ಪಾಕಿಸ್ತಾನ ವಹಿಸಿಕೊಂಡು ಬರಬೇಡಿ: ಸಿಧು ಸಲಹೆಗಾರರ ವಿರುದ್ಧ ಪಂಜಾಬ್ ಸಿಎಂ ಆಕ್ರೋಶ

ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಹಾಗೂ ಪಂಜಾಬ್ ವಿಚಾರದಲ್ಲಿ ಪಾಕಿಸ್ತಾನ ಕುತಂತ್ರ ನಡೆಸಿದೆ ಎಂದು ಅಮರೀಂದರ್ ಸಿಂಗ್ ನೀಡಿದ್ದ ಹೇಳಿಕೆಯನ್ನ ನವಜೋತ್ ಸಿಧು ಅವರ ಸಲಹೆಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಕ್ಯಾಪ್ಟನ್ ಸಿಂಗ್ ಆಕ್ರೋಶಗೊಂಡಿದ್ದಾರೆ.

ನವಜೋತ್ ಸಿಂಗ್ ಸಿಧು ಮತ್ತು ಕ್ಯಾಪ್ಟನ್ ಅಮರೀಂದರ್ ಸಿಂಗ್

ನವಜೋತ್ ಸಿಂಗ್ ಸಿಧು ಮತ್ತು ಕ್ಯಾಪ್ಟನ್ ಅಮರೀಂದರ್ ಸಿಂಗ್

  • News18
  • Last Updated :
  • Share this:
ಅಮೃತಸರ(ಆ. 23): ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜ್ಯೋತ್ ಸಿಂಗ್ ಸಿಧು ಇಬ್ಬರೂ ಒಟ್ಟಿಗೆ ಫೋಟೋಗೆ ಪೋಸ್ ಕೊಡುತ್ತಿದ್ದುದು ಅವರಿಬ್ಬರ ಮಧ್ಯೆ ಹೊಂದಾಣಿಕೆ ಆಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಕ್ಯಾಪ್ಟನ್ ಮತ್ತು ಸಿಧು ಮಧ್ಯೆ ಸಮರದ ಬಿಸಿ ಆರಿಲ್ಲ ಎಂಬುದು ನಿನ್ನೆಯ ಕೆಲ ವಿದ್ಯಮಾನಗಳಿಂದ ಗೊತ್ತಾಗಿದೆ. ಪಾಕಿಸ್ತಾನದ ವಿರುದ್ಧ ಸಿಎಂ ಅಮರೀಂದರ್ ಸಿಂಗ್ ಅವರು ಮಾಡಿದ್ದ ಟೀಕೆಗೆ ಸಿಧು ಅವರ ಇಬ್ಬರು ಸಲಹೆಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರದಲ್ಲಿ ಕ್ಯಾಪ್ಟನ್ ಖಾರವಾಗಿ ಪ್ರತಿಕ್ರಿಯಿಸಿದ್ಧಾರೆ. ದೇಶದ ವಿಚಾರದಲ್ಲಿ ನಮಗೆ ಹೇಳಲು ಬರಬೇಡಿ. ನಿಮ್ಮ ಸಲಹೆ ಏನಿದ್ದರೂ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಿಗೆ ಸೀಮಿತವಾಗಿರಲಿ ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ.

ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದ್ದ ಅಮರಿಂದರ್ ಸಿಂಗ್, ಪಂಜಾಬ್​ನಲ್ಲಿ ಪಾಕಿಸ್ತಾನದಿಂದ ಆಗುತ್ತಿರುವ ಅಪಾಯದ ಬಗ್ಗೆ ಮಾತನಾಡಿದ್ದರು. ಆದರೆ, ನವಜ್ಯೋತ್ ಸಿಂಗ್ ಸಿಧು ಅವರ ಇಬ್ಬರು ಸಲಹೆಗಾರರು ಇದಕ್ಕೆ ಆಕ್ಷೇಪಿಸಿ ಹೇಳಿಕೆ ನೀಡಿದ್ದರು. ಪಾಕಿಸ್ತಾನ ವಿರುದ್ಧದ ತಮ್ಮ ಟೀಕೆ ಪಂಜಾಬ್ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂಬಂತೆ ಪ್ಯಾರೆ ಲಾಲ್ ಗರ್ಗ್ ಹೇಳಿದ್ದರು. ಕಾಶ್ಮೀರ ವಿಚಾರದಲ್ಲೂ ಅಮರೀಂದರ್ ಸಿಂಗ್ ಅವರ ಹೇಳಿಕೆಯನ್ನ ಮಲ್ವಿಂದರ್ ಸಿಂಗ್ ಮಾಲಿ ಟೀಕಿಸಿದ್ದರು. ಪ್ಯಾರೆ ಲಾಲ್ ಗರ್ಗ್ ಮತ್ತು ಮಲ್ವಿಂದರ್ ಸಿಂಗ್ ಮಾಲಿ ಇಬ್ಬರನ್ನೂ ಕೂಡ ಮಾಜಿ ಕ್ರಿಕೆಟಿಗ ಮತ್ತು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಇತ್ತೀಚೆಗೆ ತಮ್ಮ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದರು.

ಪಾಕಿಸ್ತಾನ ಮತ್ತು ಕಾಶ್ಮೀರದಂಥ ರಾಷ್ಟ್ರೀಯ ಸೂಕ್ಷ್ಮ ವಿಚಾರಗಳ ಬಗ್ಗೆ ಇವರಿಬ್ಬರೂ ಉದ್ಧಟತನದ ಮಾತುಗಳನ್ನಾಡಿದ್ಧಾರೆ. ತಮ್ಮ ಮಾತುಗಳಿಂದ ಆಗುವ ಪರಿಣಾಮ ಏನೆಂದು ಅರಿವಿಲ್ಲದೆ, ಹಾಗೂ ತಮಗೆ ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುವ ಬದಲು ಅವರಿಬ್ಬರು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಿಗೆ ಸಲಹೆ ಕೊಡುವ ಕೆಲಸಕ್ಕೆ ಸೀಮಿತವಾಗಿರಲಿ ಎಂದು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಿಳಿಹೇಳಿದ್ಧಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಮತ್ತೆ ಲಾಕ್‌ಡೌನ್; ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ, ನೂರಾರು ಜನರ ಬಂಧನ!

ಕಾಶ್ಮೀರ ಮತ್ತು ಪಾಕಿಸ್ತಾನ ವಿಚಾರದಲ್ಲಿ ಮಾಲಿ ಮತ್ತು ಗರ್ಗ್ ಅವರ ಅಭಿಪ್ರಾಯಗಳು ಭಾರತ ಹಾಗೂ ಕಾಂಗ್ರೆಸ್ ಪಕ್ಷದ ನಿಲುವಿಗೆ ಬದ್ಧವಾಗಿಲ್ಲ ಎಂಬುದು ಕ್ಯಾಪ್ಟನ್ ಆಕ್ರೋಶ. “ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಮಾಲಿ ಅವರು ತಮ್ಮ ಹೇಳಿಕೆ ಮೂಲಕ ಪಾಕಿಸ್ತಾನದ ವಾದವನ್ನು ಬೆಂಬಲಿಸಿದ್ದಾರೆ. ಇದು ಸಂಪೂರ್ಣ ದೇಶವಿರೋಧಿ” ಎಂದು ಮಲ್ವಿಂದರ್ ಸಿಂಗ್ ಮಾಲಿ ಅವರನ್ನ ಕ್ಯಾಪ್ಟನ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು, ಪ್ಯಾರೆ ಲಾಲ್ ಗರ್ಗ್ ಹೇಳಿಕೆಯನ್ನ ಟೀಕಿಸಿದ ಅಮರೀಂದರ್ ಸಿಂಗ್, “ಪಾಕಿಸ್ತಾನದಿಂದ ನಮಗೆಷ್ಟು ಅಪಾಯ ಇದೆ ಎಂಬ ವಾಸ್ತವತೆಯು ಪ್ರತಿಯೊಬ್ಬ ಪಂಜಾಬೀ ಹಾಗೂ ಭಾರತೀಯನಿಗೂ ಗೊತ್ತು. ನಮ್ಮ ರಾಜ್ಯ ಹಾಗೂ ದೇಶವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಪಾಕಿಸ್ತಾನದವರು ದಿನನಿತ್ಯವೂ ಡ್ರೋನ್​ಗಳ ಮೂಲಕ ಪಂಜಾಬ್​ನೊಳಗೆ ಶಸ್ತ್ರ ಹಾಗೂ ಡ್ರಗ್ಸ್ ಸಾಗಿಸುತ್ತಿದ್ಧಾರೆ. ಪಾಕಿಸ್ತಾನ ಬೆಂಬಲಿತ ಪಡೆಗಳ ದಾಳಿಯಿಂದ ಗಡಿಭಾಗದಲ್ಲಿ ಪಂಜಾಬೀ ಸೈನಿಕರು ಸಾಯುತ್ತಿದ್ದಾರೆ” ಎಂದು ಹೇಳಿದ್ಧಾರೆ.

“ಎಂಬತ್ತು ಮತ್ತು ತೊಂಬತ್ತರ ದಶಕಗಳಲ್ಲಿ ಪಾಕ್ ಬೆಂಬಲಿತ ಭಯೋತ್ಪಾದನೆಯಿಂದಾಗಿ ಸಾವಿರಾರು ಪಂಜಾಬಿಗಳು ಬಲಿಯಾಗಿದ್ದ ವಿಚಾರವನ್ನು ಪ್ಯಾರೆ ಲಾಲ್ ಗರ್ಗ್ ಮರೆತಿರಬಹುದು, ಆದರೆ, ನಾನಾಗಲೀ ಪಂಜಾಬ್ ಜನರಾಗಲೀ ಅದನ್ನ ಮರೆತಿಲ್ಲ. ಪಾಕಿಸ್ತಾನದ ಅಪಾಯಕಾರಿ ಆಟಗಳನ್ನ ಎದುರಿಸಲು ನಾವು ಸಕಲ ಪ್ರಯತ್ನಗಳನ್ನೂ ಮಾಡುತ್ತೇವೆ” ಎಂದು ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಪಣ ತೊಟ್ಟಿದ್ದಾರೆ.
Published by:Vijayasarthy SN
First published: