಾನವನ್ನು ಬಳಸುತ್ತಿದೆ. ಈ ಮೂಲಕ ದಕ್ಷಿಣ ಚೀನಾ ಸಮುದ್ರದ ಮೇಲೆ ತನ್ನ ಹಕ್ಕು ಸ್ಥಾಪನೆಯನ್ನು ಪ್ರತಿನಿಧಿಸುತ್ತಿದೆ. ಈ ವಿಚಾರವಾಗಿ ಗುರುವಾರ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಜೊತೆಗೆ ಭೇಟಿ ಮಾಡಿ ಮಾತನಾಡಿರುವ ಆಸ್ಟ್ರೇಲಿಯಾ ಹೈ ಕಮಿಷನರ್ ಬ್ಯಾರಿ ಓ ಫಾರೆಲ್, ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಅಲ್ಲದೆ “ಚೀನಾ ಈ ಭಾಗದಲ್ಲಿ ಕಾನೂನು ಬಾಹೀರ ಚಟುವಟಿಕೆಗೆ ಮುಂದಾಗಿದೆ. ಅಂತಾರಾಷ್ಟ್ರೀಯ ಕಡಲ ಹಕ್ಕನ್ನು ಇತರ ದೇಶಗಳಿಗೆ ನಿರಾಕರಿಸುತ್ತಿದೆ. ಯಥಾಸ್ಥಿತಿಯನ್ನು ಏಕ ಪಕ್ಷೀಯವಾಗಿ ಬದಲಿಸುವ ಯಾವುದೇ ಪ್ರಯತ್ನವನ್ನು ನಾವು ವಿರೋಧಿಸುತ್ತೇವೆ. ಪ್ರಸ್ತುತ ಚೀನಾ ಸರ್ಕಾರ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಉದ್ವಿಗ್ನತೆಯ ವಾತಾವರಣ ನಿರ್ಮಿಸುತ್ತಿದೆ. ಈ ಕುರಿತು ವಿಶ್ವಸಂಸ್ಥೆಗೆ ದೂರು ನೀಡುವುದಾಗಿ” ತಿಳಿಸಿದ್ದಾರೆ.
ಚೀನಾ ದೇಶದ ಈ ಕ್ರಮವನ್ನು ಅಮೆರಿಕ ಸಹ ಹಲವು ದಿನಗಳಿಂದ ವಿರೋಧಿಸುತ್ತಲೇ ಇದೆ. ಇದೀಗ ಆಸ್ಟ್ರೇಲಿಯಾ ತನ್ನ ತಕರಾರನ್ನು ಮುಂದಿಡುತ್ತಿದ್ದಂತೆ ಈ ಕುರಿತು ಮಾತನಾಡಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ”ಇಂಡೋ ಪೆಸಿಫಿಕ್ ಸಮುದ್ರದಲ್ಲಿ ಚೀನಾ ಕಾನೂನು ಬಾಹೀರ ಚಟುವಟಿಕೆಗೆ ಮುಂದಾಗಿದ್ದು, ಆಸ್ಟ್ರೇಲಿಯಾ ದೇಶವೂ ನಮ್ಮಂತೆಯೇ ತಕರಾರು ದಾಖಲಿಸಿದೆ. ಆಸ್ಟ್ರೇಲಿಯಾ ಮಾತ್ರವಲ್ಲದೆ ಜಪಾನ್, ಲಂಡನ್ ಸಹ ಈ ವಿಚಾರದಲ್ಲಿ ಚೀನಾವನ್ನು ವಿರೋಧಿಸಿದೆ” ಎಂದಿದ್ದಾರೆ.
ಇದೇ ವಿಚಾರವಾಗಿ ಅಮೆರಿಕ ಸೆನೆಟ್ ವಿದೇಶಾಂಗ ಸಮಿತಿಯ ಮುಂದೆಯೂ ಮಾತನಾಡಿದ್ದ ಮೈಕ್ ಪೊಂಪಿಯೊ, “ಭಾರತ ಸರ್ಕಾರ ತನ್ನ ನಾಗರೀಕರ ಗೌಪ್ಯತೆ ಮತ್ತು ಸುರಕ್ಷತೆಗೆ ಧಕ್ಕೆ ತಂದಿರುವ ಸುಮಾರು 106 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. ಚೀನಾದ ಕಮ್ಯೂನಿಸ್ಟ್ ಸರ್ಕಾರದ ಬೆದರಿಕೆಗಳನ್ನು ತಗ್ಗಿಸಲು ಎಲ್ಲರೂ ಇಂತಹ ಕ್ರಮಗಳಿಗೆ ಮುಂದಾಗಬೇಕು” ಎಂದು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ : ಸೌತ್ ಚೀನಾ ಸಮುದ್ರ ಚೀನಾದ ಸಾಗರ ಸಾಮ್ರಾಜ್ಯವಲ್ಲ; ಮುಕ್ತರಾಷ್ಟ್ರಗಳು ಒಗ್ಗೂಡಿ ವಿರೋಧಿಸಬೇಕು: ಅಮೆರಿಕ
ದಕ್ಷಿಣ ಚೀನಾ ಸಮುದ್ರ ವಿಚಾರದಲ್ಲಿ ದೂರದ ಅಮೆರಿಕಕ್ಕೆ ಆಸಕ್ತಿ ಇರಲು ಪ್ರಬಲ ಕಾರಣವಿದೆ. ಇದೇ ಸಮುದ್ರದ ಮೇಲೆ ಪ್ರಮುಖ ಜಲಮಾರ್ಗ ಇದೆ. ಇಲ್ಲಿ ಪ್ರತೀ ವರ್ಷ 3 ಟ್ರಿಲಿಯನ್ ಡಾಲರ್, ಅಂದರೆ ಸುಮಾರು 200 ಲಕ್ಷ ಕೋಟಿ ರೂಪಾಯಿಯಷ್ಟು ವಹಿವಾಟು ಇದೇ ಜಲಮಾರ್ಗದಿಂದ ಹಾದುಹೋಗುತ್ತದೆ. ಇಲ್ಲಿ ಚೀನಾ ತನ್ನ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಿದೆ. ಜಲ ಮಾರ್ಗದ ಸಮೀಪವೇ ಚೀನಾ ನೌಕಾನೆಲೆ ಸ್ಥಾಪಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ