ನವದೆಹಲಿ(ಸೆ. 01): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉದ್ರೇಕಕಾರಿ ಭಾಷಣ ಮಾಡಿದ ಆರೋಪದ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿ ಬಂಧಿತರಾಗಿದ್ದ ಡಾ. ಕಫೀಲ್ ಖಾನ್ ಅವರಿಗೆ ಆರೇಳು ತಿಂಗಳ ನಂತರ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಅವರ ವಿರುದ್ಧ ದಾಖಲಾಗಿದ್ದ ಎನ್ಎಸ್ಎ ಪ್ರಕರಣವನ್ನು ಕೈಬಿಡುವಂತೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿದ್ದಾರೆ. ಹಾಗೆಯೇ, ಅವರ ಕಸ್ಟಡಿಯಲ್ಲಿ ಇಟ್ಟಿರುವುದು ಅಕ್ರಮ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ. ಇದರೊಂದಿಗೆ ವೈದ್ಯರೂ ಆಗಿರುವ ಡಾ. ಕಫೀಲ್ ಖಾನ್ ಅವರು ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.
ಸಿಎಎ ವಿರೋಧಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಡಾ. ಕಫೀಲ್ ಖಾನ್ 2019, ಡಿಸೆಂಬರ್ 10ರಂದು ಆಲಿಗಡ್ ಮುಸ್ಲಿಮ್ ಯೂನಿವರ್ಸಿಟಿಯಲ್ಲಿ ಭಾಷಣ ಮಾಡಿದ್ದರು. ಜನವರಿಯಲ್ಲಿ ಅವರನ್ನ ಬಂಧಿಸಲಾಯಿತು. ಧಾರ್ಮಿಕ ದ್ವೇಷ ಬಿತ್ತಲು ಕಾರಣವಾಗಿದ್ದಾರೆಂದು ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಖಾನ್ ವಿರುದ್ಧ ಪ್ರಕರಣ ದಾಖಲಾಯಿತು. ಫೆ. 13ರಂದು ಆಲಿಗಡ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದಂತೆ ಡಾಕ್ಟರ್ ಸಾಹೇಬರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿಗೊಳಿಸಲಾಯಿತು. ನಂತರ ರಾಷ್ಟ್ರೀಯ ಸಮಗ್ರತೆ ಧಕ್ಕೆ ತರುವ ಮತ್ತು ಸೌಹಾರ್ದತೆಯನ್ನು ಕದಡುವ ಅಪರಾಧಗಳಿಗೆ ಇರುವ 153ಬಿ ಮತ್ತು 505(2) ಸೆಕ್ಷನ್ಗಳ ಅಡಿ ಅವರ ವಿರುದ್ಧ ಎಫ್ಐಆರ್ ದಾಖಲಾದವು. ಆಗಸ್ಟ್ 16ರಂದು ಅವರ ಬಂಧನದ ಅವಧಿಯನ್ನು 3 ತಿಂಗಳ ಕಾಲ ವಿಸ್ತರಣೆ ಮಾಡಲಾಗಿತ್ತು. ಎನ್ಎಸ್ಎ ಕಾಯ್ದೆ ಅಡಿ ವ್ಯಕ್ತಿಗಳನ್ನು 12 ತಿಂಗಳ ಕಾಲ ಸೆರೆಯಲ್ಲಿಟ್ಟುಕೊಳ್ಳುವ ಅವಕಾಶ ಇದೆ. ಆದರೆ, ಈಗ ಅಲಹಾಬಾದ್ ಹೈಕೋರ್ಟ್ ಎನ್ಎಸ್ಎ ಚಾರ್ಜ್ಗಳಿಂದ ಡಾ. ಕಫೀಲ್ ಖಾನ್ ಅವರನ್ನು ಮುಕ್ತಗೊಳಿಸಿದೆ. ಮಥುರಾ ಜೈಲಿನಲ್ಲಿರುವ ಅವರು ಶೀಘ್ರದಲ್ಲೇ ಬಿಡುಗಡೆ ಆಗಲಿದ್ದಾರೆನ್ನಲಾಗಿದೆ.
ಇದನ್ನೂ ಓದಿ: 1.6 ಲಕ್ಷ ಕೋಟಿ ಬಾಕಿ ಹಣ ಪಾವತಿಸಲು ಟೆಲಿಕಾಂ ಕಂಪನಿಗಳಿಗೆ 10 ವರ್ಷ ಕಾಲಾವಕಾಶ ಕೊಟ್ಟ ಸುಪ್ರೀಂ
ಡಾ. ಕಫೀಲ್ ಖಾನ್ ಅವರ ಹೆಸರು ರಾಷ್ಟ್ರಮಟ್ಟದಲ್ಲಿ ಈ ಹಿಂದೆಯೂ ಕೇಳಿಬಂದಿತ್ತು. 2017, ಆಗಸ್ಟ್ ತಿಂಗಳಲ್ಲಿ ಉತ್ತರ ಪ್ರದೇಶ ಸಿಎಂ ಅವರ ಗೋರಖ್ಪುರ್ ಕ್ಷೇತ್ರದಲ್ಲಿರುವ ಬಿಆರ್ಡಿ ಮೆಡಿಕಲ್ ಕಾಲೇಜಿನಲ್ಲಿ ಹಲವಾರು ಮಕ್ಕಳು ಸಾವನ್ನಪ್ಪಿದ್ದರು. ಡಾ. ಕಫೀಲ್ ಖಾನ್ ಅವರು ಇದೇ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಅವರನ್ನು ಸರ್ಕಾರ ಅಮಾನತು ಮಾಡಿತು. ಆದರೆ, ಇಲಾಖೆ ನಡೆಸಿದ ತನಿಖೆಯಲ್ಲಿ ಡಾ. ಕಫೀಲ್ ಖಾನ್ ಅವರಿಗೆ ಕ್ಲೀನ್ ಚಿಟ್ ಸಿಕ್ಕಿತ್ತು. ಆದರೂ ಕೂಡ ಸರ್ಕಾರ ಅವರನ್ನು ಮರಳಿ ಸೇವೆಗೆ ಕರೆಯಲಿಲ್ಲ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ