news18-kannada Updated:November 1, 2020, 4:22 PM IST
ನರೇಂದ್ರ ಮೋದಿ
ಪಾಟ್ನಾ(ನ. 01): ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಡಬಲ್ ಎಂಜಿನ್ನ ಎನ್ಡಿಎಯನ್ನು ಸೋಲಿಸಲು ಡಬಲ್ ಯುವರಾಜರಿಂದ ಆಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಚುನಾವಣಾ ಸಮಾವೇಶದಲ್ಲಿ ಗುಡುಗಿದ್ದಾರೆ. ಬಿಹಾರದಲ್ಲಿ ಎರಡನೇ ಹಂತದ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಮಾಡಿದ ನರೇಂದ್ರ ಮೋದಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್ಡಿಎ ಮತ್ತೆ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದರು. ಬಿಹಾರದ ವಿಪಕ್ಷಗಳು ಯಾವಾಗಲೂ ಬಡವರ ಹಣಕ್ಕೆ ಕನ್ನ ಹಾಕುತ್ತವೆ. ಆದರೆ, ಎನ್ಡಿಎ ಮೈತ್ರಿಕೂಟವು ಬಡ ಜನರ ಬದುಕಿನ ಬವಣೆಗಳನ್ನ ಕಡಿಮೆ ಮಾಡಲು ಕೆಲಸ ಮಾಡುತ್ತದೆ ಎಂದು ಮೋದಿ ಹೋಲಿಕೆ ಮಾಡಿದರು.
ಬಿಹಾರದಲ್ಲಿ ಜಂಗಲ್ ರಾಜ್ ಇದೆ ಎಂದು ವಿಪಕ್ಷಗಳು ಮಾಡಿರುವ ಟೀಕೆಗೆ ತಿರುಗೇಟು ನೀಡಿದ ಮೋದಿ, ಬಿಹಾರದ ಅಭಿವೃದ್ಧಿ ಬಗ್ಗೆ ಚಿಂತಿಸಲು ಸಾಧ್ಯವಿಲ್ಲದ ಡಬಲ್-ಡಬಲ್ ಯುವರಾಜರು ತಮ್ಮ ಪಟ್ಟ ಭದ್ರ ಮಾಡಿಕೊಳ್ಳಲು ಎನ್ಡಿಎಯ ಡಬಲ್-ಎಂಜಿನ್ ಸರ್ಕಾರದ ವಿರುದ್ಧ ಕದನಕ್ಕೆ ನಿಂತಿದ್ದಾರೆ ಎಂದರು.
ಇದನ್ನೂ ಓದಿ: ಬಿಹಾರಿಗಳಿಗೆ ಉಚಿತ ಕೋವಿಡ್ ಲಸಿಕೆ; ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದ ಚುನಾವಣಾ ಆಯೋಗ
ಇಲ್ಲಿ ಡಬಲ್ ಯುವರಾಜರೆಂದು ಮೋದಿ ಸಂಬೋಧಿಸಿರುವುದು ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರನ್ನ. ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರ ಯುವಜೋಡಿಗೆ ಆದ ಗತಿ ಬಿಹಾರ ಚುನಾವಣೆಯಲ್ಲಿ ರಾಹುಲ್-ತೇಜಸ್ವಿ ಜೋಡಿಗೆ ಆಗುತ್ತದೆ ಎಂದು ಮೋದಿ ಕುಟುಕಿದರು.
ಹಲವು ವರ್ಷಗಳಿಂದ ನೆನೆಗುದಿಯಲ್ಲಿ ಬಿದ್ದಿದ್ದ ಅಭಿವೃದ್ಧಿ ಯೋಜನೆಗಳನ್ನ ಎನ್ಡಿಎ ಸರ್ಕಾರ ಜಾರಿಗೆ ತಂದಿದೆ. ಇಂಥ ದೊಡ್ಡ ಯೋಜನೆಗಳು ಹಿಂದಿನ ಸರ್ಕಾರದ ಅವಧಿಯಲ್ಲಿ ಹಣ ಇದ್ದರೂ ಯಾಕೆ ಕಾರ್ಯಗತ ಆಗಲಿಲ್ಲ ಎಂದು ಬಿಹಾರದ ಯುವಜನರು ಪ್ರಶ್ನಿಸಬೇಕು ಎಂದು ಪ್ರಧಾನಿಗಳು ಕರೆ ನೀಡಿದರು.
ಇದನ್ನೂ ಓದಿ: ಲವ್ ಜಿಹಾದ್ ನಡೆಸಿದರೆ ರಾಮ್ನಾಮ್ ಸತ್ಯ ಮಾರ್ಗ; ಶೀಘ್ರದಲ್ಲೇ ಕಾನೂನು ಎಂದ ಸಿಎಂ ಯೋಗಿ
ಪುಲ್ವಾಮ ದಾಳಿ ವಿಚಾರದಲ್ಲಿ ಭಾರತ ಸರ್ಕಾರವನ್ನು ಅನುಮಾನಿಸಿದ ಕಾಂಗ್ರೆಸ್ ಪಕ್ಷವನ್ನು ಮೋದಿ ಇದೇ ವೇಳೆ ತರಾಟೆಗೆ ತೆಗೆದುಕೊಂಡರು. ನಮ್ಮ ನೆರೆಯ ದೇಶ ಪುಲ್ವಾಮ ದಾಳಿ ವಿಚಾರದಲ್ಲಿ ಸತ್ಯ ಒಪ್ಪಿಕೊಂಡಿದೆ. ದೇಶದಲ್ಲಿ ಆಗುತ್ತಿರುವ ಸರ್ವಾಂಗೀಣ ಅಭಿವೃದ್ಧಿಯ ನಡುವೆ ರಾಜಕೀಯ ಸ್ವಾರ್ಥಕ್ಕಾಗಿ ದೇಶದ ಹಿತಾಸಕ್ತಿ ಬಲಿಕೊಡುವಂಥ ಶಕ್ತಿಗಳ ಬಗ್ಗೆ ಹುಷಾರಾಗಿರಬೇಕು. ನಮ್ಮ ದೇಶದ ಯೋಧರ ಬಲಿದಾನದಲ್ಲಿ ತಮ್ಮ ಲಾಭವನ್ನ ಇವರು ನೋಡುತ್ತಾರೆ ಎಂದು ನರೇಂದ್ರ ಮೋದಿ ಟೀಕಿಸಿದರು.ಬಿಹಾರದಲ್ಲಿ ನಾಲ್ಕು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಎರಡನೇ ಹಂತದ ಮತದಾನ ನವೆಂಬರ್ 3ರಂದು ನಡೆಯಲಿದೆ. ಛಾಪ್ರಾ ಕ್ಷೇತ್ರದಲ್ಲಿ ಮೊದಲು ಭಾಷಣ ಆರಂಭಿಸಿದ ಅವರು, ಸಮಷ್ಟಿಪುರ, ಮೋತಿಹರಿ ಮತ್ತು ಬಗಾಹ ಕ್ಷೇತ್ರಗಳಲ್ಲಿ ಚುನಾವಣಾ ರ್ಯಾಲಿಗಳನ್ನ ಉದ್ದೇಶಿಸಿ ಇಂದು ಭಾಷಣ ಮಾಡುತ್ತಿದ್ದಾರೆ.
Published by:
Vijayasarthy SN
First published:
November 1, 2020, 4:22 PM IST