ವಾಷಿಂಗ್ಟನ್(ಜ. 09): ದಿ ಕ್ಯಾಪಿಟಾಲ್ ದಂಗೆ ಘಟನೆಗೆ ಪ್ರಚೋದಿಸಿದ ಆರೋಪದ ಮೇಲೆ ಡೊನಾಲ್ಡ್ ಟ್ರಂಪ್ ಅವರ ಸೋಷಿಯಲ್ ಮೀಡಿಯಾ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದ ಟ್ವಿಟ್ಟರ್ ಇದೀಗ ಖಾಯಂ ಆಗಿ ಟ್ರಂಪ್ ಖಾತೆಯನ್ನ ರದ್ದುಗಳಿಸಿದೆ. ಮೊನ್ನೆಯಷ್ಟೇ ತಾತ್ಕಾಲಿಕ ಅಮಾನತು ಬಳಿಕ ಖಾತೆ ಮರಳಿಸಿದ್ದ ಟ್ವಿಟ್ಟರ್, ನಂತರ ಟ್ರಂಪ್ ಅವರ ಟ್ವೀಟ್ಗಳನ್ನ ಎಚ್ಚರಿಕೆಯಿಂದ ಗಮನಿಸುವ ಕೆಲಸ ಮಾಡಿತ್ತು. ಅವರ ಇತ್ತೀಚಿನ ಎರಡು ಟ್ವೀಟ್ಗಳಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸಬಹುದಾದ ಅಪಾಯದ ಕುರುಹುಗಳ ಕಂಡುಬಂದ ಹಿನ್ನೆಲೆಯಲ್ಲಿ ಖಾಯಂ ಆಗಿ ಖಾತೆ ಅಮಾನತುಗೊಳಿಸಲು ಟ್ವಿಟ್ಟರ್ ನಿರ್ಧರಿಸಿತೆನ್ನಲಾಗಿದೆ.
ತಾತ್ಕಾಲಿಕ ಅಮಾನತಿನಿಂದ ವಾಪಸ್ ಆದ ಬಳಿಕ ಡೊನಾಲ್ಡ್ ಟ್ರಂಪ್ ಅವರು ದಿ ಕ್ಯಾಪಿಟಾಲ್ ದಂಗೆ ಘಟನೆಯನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ತಮ್ಮ ಬೆಂಬಲಿಗರನ್ನು ತುಚ್ಛವಾಗಿ ಕಾಣಬಾರದು ಎಂದು ಎಚ್ಚರಿಕೆ ನೀಡಿದ್ದರು. ಮತ್ತೊಂದು ಟ್ವೀಟ್ನಲ್ಲಿ ಅವರು ನೂತನ ಅಧ್ಯಕ್ಷ ಜೋ ಬೈಡೆನ್ ಅವರ ಪದಗ್ರಹಣ ಸಮಾರಂಭಕ್ಕೆ ತಾನು ಹೋಗುವುದಿಲ್ಲ ಎಂದು ಹೇಳಿದ್ದರು. ಈ ಟ್ವೀಟ್ಗಳಿಂದ ಅವರ ಬೆಂಬಲಿಗರು ಪ್ರಚೋದನೆಗೊಳಗಾಗಿ ಹಿಂಸಾಚಾರಕ್ಕೆ ಕಾರಣವಾಗಬಹುದು. ಮುಂದೆಯೂ ಅವರಿಂದ ಇಂಥ ಟ್ವೀಟ್ಗಳು ಬಂದು ಅನಾಹುತಗಳಿಗೆ ಎಡೆ ಮಾಡಿಕೊಡಬಹುದಾದ ಸಾಧ್ಯತೆ ಇದ್ದರಿಂದ ಪರ್ಮನೆಂಟ್ ಆಗಿ ಅವರ ಅಕೌಂಟ್ ಸಸ್ಪೆಂಡ್ ಮಾಡಲಾಯಿತು ಎಂದು ಟ್ವಿಟ್ಟರ್ ಸಂಸ್ಥೆ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಡೊನಾಲ್ಡ್ ಟ್ರಂಪ್ ಅವರ ಮಾಜಿ ಭದ್ರತಾ ಸಲಹೆಗಾರ ಮೈಕೇಲ್ ಫ್ಲಿನ್, ಟ್ರಂಪ್ ಪರ ಅಟಾರ್ನಿ ಅಧಿಕಾರಿ ಸಿಡ್ನಿ ಪೋವೆಲ್ ಅವರನ್ನೂ ಟ್ವಿಟ್ಟರ್ನಲ್ಲಿ ನಿಷೇಧಿಸಲಾಗಿದೆ.
ಈಚೆಗೆ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಎದುರು ಡೊನಾಲ್ಡ್ ಟ್ರಂಪ್ ಸೋಲನುಭವಿಸಿದ್ದರು. ಜ. 20ರಂದು ಬೈಡೆನ್ ನೂತನ ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿದ್ದಾರೆ. ಅದರೆ, ಚುನಾವಣೆಯಲ್ಲಿ ಬೈಡನ್ ಅವರ ಡೆಮಾಕ್ರಾಟ್ ಪಕ್ಷದಿಂದ ಚುನಾವಣಾ ಅಕ್ರಮಗಳು ನಡೆದಿವೆ ಎಂದು ಬಲವಾಗಿ ಆರೋಪಿಸುತ್ತಾ ಬಂದಿದ್ದಾರೆ. ಇದೇ ಹಿನ್ನೆಲೆಯಲ್ಲಿ ವಾಷಿಂಗ್ಟನ್ ನಗರದ ದಿ ಕ್ಯಾಪಿಟಾಲ್ ಬ್ಯುಲ್ಡಿಂಗ್ಗೆ (ಸಂಸತ್ ಭವನ) ಭಾರೀ ಸಂಖ್ಯೆಯಲ್ಲಿ ಟ್ರಂಪ್ ಬೆಂಬಲಿಗರು ಲಗ್ಗೆ ಇಟ್ಟಿದ್ದರು. ಈ ವೇಳೆ ನಾಲ್ವರು ಟ್ರಂಪ್ ಬೆಂಬಲಿಗರು ಮತ್ತು ಒಬ್ಬ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ