ನವದೆಹಲಿ(ಫೆ. 24): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ತಮ್ಮ ಕುಟುಂಬ ಸಮೇತ ಭಾರತಕ್ಕೆ ಬರುತ್ತಿರುವ ಅವರ ಎರಡು ದಿನ ಇಲ್ಲೇ ಇರಲಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸ್ನೇಹಕ್ಕೆ ಈ ಭೇಟಿ ಹೊಸ ಮೆರಗು ನೀಡುವ ಸಾಧ್ಯತೆ ಇದೆ. ಟ್ರಂಪ್ ಸ್ವಾಗತಕ್ಕೆ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಗುಜರಾತ್ನ ಅಹ್ಮದಾಬಾದ್ ನಗರಕ್ಕೆ ನೇರವಾಗಿ ಬಂದಿಳಿಯುವ ಅಮೆರಿಕ ಅಧ್ಯಕ್ಷರು ಇವತ್ತು ಸಂಜೆಯೇ ದೆಹಲಿಗೆ ತೆರಳಲಿದ್ದಾರೆ. ನಾಳೆ ರಾಜಧಾನಿಯಲ್ಲಿ ಇಬ್ಬರೂ ವಿವಿಧ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಅಥವಾ ಜಂಟಿ ಪತ್ರಿಕಾಗೋಷ್ಠಿ ಕೂಡ ನಡೆಯಲಿದೆ.
ಇವತ್ತು ಅಹ್ಮದಾಬಾದ್ನ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿರುವ ‘ಕೆಮ್ಚೋ ಟ್ರಂಪ್’ ಕಾರ್ಯಕ್ರಮ ಟ್ರಂಪ್ ಭೇಟಿಯ ಪ್ರಮುಖ ಹೈಲೈಟ್ ಆಗಿರಲಿದೆ. ಇಲ್ಲಿ ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಟ್ರಂಪ್ ಸಾಗಿ ಬರುವ ದಾರಿಯುದ್ಧಕ್ಕೂ ಸಕಲ ವ್ಯವಸ್ಥೆ ಮಾಡಲಾಗಿದೆ. ಅಹ್ಮದಾಬಾದ್ನ ಕೊಳಕು ಪ್ರದೇಶಗಳು ಮರೆಯಾಗುವ ರೀತಿಯಲ್ಲಿ ರಸ್ತೆಯ ಬದಿಗಳಲ್ಲಿ ಗೋಡೆಗಳನ್ನ ನಿರ್ಮಿಸಲಾಗಿರುವುದು ವಿಶೇಷ. ಹಾಗೆಯೇ, ನಾಳೆ ತಾಜ್ ಮಹಲ್ಗೆ ಟ್ರಂಪ್ ಬರಲಿರುವುದರಿಂದ ಅಲ್ಲಿ ಮಂಗಗಳ ಕಾಟ ಇಲ್ಲದಂತೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ತಾಜ್ ಮಹಲ್ ಬದಿಯಲ್ಲಿರುವ ಯಮುನಾ ನದಿಯನ್ನು ತುಸು ಸ್ವಚ್ಛಗೊಳಿಸಲಾಗಿದೆ. ನಾಳೆ 10 ಗಂಟೆಗೆ ದೆಹಲಿಯ ವಿಮಾನ ನಿಲ್ದಾಣದಿಂದ ಟ್ರಂಪ್ ಅವರು ನಿರ್ಗಮಿಸಲಿದ್ಧಾರೆ.
ಟ್ರಂಪ್ ಅವರ ಜೊತೆ ಪತ್ನಿ ಮೆಲಾನಿಯಾ ಟ್ರಂಪ್, ಮಗಳು ಇವಾಂಕಾ ಹಾಗೂ ಅಳಿಯ ಜರೆದ್ ಕುಶ್ನರ್ ಇರಲಿದ್ದಾರೆ. ಜೊತೆಗೆ ಒಂದು ಅಮೆರಿಕನ್ ನಿಯೋಗವೂ ಬಂದು ಹೋಗುತ್ತಿದೆ. ಮಂಗಳವಾರದಂದು ಮೆಲಾನಿಯಾ ಟ್ರಂಪ್ ಅವರು ದೆಹಲಿಯ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ವಿನೂತನವಾಗಿ ಜಾರಿಗೆ ತಂದಿರುವ ಹ್ಯಾಪಿನೆಸ್ ಕ್ಲಾಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ತಿಳಿದುಕೊಳ್ಳಲಿದ್ಧಾರೆ.
ಇದನ್ನೂ ಓದಿ: ತಾಜ್ಮಹಲ್ ವೀಕ್ಷಣೆಗೆ ತೆರಳುವ ಟ್ರಂಪ್ ಮತ್ತು ಕುಟುಂಬದೊಂದಿಗೆ ಪ್ರಧಾನಿ ಮೋದಿ ಹೋಗುವುದು ಅನುಮಾನ
ಟ್ರಂಪ್ ಅವರ ಇವತ್ತಿನ (ಫೆ. 24) ಕಾರ್ಯಕ್ರಮಗಳು:
ಬೆಳಗ್ಗೆ 11:40 - ಅಹ್ಮದಾಬಾದ್ನ ಸರ್ದಾರ್ ವಲ್ಲಭಭಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟ್ರಂಪ್ ಆಗಮನ
ಮಧ್ಯಾಹ್ನ 12:15 – ಅಹ್ಮದಾಬಾದ್ನ ಸಬರಮತಿ ಆಶ್ರಮಕ್ಕೆ ಭೇಟಿ
ಮಧ್ಯಾಹ್ನ 1:05 – ಅಹ್ಮದಾಬಾದ್ನ ಮೊಟೆರಾ ಸ್ಟೇಡಿಯಂನಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ
ಮಧ್ಯಾಹ್ನ 3:30 – ಆಗ್ರಾಗೆ ಹೊರಡುವುದು
ಮಧ್ಯಾಹ್ನ 4:45 – ಆಗ್ರಾಗೆ ಆಗಮನ
ಸಂಜೆ 5:15 – ತಾಜ್ ಮಹಲ್ ಭೇಟಿ
ಸಂಜೆ 6:45 – ದೆಹಲಿಗೆ ಹೊರಡುವುದು
ಸಂಜೆ 7:30 – ದೆಹಲಿಗೆ ಆಗಮನ
ಮಂಗಳವಾರ (ಫೆ. 25):
ಬೆಳಗ್ಗೆ 10 – ರಾಷ್ಟ್ರಪತಿ ಭವನದಲ್ಲಿ ಸ್ವಾಗತ ಕಾರ್ಯಕ್ರಮ
ಬೆಳಗ್ಗೆ 10:30 – ರಾಜಘಾಟ್ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವಾರ್ಪಣೆ
ಬೆಳಗ್ಗೆ 11 – ಹೈದರಾಬಾದ್ ಹೌಸ್ನಲ್ಲಿ ನರೇಂದ್ರ ಮೋದಿ ಜೊತೆ ಸಭೆ
ಮಧ್ಯಾಹ್ನ 12:40 – ಹೈದರಾಬಾದ್ ಹೌಸ್ನಲ್ಲಿ ಒಪ್ಪಂದಗಳಿಗೆ ಸಹಿ ಅಥವಾ ಪತ್ರಿಕಾ ಹೇಳಿಕೆ ಬಿಡುಗಡೆ
ಸಂಜೆ 7:30 – ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜೊತೆ ಭೇಟಿ
ರಾತ್ರಿ 10 – ಭಾರತದಿಂದ ನಿರ್ಗಮನ
(ಸುದ್ದಿ ಮಾಹಿತಿ: ಪಿಟಿಐ ಸುದ್ದಿ ಸಂಸ್ಥೆ)
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ