'ಮೋದಿಗೆ ಬೇಕಿದ್ರೆ ನಾನೇ ಮದುವೆ ಮಾಡಿಸ್ತೀನಿ' ಎಂದಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್
ನ್ಯೂಸ್-18 ಕನ್ನಡ
ನವದೆಹಲಿ (ಆ. 14): ಕಳೆದ ವರ್ಷ ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ 'ಮೋದಿ ಅವರ್ಯಾಕೆ ತಮ್ಮ ಮಡದಿಯನ್ನು ಈ ಸಭೆಗೆ ಯಾಕೆ ಕರೆದುಕೊಂಡು ಬಂದಿಲ್ಲ?' ಎಂದು ವೈಟ್ಹೌಸ್ನ ಸಿಬ್ಬಂದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಳಿ ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಟ್ರಂಪ್, 'ಬೇಕಿದ್ದರೆ ಮೋದಿಗೆ ನಾನೇ ಹೆಣ್ಣು ಹುಡುಕಿಕೊಡುತ್ತೇನೆ' ಎಂದು ಹಾಸ್ಯಚಟಾಕಿ ಹಾರಿಸಿದ್ದರು.
2017ರಲ್ಲಿ ಭಾರತ-ಅಮೆರಿಕ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಮಾತುಕತೆಗೆಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಷಿಂಗ್ಟನ್ಗೆ ತೆರಳಿದ್ದರು. ಈ ಸಂದರ್ಭದಲ್ಲಿ ವೈಟ್ಹೌಸ್ಸಿಬ್ಬಂದಿ ಮತ್ತು ಟ್ರಂಪ್ ನಡುವೆ ಸ್ವಾರಸ್ಯಕರ ಘಟನೆಯೊಂದು ನಡೆಯಿತು. ಈ ಬಗ್ಗೆ ಪೊಲಿಟಿಕೋ ಎಂಬ ಯುಎಸ್ಎ ಪತ್ರಿಕೆ ವರದಿ ಮಾಡಿದ್ದು, ಮುಂದೆ ಏನೆಲ್ಲಾ ಅನಾಹುತಕ್ಕೆ ಈ ಘಟನೆ ಕಾರಣವಾಯಿತು ಎಂದು ಹೇಳುತ್ತದೆ.
ಈ ವೇಳೆ ಭೂತಾನ್ ಹಾಗೂ ನೇಪಾಳ ಭಾರತದ ಭಾಗವಾಗಿದೆ ಎಂದು ಭಾವಿಸಿದ್ದ ಟ್ರಂಪ್ ಎರಡು ರಾಷ್ಟ್ರಗಳು ಭಾರತದಿಂದ ಪ್ರತ್ಯೇಕಗೊಂಡಿವೆ ಎಂದು ತಿಳಿದಿರಲಿಲ್ಲವಂತೆ. ಬಳಿಕ ತಿಳಿದ ಕೂಡಲೇ ಈ ಎರಡು ದೇಶಗಳಲ್ಲಿ ಅಂತಹ ಸಂಪತ್ತೇನಿದೆ ಎಂದು ಪ್ರಶ್ನಿಸಿದ್ಧಾರೆ.
ಅಲ್ಲದೇ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ ಟ್ರಂಪ್ ಯಾವಾಗಲೂ ಮೋದಿ ಮತ್ತು ಭಾರತವನ್ನುಅನುಕರಣೀಯ ಮಾಡುವ ರೀತಿಯಲ್ಲಿ ಅಪಹಾಸ್ಯ ಮಾಡುತ್ತಿದ್ದರು. ಈ ಘಟನೆಗಳು ಉಭಯ ನಾಯಕರ ನಡುವೆ ಬಿರುಕು ಮೂಡಿಸಿವೆ ಎನ್ನಲಾಗಿದೆ.
ಭಾರತ- ಅಮೆರಿಕ ಬದಲಿಗೆ ಇರಾನ್ನಿಂದ ತೈಲವನ್ನು ಆಮದು ಮಾಡಿಕೊಂಡಿತ್ತು. ಬಳಿಕ ರಕ್ಷಣಾ ಕ್ಷೇತ್ರದಲ್ಲಿ ದೇಶಕ್ಕೆ ಬೇಕಾಗಿದ್ದ ಕೆಲವು ಯುದ್ಧದ ಸಾಮಗ್ರಿಗಳನ್ನು ಆಮದು ಮಾಡಿಕೊಂಡಿದ್ದು, ಎರಡು ದೇಶಗಳ ನಡುವಿನ ಬೆಂಕಿಗೆ ತುಪ್ಪ ಸುರಿಯುವಂತಾಯಿತು.
ಈ ಹಿನ್ನೆಲೆಯಲ್ಲಿ ಯುಎಸ್ಎ ಸಕಾರಣ ನೀಡದೆ ಭಾರತ ಮತ್ತು ಅಮೆರಿಕ ಎರಡು ರಾಷ್ಟ್ರಗಳ ನಡುವಿನ ಮಾತುಕತೆಯನ್ನು ಸೆಪ್ಟೆಂಬರ್ 6 ಕ್ಕೆ ಮುಂದೂಡಿತು. ಈ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಟ್ರಂಪ್ ಅವರನ್ನು ಗಣರಾಜ್ಯೋತ್ಸವಕ್ಕೆ ಅತಿಥಿಯನ್ನಾಗಿ ಆಮಂತ್ರಿಸಿದ್ದು, ಟ್ರಂಪ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.