ನೀಲಿಚಿತ್ರ ತಾರೆಗೆ ಹಣ ನೀಡಿದ್ದಾರೆ ಎಂಬ ಅಪರಾಧ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅನ್ನು ಬಂಧಿಸುವ ಬಗ್ಗೆ ಭಾರೀ ಚರ್ಚೆಗಳಾಗುತ್ತಿತ್ತು. ಆದರೆ ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಚಿತ್ರಗಳಿಂದಲೇ ಹೆಸರು ಮಾಡಿದ್ದ ಸ್ಟಾರ್ಮಿ ಡೇನಿಯಲ್ಸ್ ಜೊತೆ ಅಮೆರಿಕದ (America) ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಂಬಂಧ ಹೊಂದಿದ್ದರು. 2006 ರಲ್ಲಿ ಮೆಲಾನಿಯಾ ಅವರನ್ನು ವಿವಾಹವಾದ ಒಂದು ವರ್ಷದ ನಂತರ ಟ್ರಂಪ್ ನನ್ನ ಜೊತೆ ಸಂಬಂಧ ಇಟ್ಟುಕೊಂಡಿದ್ದರು ಎಂದು ಖುದ್ದಾಗಿ ಸ್ಟಾರ್ಮಿ ಡೇನಿಯಲ್ಸ್ (Stormy Daniels) ಹೇಳಿಕೊಂಡಿದ್ದರು.
ಅದಕ್ಕೂ ಮುನ್ನ ಟ್ರಂಪ್ ಕೂಡ ಆಕೆ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಸದ್ಯ ಇಬ್ಬರ ನಡುವಿನ ವಿವಾದ ಮತ್ತು ಬಂಧನಕ್ಕೆ ಒಳಗಾದ ಮೊದಲ ಮಾಜಿ ಅಧ್ಯಕ್ಷರ ಬಗ್ಗೆ ವಿಶ್ವದಾದ್ಯಂತ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಹಾಗಾದರೆ ಮಾಜಿ ಅಧ್ಯಕ್ಷರ ಹಗರಣಕ್ಕೆ ಕಾರಣವಾದ ಸ್ಟಾರ್ಮಿ ಡೇನಿಯಲ್ಸ್ ಯಾರು ಮತ್ತು ಟ್ರಂಪ್ ಅವರೊಂದಿಗಿನ ಸಂಬಂಧ ಏನು? ಎಂಬುದನ್ನು ನಾವಿಲ್ಲಿ ನೋಡೋಣ.
ಪ್ರಕರಣ ಏನು?
ಡೊನಾಲ್ಡ್ ಟ್ರಂಪ್ ಮತ್ತು ಸ್ಟಾರ್ಮಿ ಡೇನಿಯಲ್ಸ್ ಇಬ್ಬರೂ ಗುಟ್ಟಾಗಿ ಸಂಬಂಧ ಹೊಂದಿದ್ದರು. ನಂತರ ತಮ್ಮ ನಡುವಿನ ಅನೈತಿಕ ಸಂಬಂಧ ಬಹಿರಂಗಪಡಿಸಬಾರದು ಎಂದು ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್‌ಗೆ ಟ್ರಂಪ್ 130,000 ಡಾಲರ್ ಹಣ ನೀಡಿದ್ದರು.
ಇದನ್ನೂ ಓದಿ: ಹಿಂದೂ ದೇಗುಲಕ್ಕೆ 1 ಎಕರೆ ಜಮೀನು ಕೊಟ್ಟ ಮುಸ್ಲಿಂ ಕುಟುಂಬ! ತಂದೆಯ ಕೊನೆಯ ಆಸೆ ತೀರಿಸಿದ ಮಕ್ಕಳು
ಈ ಕುರಿತಂತೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಜೊತೆಗಿನ ಸಂಬಂಧವನ್ನು ಟ್ರಂಪ್ ನಿರಾಕರಿಸಿದ್ದರು ಮತ್ತು ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಟ್ರಂಪ್ ವಾದಿಸಿದ್ದರು. ಈ ವಿಚಾರವಾಗಿ ಪ್ರಕರಣ ನ್ಯಾಯಾಲಯದಲ್ಲಿದ್ದು, ನಿನ್ನೆ ಮ್ಯಾನ್‌ಹಾಟನ್ ಜಿಲ್ಲಾ ಅಟಾರ್ನಿಯ ಕೋರ್ಟ್ ಸಭಾಂಗಣದಲ್ಲಿ ತಾವೇ ಶರಣಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಯಾರಿದು ಅಡಲ್ಟ್ ಫಿಲ್ಮ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್?
ಡೇನಿಯಲ್ಸ್, ಮೂಲ ಹೆಸರು ಸ್ಟೆಫನಿ ಕ್ಲಿಫರ್ಡ್. ಈಕೆಗೆ ಈಗ 44 ವರ್ಷ. ವಯಸ್ಕರ ಚಿತ್ರಗಳಿಂದಲೇ ಎರಡು ದಶಕಗಳಿಗೂ ಹೆಚ್ಚು ಕಾಲ ಹೆಸರು ಮಾಡಿದ್ದ ಈಕೆ ಹಲವಾರು ವಿಡಿಯೋಗಳಲ್ಲಿ ಕಾಣಿಸಿಕೊಳ್ಳುವುದರ ಜೊತೆ ಕೆಲ ಚಿತ್ರಗಳನ್ನೂ ಸಹ ನಿರ್ದೇಶಿಸಿದ್ದಾರೆ.
ಟ್ರಂಪ್ ಜೊತೆಗಿನ ಸಂಬಂಧದ ಬಗ್ಗೆ ಸ್ಟಾರ್ಮಿ ಡೇನಿಯಲ್ಸ್ ಹೇಳಿದ್ದೇನು?
ಟ್ರಂಪ್ ಭೇಟಿ ಬಗ್ಗೆ ಹೇಳಿದ ಸ್ಟಾರ್ಮಿ, ಕ್ಯಾಲಿಫೋರ್ನಿಯಾ ಮತ್ತು ನೆವಾಡ ನಡುವಿನ ಗಡಿಯಲ್ಲಿನ ತಾಹೋಯ್ ಸರೋವರದಲ್ಲಿ 2006ರಲ್ಲಿ ನಡೆದ ಗಲ್ಫ್ ಟೂರ್ನಮೆಂಟ್ ಒಂದರಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದೆ. ಆಗಿನ್ನೂ ಅವರು ರಾಜಕೀಯಕ್ಕೆ ಎಂಟ್ರಿ ನೀಡಿರಲಿಲ್ಲ ಎಂದಿದ್ದಾರೆ.
ಅಂದು ಅವರು ತಮ್ಮನ್ನು ಡಿನ್ನರ್‌ಗೆ ಆಹ್ವಾನಿಸಿದ್ದರು. ಪೈಜಾಮದಲ್ಲಿದ್ದ ಟ್ರಂಪ್ ತಮ್ಮನ್ನು ಸ್ವಾಗತಿಸಿದ್ದರು. ಹಾಗೇ ಮಾತನಾಡುತ್ತಿದ್ದ ವೇಳೆ ಅಲ್ಲಿ ಅವರು ಮುಖಪುಟದಲ್ಲಿ ತಮ್ಮ ಫೋಟೋವಿರುವ ಗಾಲ್ಫ್ ನಿಯತಕಾಲಿಕದ ಪ್ರತಿಯನ್ನು ತೋರಿಸಿದರು ಎಂದು 2018 ರಲ್ಲಿ ಅವರ ಮೊದಲ ಭೇಟಿ ಬಗ್ಗೆ ಡೇನಿಯಲ್ಸ್ ಹೇಳಿದ್ದರು.
ಹಾಗೇ ನಮ್ಮ ಸ್ನೇಹ ಮುಂದುವರಿದು ನಾವಿಬ್ಬರೂ ಸಮ್ಮತಿ ಲೈಂಗಿಕತೆಯನ್ನು ಹೊಂದಿದೆವು ಎಂದು ಡೇನಿಯಲ್ಸ್ ಅವರ ಸಂಬಂಧದ ಬಗ್ಗೆ ಹೇಳಿಕೊಂಡಿದ್ದರು.
ಮತ್ತೆ ಜುಲೈ 2007 ರಲ್ಲಿ ಲಾಸ್ ಏಂಜಲೀಸ್‌ನ ಬೆವರ್ಲಿ ಹಿಲ್ಸ್ ಹೋಟೆಲ್‌ನಲ್ಲಿ ಭೇಟಿಯಾದೆವು. ಆಗ ಮತ್ತೆ ನನ್ನ ಜೊತೆ ಸೆಕ್ಸ್ ಮಾಡಲು ಇಂಗಿತ ವ್ಯಕ್ತಪಡಿಸಿದರು. ಆದರೆ ಆ ವೇಳೆ ನಾನು ನಿರಾಕರಿಸಿದೆ. ಇದೇ ಕಾರಣಕ್ಕೆ ʼಸೆಲೆಬ್ರಿಟಿ ಅಪ್ರೆಂಟಿಸ್ʼ ಎಂಬ ಕಾರ್ಯಕ್ರಮದಿಂದ ನನ್ನನ್ನು ಕೈಬಿಟ್ಟರು ಎಂದು ಡೇನಿಯಲ್ಸ್ ಅವರಿಬ್ಬರ ನಡುವೆ ನಡೆದ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ.
ಸಂಬಂಧದ ಬಗ್ಗೆ ಎಲ್ಲಿಯೂ ಬಾಯಿ ಬಿಡದಂತೆ ಹಣ ನೀಡಿದ್ದ ಟ್ರಂಪ್
ಟ್ರಂಪ್ ನಂತರ ಇದೆಲ್ಲಾ ಆದ ಬಳಿಕ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆದರೆ ಅದಕ್ಕೂ ಮುನ್ನ ಕೇವಲ ಒಂದು ದಿನದ ಹಿಂದೆ ತಮ್ಮ ಇಮೇಜ್‌ಗೆ ಯಾವುದೇ ಧಕ್ಕೆ ಬರಬಾರದು ಎಂದು ಅಕ್ಟೋಬರ್ 28, 2016 ರಂದು ನಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಎಲ್ಲಿಯೂ ಬಾಯಿ ಬಿಡದಂತೆ ನನಗೆ 1.30 ಲಕ್ಷ ಡಾಲರ್ ಅನ್ನು ಪಾವತಿಸಿದರು ಮತ್ತು ಈ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡರು ಎಂದು ಸ್ಟಾರ್ಮಿ ಬಹಿರಂಗ ಪಡಿಸಿದ್ದಾರೆ.
ಒಪ್ಪಂದಕ್ಕೆ ಸಹಿ
ಲಾಸ್ ಏಂಜಲೀಸ್ ಫೆಡರಲ್ ನ್ಯಾಯಾಲಯದಲ್ಲಿ ಸಲ್ಲಿಸಿದ ದಾಖಲೆಗಳ ಪ್ರಕಾರ, ಈ ಒಪ್ಪಂದಕ್ಕೆ ಆ ಸಮಯದಲ್ಲಿ ಅವರ ವಕೀಲರಾದ ಕೀತ್ ಡೇವಿಡ್ಸನ್ ಮತ್ತು ನಂತರ ಟ್ರಂಪ್ ಅವರ ವೈಯಕ್ತಿಕ ವಕೀಲ ಮತ್ತು ಫಿಕ್ಸರ್ ಮೈಕೆಲ್ ಕೋಹೆನ್ ಕೂಡ ಸಹಿ ಹಾಕಿದ್ದಾರೆ.
ಆದರೆ ಡಾಕ್ಯುಮೆಂಟ್‌ನಲ್ಲಿ ಟ್ರಂಪ್ ಮಾತ್ರ ಯಾವುದೇ ಸಹಿ ಮಾಡಿರಲಿಲ್ಲ ಎನ್ನಲಾಗಿದೆ. ನಂತರ ಇದರ ವಿರುದ್ಧ ಸ್ಟಾರ್ಮಿ ಕೋರ್ಟ್ ಮೆಟ್ಟಿಲೇರಿದರು. ಬಹಿರಂಗಪಡಿಸದಿರುವ ಒಪ್ಪಂದವನ್ನ ಅಮಾನ್ಯಗೊಳಿಸಬೇಕೆಂದು ಡೇನಿಯಲ್ಸ್ ಟ್ರಂಪ್ ಮತ್ತು ಕೋಹೆನ್ ವಿರುದ್ಧ ಮೊಕದ್ದಮೆ ಹೂಡಿದರು.
ನಂತರದ ದಿನಗಳಲ್ಲಿ 2006ರಲ್ಲಿ ನಡೆದ ಟ್ರಂಪ್ ಮತ್ತು ಸ್ಟಾರ್ಮಿ ಭೇಟಿಯನ್ನು ಮುಚ್ಚಿ ಹಾಕಲು 1.30 ಲಕ್ಷ ಡಾಲರ್ ಹಣವನ್ನು ನೀಡಲಾಗಿತ್ತು ಎಂಬುದನ್ನು ಟ್ರಂಪ್ ಅವರ ಖಾಸಗಿ ವಕೀಲರು ಕೂಡ ಒಪ್ಪಿಕೊಂಡರು.
ಮಾನನಷ್ಟ ಮೊಕದ್ದಮೆ
ಡೇನಿಯಲ್ಸ್, ನಂತರ ಟ್ರಂಪ್ ವಿರುದ್ಧ ಫೆಡರಲ್ ನ್ಯಾಯಾಲಯದಲ್ಲಿ 2018 ರ ಮಾನನಷ್ಟ ಮೊಕದ್ದಮೆಯನ್ನು ಹೂಡಿದರು. ನನ್ನ ಮತ್ತು ನನ್ನ ಮಗಳ ಅಪಹರಣದ ಬಗ್ಗೆಯೂ ಬೆದರಿಕೆ ಬಂದಿದೆ ಎಂದು ಸ್ಟಾರ್ಮಿ ಆರೋಪಿಸಿದ್ದರು.
ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ ಟ್ರಂಪ್ ಅವರು ನ್ಯೂಯಾರ್ಕ್‌ನಲ್ಲಿ ನ್ಯಾಯಯುತ ವಿಚಾರಣೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದರು. ಜೊತೆಗೆ ಪ್ರಕರಣದ ಅಧ್ಯಕ್ಷತೆ ವಹಿಸುತ್ತಿರುವ ನ್ಯಾಯಾಧೀಶ ಜುವಾನ್ ಮರ್ಚನ್ ಅವರನ್ನೂ ಟ್ರಂಪ್ ಟೀಕಿಸಿದ್ದರು. ನ್ಯಾಯಾಧೀಶ ಜುವಾನ್ ಮರ್ಚನ್ ನನ್ನ ಕೇಸ್ ವಿಚಾರಣೆಗೆ ನಿಯೋಜಿತರಾಗಿದ್ದಾರೆ ಎಂದಿದ್ದರು.
ಇದರ ಬೆನ್ನಲ್ಲೆ ಮ್ಯಾನ್‌ಹ್ಯಾಟನ್ ಕ್ರಿಮಿನಲ್ ಕೋರ್ಟ್ ಮಂಗಳವಾರ ಟ್ರಂಪ್ ಅವರನ್ನು ವಿಚಾರಣೆಗೆ ಕರೆದಿತ್ತು. ನಂತರ ಈ ಪ್ರಕರಣದಲ್ಲಿ ನ್ಯಾಯಾಲಯ ತಪ್ಪಿತಸ್ಥ ಎಂದು ಘೋಷಿಸಿದ ಕೂಡಲೇ ಟ್ರಂಪ್ ಅವರೇ ನ್ಯಾಯಾಲಯಕ್ಕೆ ಶರಣಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ