ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಹೌರಾ ನಿಲ್ದಾಣದಲ್ಲಿ (Howrah Station) ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (Vande Bharat express) ಉದ್ಘಾಟನಾ ಮಾಡಲಾಯಿತು. ಈ ವೇಳೆ ದೊಡ್ಡ ಹೈಡ್ರಾಮಾವೇ ನಡೆದಿದೆ. ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಿದ ಬಳಿಕ ಮಮತಾ ಬ್ಯಾನರ್ಜಿ (West Bengal Chief Minister Mamata Banerjee) ಅವರು ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ್ದಾರೆ. ರೈಲ್ವೇ ನಿಲ್ದಾಣದಲ್ಲಿ ನೆರೆದಿದ್ದ ಜನರ ಗುಂಪಿನ ಒಂದು ವಿಭಾಗದಿಂದ ಜೈ ಶ್ರೀರಾಮ್ (Jai Sriram) ಎಂಬ ಘೋಷಣೆ ಜೋರಾಗಿ ಕೇಳಿ ಬಂದಿದ್ದರಿಂದ ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶಗೊಂಡು, ಉದ್ಘಾಟನೆ ಕಾರ್ಯಕ್ರಮದ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದರು.
ಪರ್ಯಾಯವಾಗಿ ಹಾಕಲಾಗಿದ್ದ ಕುರ್ಚಿಯಲ್ಲಿ ಕುಳಿತ ಮಮತಾ ಬ್ಯಾನರ್ಜಿ
ಇದೇ ವೇಳೆ, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯಪಾಲ ಸಿವಿ ಆನಂದ ಬೋಸ್ ಮಮತಾ ಬ್ಯಾನರ್ಜಿ ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರು. ಆದರೆ, ಅವರ ಎಲ್ಲ ಪ್ರಯತ್ನಗಳು ವಿಫಲವಾಯಿತು. ನಂತರ ಕಾರ್ಯಕ್ರಮದ ಉದ್ದಕ್ಕೂ ವೇದಿಕೆಗೆ ಪರ್ಯಾಯವಾಗಿ ಹಾಕಲಾಗಿದ್ದ ಕುರ್ಚಿಯ ಮೇಲೆ ಕುಳಿತುಕೊಂಡರು. ಪ್ರಾರಂಭದಲ್ಲಿ ಮಮತಾ ಬ್ಯಾನರ್ಜಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲು ನಿರಾಕರಿಸಿದರು ಆದರೆ ರಾಜ್ಯಪಾಲರಾದ ಸಿವಿ ಆನಂದ ಬೋಸ್ ಅವರ ಮನವಿಯ ಹಿನ್ನೆಲೆ ಭಾಷಣ ಮಾಡಿದರು.
ವೀಡಿಯೋ ಕಾನ್ಫಿರೆನ್ಸ್ ಮೂಲಕ ವಿವಿಧ ರೈಲ್ವೆ ಯೋಜನೆ ಉದ್ಘಾಟಿಸಿದ ಮೋದಿ
ಮೋದಿ ಅವರು ತಾಯಿಯ ಅಂತಿಮ ಸಂಸ್ಕಾರವಿದ್ದ ಹಿನ್ನೆಲೆ ವೀಡಿಯೋ ಕಾನ್ಫಿರೆನ್ಸ್ ಮೂಲಕ ಪಶ್ಚಿಮ ಬಂಗಾಳದ ವಿವಿಧ ರೈಲ್ವೆ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ಮಾಡಿದರು. ಹೌರಾ ಮತ್ತು ನ್ಯೂ ಜಲ್ಪೈಗುರಿಯನ್ನು ಸಂಪರ್ಕಿಸುವ ಬಂಗಾಳದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ಇದಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಅವರು, ಇಂದು ನಾನು ಪಶ್ಚಿಮ ಬಂಗಾಳಕ್ಕೆ ಬರಬೇಕಾಗಿತ್ತು. ಆದರೆ ನನ್ನ ವೈಯಕ್ತಿಕ ಕಾರಣಗಳಿಂದ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಬಂಗಾಳದ ಜನತೆಗೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Heeraben Modi: ತಾಯಿ ಕಲಿಸಿದ ಪಾಠದಿಂದ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ್ದ ಪ್ರಧಾನಿ ಮೋದಿ!
ದಯಾ ಮಾಡಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ- ಮೋದಿಗೆ ದೀದಿ ಸಾಂತ್ವಾನ
ನಂತರ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, ನಮಗೆ ಈ ಅವಕಾಶ ನೀಡಿದ್ದಕ್ಕಾಗಿ ಪಶ್ಚಿಮ ಬಂಗಾಳದ ಜನತೆ ಪರವಾಗಿ ಧನ್ಯವಾದ ತಿಳಿಸುತ್ತೇನೆ. ಇಂದು ನಿಮಗೆ ದುಃಖದ ದಿನ. ನಿಮ್ಮ ತಾಯಿ ನಮಗೂ ತಾಯಿ ಇದ್ದಂತೆ. ನಿಮ್ಮ ಕೆಲಸಗಳನ್ನು ಮುಂದುವರಿಸಲು ದೇವರು ನಿಮಗೆ ಶಕ್ತಿ ನೀಡಲಿ. ದಯಾ ಮಾಡಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ನಿಮಗೆ ಹೇಗೆ ಸಮಾಧಾನ ಪಡಿಸಬೇಕೋ ಗೊತ್ತಿಲ್ಲ. ನನಗೂ ನನ್ನ ತಾಯಿಯ ನೆನಪಾಗುತ್ತಿದೆ ಎಂದು ಸಾಂತ್ವಾನ ಹೇಳಿದರು.
ಮುಂಜಾನೆ ಮೋದಿ ತಾಯಿ ನಿಧನ
ಅನಾರೋಗ್ಯದಿಂದ ಬಳಲುತ್ತಿದ್ದ ಹೀರಾಬೆನ್ ಅವರನ್ನು ಬುಧವಾರ ಅಹಮದಾಬಾದ್ನ ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆಂಡ್ ರೀಸಚ್ರ್ ಸೆಂಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಮುಂಜಾನೆ 3.39ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಹೀರಾಬೆಮ್ ಅವರು ಕೊನೆಯುಸಿರೆಳೆದಿದ್ದಾರೆ.
ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಯ್ಸನ್ ಗ್ರಾಮಕ್ಕೆ ಆಗಮಿಸಿದ ಮೋದಿ ಅಂತಿಮ ದರ್ಶನ ಪಡೆದು ಅಂತ್ಯಸಂಸ್ಕಾರದಲ್ಲಿ ಭಾಗಿಯಾದರು. ಹೀರಾಬೆನ್ ಅವರ ಅಂತ್ಯಸಂಸ್ಕಾರವನ್ನು ಗಾಂಧಿನಗರದಲ್ಲಿರುವ ಚಿತಾಗಾರದಲ್ಲಿ ನೆರವೇರಿಸಲಾಯಿತು. ತಾಯಿಯ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಮೋದಿ ನಂತರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ಅಮ್ಮನ ಬಗ್ಗೆ ಮೋದಿ ಭಾವನಾತ್ಮಕ ಟ್ವೀಟ್ಗಳು
ಜೊತೆಗೆ ತಾಯಿಯ ಬಗ್ಗೆ ಟ್ವೀಟ್ ಮಾಡಿರುವ ಮೋದಿ ನೂರು ವರ್ಷಗಳ ಶ್ರೇಷ್ಠ ಪ್ರಯಾಣ ಮುಗಿದಿದೆ. ಅಮ್ಮನಲ್ಲಿ ನಾನು ತ್ರಿಮೂರ್ತಿಯನನ್ಉ ಕಂಡಿದ್ದೇನೆ. ಅವರ ಜೀವನ ತಪಸ್ವಿಯ ಪ್ರಯಾಣ. ನಿಷ್ಕಾಮ ಕರ್ಮಯೋಗಿಯ ಜೀವನ ಮತ್ತು ಮೌಲ್ಯಗಳಿಗೆ ಬದ್ಧವಾದ ಬದುಕಿನ ಸಂಕೇತವಾಗಿದ್ದರು ಎಂದು ತಿಳಿಸಿದ್ದರು.
ಮತ್ಯೊಂದು ಟ್ವೀಟ್ನಲ್ಲಿ, ಅಮ್ಮ ತಮ್ಮ 100ನೇ ವರ್ಷದ ಹುಟ್ಟುಹಬ್ಬ ಸಮಯದಲ್ಲಿ ಭೇಟಿಯಾಗಿದ್ದಾಗ. ನಿನ್ನ ತಲೆಯಿಂದ ಕೆಲಸ ಮಾಡು. ಜೀವನವನ್ನು ಶುದ್ಧತೆಯೊಂದಿಗೆ ಬದುಕು ಎಂಬ ಸದಾ ನೆನಪಿನಲ್ಲಿರುವಂತಹ ಮಾತನ್ನು ಹೇಳಿದ್ದರು ಎಂದು ಸ್ಮರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ