ನವದೆಹಲಿ (ಫೆ. 25): ವೈದ್ಯಕೀಯ ಉಪಕರಣಗಳ ಉತ್ಪಾದನೆಯಲ್ಲಿ ಭಾರತವನ್ನು ಸಂಪೂರ್ಣ ಸ್ವಾವಲಂಬಿಯಾಗಿಸಲು ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ರೂಪಿಸಿದ್ದು 2025ರ ವೇಳೆಗೆ ಈ ವಲಯವು 3.6 ಲಕ್ಷ ಕೋಟಿ ರೂಪಾಯಿ (ಸುಮಾರು 50 ಶತಕೋಟಿ ಯು.ಎಸ್. ಡಾಲರ್) ಉದ್ಯಮವಾಗಿ ಬೆಳೆಯಲಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆಯು ಭಾರತೀಯ ವಾಣಿಜ್ಯ ಹಾಗೂ ಕೈಗಾರಿಕಾ ಸಂಘಗಳ ಒಕ್ಕೂಟ ಮತ್ತು ಇನ್ವೆಸ್ಟ್ ಇಂಡಿಯಾ ಸಂಸ್ಥೆಗಳು ದೆಹಲಿಯಲ್ಲಿ ನಾಲ್ಕು ದಿನಗಳ ‘ಇಂಡಿಯಾ ಫಾರ್ಮಾ - 2021’ ಹಾಗೂ ‘ಇಂಡಿಯಾ ಮೆಡಿಕಲ್ ಡಿವೈಸ್ - 2021’ ಬಂಡವಾಳ ಹೂಡಿಕೆ ಸಮಾವೇಶ ನಡೆಸಲಿವೆ. ಇದನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಬೇರೆ ಬೇರೆ ಭಾಗಗಳಲ್ಲಿ ನಾಲ್ಕು ಮೆಡಿಕಲ್ ಡಿವೈಸ್ ಪಾರ್ಕ್ (ವೈದ್ಯಕೀಯ ಉಪಕರಣ ಉತ್ಪಾದನೆ ಕೇಂದ್ರಿತವಾದ ಕೈಗಾರಿಕಾ ಕ್ಲಸ್ಟರ್) ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕೈಗಾರಿಕಾ ಕ್ಲಸ್ಟರುಗಳಲ್ಲಿ ಆಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಕಲ್ಪಿಸಲು ಕೇಂದ್ರವು ಬಂಡವಾಳ ಹೂಡುತ್ತಿದೆ. ಅಲ್ಲದೆ 3420 ಕೋಟಿ ರೂಪಾಯಿ ಉತ್ಪಾದನಾ ಆಧಾರಿತ ಪ್ರೋತ್ಸಾಹಧನ ಯೋಜನೆಯನ್ನು ರೂಪಿಸಲಾಗಿದೆ ಎಂದು ವಿವರಿಸಿದರು.
ಭಾರತವನ್ನು ಜಗತ್ತಿನ ಔಷಧೋದ್ಯಮ ತಾಣವಾಗಿ ರೂಪಿಸಲು ಕೂಡ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ದೇಶದ ಮೂರು ಕಡೆ ಬಲ್ಕ್ ಡ್ರಗ್ ಕೈಗಾರಿಕಾ ಕ್ಲಸ್ಟರುಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಇವುಗಳಲ್ಲಿ ಆಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಕಲ್ಪಿಸಲು ನಮ್ಮ ಇಲಾಖೆಯು ತಲಾ 1000 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಇಲ್ಲಿ ಕಲ್ಪಿಸಲಾಗುವ ಆಧುನಿಕ ಸೌಲಭ್ಯಗಳಲನ್ನು ಎಲ್ಲಾ ಕಂಪನಿಗಳು ಬಳಸಿಕೊಳ್ಳಬಹುದಾಗಿದೆ. ಹಾಗೆಯೇ ಈ ವಲಯದಲ್ಲಿ ಕೂಡ ಉತ್ಪಾದನಾ ಆಧಾರಿತ ಪ್ರೋತ್ಸಾಹಧನ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಈ ಮೊದಲು 6940 ಕೋಟಿ ರೂಪಾಯಿ ಒದಗಿಸಲಾಗಿತ್ತು. ಈಗ ಹೆಚ್ಚುವರಿಯಾಗಿ 15000 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಕೂಡ ಭಾರತದಲ್ಲಿ ಅತಿಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯಾಗಿದೆ. ಔಷಧೋದ್ಯಮದಲ್ಲಿಯೂ ದೊಟ್ಟ ಮಟ್ಟದಲ್ಲಿ ಬಂಡವಾಳ ಹೂಡಿಕೆಯಾಗುತ್ತಿದೆ. ಹೀಗಾಗಿ ಭಾರತದ ಔಷಧ ವಲಯವು 2030ರ ವೇಳೆಗೆ ವಾರ್ಷಿಕವಾಗಿ 130 ಶತಕೋಟಿ ಯು.ಎಸ್. ಡಾಲರ್ (ಸುಮಾರು 9.44 ಲಕ್ಷ ಕೋಟಿ ರೂ) ವಹಿವಾಟು ನಡೆಸುವ ಉದ್ಯಮವಾಗಿ ಬೆಳೆಯುವುದೆಂದು ನಿರೀಕ್ಷಿಸಲಾಗಿದೆ ಎಂದು ಸದಾನಂದಗೌಡ ಹೇಳಿದರು.
ಇದನ್ನು ಓದಿ: ಗ್ರೀನ್ ಕಾರ್ಡ್ ವಿತರಣೆ ಮೇಲಿನ ನಿಷೇಧ ತೆರವು, ಅಮೆರಿಕದಲ್ಲಿರುವ ಲಕ್ಷಾಂತರ ಭಾರತೀಯರಿಗೆ ರಿಲೀಫ್
ಔಷಧ ಕ್ಷೇತ್ರದಲ್ಲಿ ಭಾರತವು ಈಗಾಗಲೇ ಸಾಕಷ್ಟು ಸಾಧನೆ ಮಾಡಿದೆ. ಕೊರೋನಾ ಸಂದರ್ಭದಲ್ಲಿ ಜಗತ್ತು ಭಾರತದ ಸಾಮರ್ಥ್ಯವೇನೆಂಬುದನ್ನು ನೋಡಿದೆ. ತುರ್ತು ಸಂದರ್ಭದಲ್ಲಿ ಔಷಧಗಳಿಗಾಗಿ ಭಾರತವನ್ನು ಅವಲಂಬಿಸಬಹುದು ಎಂಬುದು ಜಗತ್ತಿಗೆ ಮನವರಿಕೆಯಾಗಿದೆ. ಯಾಕೆಂದರೆ ಕೊರೊನಾ ಸಂಕಷ್ಟದ ಸಮಯದಲ್ಲೂ ಭಾರತದ ಔಷಧೋದ್ಯಮವು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಅಮೋಘ ಸೇವೆ ಸಲ್ಲಿಸಿತು. ಜಗತ್ತಿನ ಬಹುತೇಕ ದೇಶಗಳಿಗೆ ಜೀವರಕ್ಷಕ ಔಷಧಗಳನ್ನು ಪೂರೈಸಿತು. ಈಗ ಕೊರೋನಾ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ದೇಶದ ಜನರಿಗಷ್ಟೇ ಅಲ್ಲದೇ ವಿಶ್ವದ ಅನೇಕ ರಾಷ್ಟ್ರಗಳಿಗೆ ಇವನ್ನು ಪೂರೈಸಲಾಗುತ್ತಿದೆ. ಇದರಿಂದ ಜಗತ್ತಿನಲ್ಲಿ ಭಾರತದ ಗೌರವ ಇನ್ನಷ್ಟು ಹೆಚ್ಚುವಂತಾಯಿತು. ಇದಕ್ಕಾಗಿ ಔಷಧೋದ್ಯಮದ ಉದ್ದಿಮೆದಾರರನ್ನು ನಮ್ಮ ವಿಜ್ಞಾನಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ