ರಿಸರ್ವ್ ಬ್ಯಾಂಕ್ ಹಿಂದೆ ಬಚ್ಚಿಟ್ಟುಕೊಳ್ಳಬೇಡಿ, ಸ್ವಂತ ನಿರ್ಧಾರ ತೆಗೆದುಕೊಳ್ಳಿ: ಕೇಂದ್ರಕ್ಕೆ ಸುಪ್ರೀಂ ತರಾಟೆ
ಲಾಕ್ ಡೌನ್ ಘೋಷಣೆಯಾದಾಗಿನಿಂದ ಬ್ಯಾಂಕ್ ಸಾಲದ ಕಂತು ಕಟ್ಟುವುದರಿಂದ ನಿರ್ದಿಷ್ಟ ಅವಧಿಯವರೆಗೆ ಆರ್ಬಿಐ ವಿನಾಯಿತಿ ನೀಡಿದೆ. ಆದರೆ, ಈ ಅವಧಿಯಲ್ಲಿ ಬಡ್ಡಿ ವಿಧಿಸಲು ಬ್ಯಾಂಕ್ಗಳಿಗೆ ಅವಕಾಶ ಮಾಡಿದೆ. ಈ ಬಡ್ಡಿಯನ್ನ ಮನ್ನಾ ಮಾಡಬೇಕೆಂಬ ಮನವಿ ಕೇಳಿಬಂದಿದೆ.
ನವದೆಹಲಿ(ಆ. 26): ಕೋವಿಡ್ ಸಂಕಷ್ಟದಲ್ಲಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ವಿಚಾರದಲ್ಲಿ ಗೊಂದಲದಲ್ಲಿರುವ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆ. ಬ್ಯಾಂಕ್ ಅಥವಾ ಬೇರೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದವರಿಗೆ ಬಡ್ಡಿ ಮನ್ನಾ ಮಾಡಲು ಕೇಂದ್ರ ಸರ್ಕಾರ ಸ್ವಂತ ನಿಲುವು ತೆಗೆದುಕೊಳ್ಳುವ ಬದಲು ಭಾರತೀಯ ರಿಸರ್ವ್ ಬ್ಯಾಂಕ್ನ ನೆವ ಹೇಳುತ್ತಿದೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
“ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ. ನಿಮಗೆ ಏನನ್ನೂ ಹೇಳಲು ಆಗುತ್ತಿಲ್ಲ. ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕ್ರಮ ತೆಗೆದುಕೊಳ್ಳುವುದು ನಿಮ್ಮ ಹೊಣೆಗಾರಿಕೆ. ಸಾಲ ಮನ್ನಾ ವಿಚಾರದಲ್ಲಿ ನಿಲುವು ತೆಗೆದುಕೊಳ್ಳಲು ನಿಮಗೆ ಸಾವಶ್ಯ ಅಧಿಕಾರ ಇದೆ. ಆರ್ಬಿಐ ಮೇಲಷ್ಟೇ ಅವಲಂಬಿತವಾಗಬೇಕಿಲ್ಲ” ಎಂದು ನ್ಯಾ| ಅಶೋಕ್ ಭೂಷಣ್ ನೇತೃತ್ವದ ಸುಪ್ರೀಂ ನ್ಯಾಯಪೀಠ ಹೇಳಿದೆ.
ನ್ಯಾಯಪೀಠ ಇಷ್ಟು ಖಾರವಾಗಿ ಅಭಿಪ್ರಾಯ ಹೇಳಲು ಕಾರಣವಾಗಿದ್ದು ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಾಡಿದ ವಾದ. ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆಂದು ಘೋಷಿಸಲಾದ ಸಾಲ ಪಾವತಿ ವಿನಾಯಿತಿyಲ್ಲಿ ಬಡ್ಡಿ ಮನ್ನಾ ಮೂಲಕ ಪರಿಹಾರ ಒದಗಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ತುಷಾರ್ ಮೆಹ್ತಾ ಅವರು, ಬ್ಯಾಂಕ್ ಸಂಸ್ಥೆಗಳೂ ಸಂಕಷ್ಟದಲ್ಲಿವೆ ಎಂದು ವಾದಿಸಿ ಆರ್ಬಿಐನ ಅಫಿಡವಿಟ್ ಅನ್ನು ಉಲ್ಲೇಖಿಸಿದ್ದರು. ನ್ಯಾ| ಅಶೋಕ್ ಭೂಷಣ್, ನ್ಯಾ| ಆರ್. ಸುಭಾಷ್ ರೆಡ್ಡಿ ಮತ್ತು ನ್ಯಾ| ಎಂಆರ್ ಷಾ ಅವರಿದ್ದ ನ್ಯಾಯಪೀಠಕ್ಕೆ ಈ ಉತ್ತರ ಅಸಮಾಧಾನ ತಂದಿತು.
“ಕೇವಲ ವ್ಯಾವಹಾರಿಕ ಹಿತಾಸಕ್ತಿಯನ್ನು ಮಾತ್ರ ಪರಿಗಣಿಸುವ ಸಮಯ ಇದಲ್ಲ. ಜನರ ಸಮಸ್ಯೆಯನ್ನೂ ಕಾಣಬೇಕು. ಆರ್ಬಿಐನ ನಿಲುವು ಆ ರೀತಿ ಇದೆ. ಆದರೆ, ನೀವು ಯಾವುದೇ ನಿಲುವು ತೆಗೆದುಕೊಳ್ಳುತ್ತಿಲ್ಲ” ನ್ಯಾಯಪೀಠ ತಿಳಿಸಿತು.
“ನೀವು ಯಾವುದಾದರೂ ಒಂದು ನಿಲುವು ತೆಗೆದುಕೊಳ್ಳಬೇಕು. ಇಲ್ಲಿ ಎರಡು ವಿಚಾರಗಳಿವೆ. ಸಾಲ ವಿನಾಯಿತಿ ಅವಧಿಯಲ್ಲಿ ಬಡ್ಡಿಯನ್ನು ಪಡೆಯಬೇಕೆ ಅಥವಾ ಚಕ್ರಬಡ್ಡಿಯನ್ನ ವಿಧಿಸಬೇಕೆ ಎಂಬುದನ್ನಾದರೂ ನಿರ್ಧರಿಸಬೇಕು… ಆದರೆ, ಸರ್ಕಾರ ಇದಕ್ಕೆ ಉತ್ತರ ಕೊಡುವ ಬದಲು ಆರ್ಬಿಐನ ಉತ್ತರವನ್ನಷ್ಟೇ ಉಲ್ಲೇಖಿಸುತ್ತಿದೆ” ಎಂದು ಹೇಳಿದ ಕೋರ್ಟ್, ಒಂದು ವಾರದಲ್ಲಿ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಸಬೇಕು ಎಂದು ಆದೇಶಿಸಿತು.
ಲಾಕ್ ಡೌನ್ ಹೇರಿಕೆಯಾದ ಬಳಿಕ ಸಾಲದ ಕಂತು ಕಟ್ಟುವ ಅವಧಿಯನ್ನು ಆರ್ಬಿಐ ಮುಂದೂಡಿತು. ಆದರೆ, ಈ ಮೊರಾಟೋರಿಯಮ್ ಅವಧಿಯಲ್ಲಿ ಕಂತಿನ ಹಣದ ಮೇಲೆ ಬಡ್ಡಿ, ಚಕ್ರಬಡ್ಡಿ ಬೆಳೆಯುತ್ತಾ ಹೋಗುತ್ತದೆ. ಈ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಬಡ್ಡಿಯ ಮೇಲೆ ಬಡ್ಡಿ ಹೇರಲಾಗುವುದರಿಂದ ಆರ್ಬಿಐನ ನಿರ್ಧಾರದಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದು ಅರ್ಜಿದಾರರ ವಾದವಾಗಿದೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ