ನವ ದೆಹಲಿ (ಸೆಪ್ಟೆಂಬರ್ 01); ದೇಶದ ಆರ್ಥಿಕತೆ ಸಂಪೂರ್ಣವಾಗಿ ಕುಸಿತ ಕಂಡಿದೆ. ಭಾರತದ ಜಿಡಿಪಿ ಶೇ.-24ಕ್ಕೆ ತಲುಪಿದೆ. ಆದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂಜರಿತಕ್ಕೆ ಕೊರೋನಾ ವೈರಸ್ ಕಾರಣ, "ಆಕ್ಟ್ ಆಫ್ ಗಾಡ್" ಅಂದರೆ ದೇವರು ಕಾರಣ ಎಂದು ಹೇಳುತ್ತಿದ್ದಾರೆ. ಆದರೆ, "ಮಾನವ ನಿರ್ಮಿತ ದುರಂತಕ್ಕೆ ದೇವರನ್ನು ದೂಷಿಸಬೇಡಿ" ಎಂದು ಚಿದಂಬರಂ ಕಿಡಿಕಾರಿದ್ದಾರೆ.
ದೇಶದ ಜಿಡಿಪಿ ಸರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ನಡೆದ ಜಿಎಸ್ಟಿ ಸಭೆಯಲ್ಲಿ ರಾಜ್ಯಗಳಿಗೆ ಹೆಚ್ಚುವರಿ ತೆರಿಗೆಯ ಪಾಲನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳುವ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ "ದೇಶದ ಆರ್ಥಿಕತೆ ಕುಸಿತಕ್ಕೆ ದೇವರೆ ಕಾರಣ" ಎಂಬ ರೀತಿಯ ಹೇಳಿಕೆ ನೀಡಿದ್ದರು. ಈ ಹೇಳಿಕೆ ಇದೀಗ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಕೇಂದ್ರ ಸರ್ಕಾರ ಮತ್ತು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪಿ. ಚಿದಂಬರಂ, "ವಾಸ್ತವವಾಗಿ, ನೀವು ದೇವರಿಗೆ ಕೃತಜ್ಞತೆ ಸಲ್ಲಿಸಬೇಕು. ದೇವರು ದೇಶದ ರೈತರನ್ನು ಆಶೀರ್ವದಿಸಿದ್ದಾನೆ. ಸಾಂಕ್ರಾಮಿಕ ರೋಗವು ಒಂದು ನೈಸರ್ಗಿಕ ವಿಕೋಪ ನಿಜ. ಆದರೆ, ನೀವು ಈ ಸಾಂಕ್ರಾಮಿಕ ರೋಗದಂತಹ ನೈಸರ್ಗಿಕ ವಿಕೋಪವನ್ನೂ ಸಹ ಮಾನವ ನಿರ್ಮಿತ ವಿಪತ್ತಿನೊಂದಿಗೆ ಸಂಯೋಜಿಸುತ್ತಿದ್ದೀರಿ" ಎಂದು ದೂಷಿಸಿದ್ದಾರೆ.
ಇದನ್ನೂ ಓದಿ : ನಿರ್ಣಾಯಕ ಹಂತದತ್ತ ಇಂಡೋ-ಚೀನಾ ಗಡಿ ವಿವಾದ?; ಪಾಂಗೋಂಗ್ ಟ್ಸೋ ಪ್ರದೇಶದಲ್ಲಿ ಯುದ್ಧದ ವಾತಾವರಣ
ಇನ್ನೂ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣ್ಯನ್ ವಿ-ಆಕಾರದ ಚೇತರಿಕೆಯನ್ನು ಟೀಕಿಸಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವವರಿಲ್ಲ. ಅವರು ಪ್ರಧಾನಿಗಳನ್ನು ಭೇಟಿ ಮಾಡಿ ಸಂಭಾಷಣೆ ನಡೆಸಿ ತುಂಬಾ ದಿನಗಳಾಗಿವೆ ಎಂದಿದ್ದಾರೆ.
"2019-20ರ ಅಂತ್ಯದ ವೇಳೆಗೆ ಒಟ್ಟು ದೇಶೀಯ ಉತ್ಪಾದನೆಯು ಶೇ.20 ರಷ್ಟು ಕುಸಿದಿತ್ತು. ಆದರೆ ಕೃಷಿ, ಅರಣ್ಯ ಮತ್ತು ಮೀನುಗಾರಿಕೆು ಕ್ಷೇತ್ರ ಮಾತ್ರ ಶೇ.3.4 ರಷ್ಟು ಏರಿಕೆ ಕಂಡಿತ್ತು. ಆರ್ಥಿಕ ಕುಸಿತಕ್ಕೆ ದೇವರನ್ನು ದೂಷಿಸುವ ನಿರ್ಮಲಾ ಸೀತಾರಾಮನ್, ಕೃಷಿಕರು ಮತ್ತು ಅವರಿಗೆ ಕೃಪೆ ತೋರಿದ ದೇವರನ್ನು ಶ್ಲಾಘಿಸಬೇಕು" ಎಂದು ಚಿದಂಬರಂ ಹೇಳಿದ್ದಾರೆ.
"ಆರ್ಬಿಐ ಸೇರಿದಂತೆ ಇತರೆ ಆರ್ಥಿಕ ತಜ್ಞರು ಈ ಮಹಾ ಆರ್ಥಿಕ ಕುಸಿತವನ್ನು ಮೊದಲೆ ಊಹಿಸಿದ್ದರು. ಅಲ್ಲದೆ ಕೇಂದ್ರ ಸರ್ಕಾರವನ್ನು ಈ ಕುರಿತು ಎಚ್ಚರಿಸಿದ್ದರು. ಆದರೆ, ಈ ಸರ್ಕಾರವು ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಜೊತೆಗೆ ಆಶಾಭಾವನೆಯ ಭರವಸೆಯನ್ನೂ ಸಹ ಮೂಡಿಸುವುದಿಲ್ಲ" ಎಂದು ಚಿದಂಬರಂ ವಿಷಾಧಿಸಿದ್ದಾರೆ.
ಇದನ್ನೂ ಓದಿ : ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರ ಕಾರ್ಯಕ್ರಮದಲ್ಲಿ ಕುಖ್ಯಾತ ರೌಡಿಶೀಟರ್; ಪೊಲೀಸರನ್ನು ಕಂಡು ಓಟ
ಸದ್ಯದ ಆರ್ಥಿಕ ಚೇತರಿಕೆಗೆ ಸರ್ಕಾರ ಭಾರಿ ಸಾಲವನ್ನು ಪಡೆಯಬೇಕು ಅಥವಾ ಕೊರತೆಯ ಭಾಗವನ್ನು ಸರಿದೂಗಿಸಲು ಹಣವನ್ನು ಮುದ್ರಿಸಬೇಕು ಎಂಬ ಸಲಹೆಯನ್ನು ಮಾಜಿ ಹಣಕಾಸು ಸಚಿವ ಚಿದಂಬರಂ ನೀಡಿದ್ದಾರೆ.
ದೇಶದ ಜಿಡಿಪಿಯಲ್ಲಿ ಶೇ- 23.9 ರಷ್ಟು ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ ಅನ್ನು ಪಿ.ಚಿದಂಬರಂ ಅದೊಂದು ತಮಾಷೆ ಎಂದು ವ್ಯಂಗ್ಯವಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ