ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತವರ ಹೆಂಡತಿ ಮೆಲಾನಿಯಾ ಟ್ರಂಪ್ ಅವರು ರಾಷ್ಟ್ರಪತಿ ಭವನಕ್ಕೆ ತಲುಪಿದ್ದಾರೆ. ಈ ಇಬ್ಬರು ಗಣ್ಯರನ್ನು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್, ಪತ್ನಿ ಸವಿತಾ ಕೋವಿಂದ್ ಆತ್ಮೀಯವಾಗಿ ಬರ ಮಾಡಿಕೊಂಡರು. ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಟ್ರಂಪ್ ದಂಪತಿಯನ್ನು ರಾಮನಾಥ್ ಕೋವಿಂದ್ ಪರಿಚಯ ಮಾಡಿಕೊಂಡರು. ನಂತರ ಟ್ರಂಪ್ ಜೊತೆಗೆ ಭಾರತದ ಪ್ರವಾಸದ ಕುರಿತಂತೆ ರಾಮನಾಥ್ ಕೋವಿಂದ್ ಮಾತುಕತೆ ನಡೆಸಿದರು.
ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಜೊತೆ ಅಮೆರಿಕ ಒಪ್ಪಂದ ಮಾಡಿಕೊಂಡಿರುವ ಕ್ರಮವನ್ನ ಟ್ರಂಪ್ ಸಮರ್ಥಿಸಿಕೊಂಡರು. ವಿಶ್ವದ ಅತ್ಯಂತ ಕ್ಲಿಷ್ಟ ಪ್ರದೇಶವೆನಿಸಿರುವ ಆಫ್ಘಾನಿಸ್ತಾನದಲ್ಲಿ ನಾವು 19 ವರ್ಷ ಇದ್ದೆವು. ಅಲ್ಲಿ ಶಾಂತಿ ಸ್ಥಾಪಿಸಲು ಸಾಕಷ್ಟು ಶ್ರಮಿಸಿದ್ಧೇವೆ. ಆ ಭಾಗವಾಗಿ ತಾಲಿಬಾನ್ ಜೊತೆ ಒಪ್ಪಂದ ಮಾಡಿಕೊಂಡಿದ್ಧೇವೆ. ಪ್ರತಿಯೊಬ್ಬರೂ ಖುಷಿಯಾಗಿದ್ದಾರೆ. ಭಾರತಕ್ಕೂ ಸಮಾಧಾನ ಆಗಬಹುದು. ಮೋದಿ ಜೊತೆ ಈ ವಿಚಾರ ಮಾತನಾಡಿದೆ ಎಂದು ಅಮೆರಿಕ ಅಧ್ಯಕ್ಷರು ತಿಳಿಸಿದರು.
ಇದೇ ವೇಳೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇಮ್ರಾನ್ ಖಾನ್ ಮತ್ತು ನರೇಂದ್ರ ಮೋದಿ ಇಬ್ಬರೊಂದಿಗೂ ತನಗೆ ಉತ್ತಮ ಬಾಂಧವ್ಯ ಇದೆ. ಪಾಕಿಸ್ತಾನದಿಂದ ಸೃಷ್ಟಿಯಾಗುತ್ತಿರುವ ಭಯೋತ್ಪಾದನೆಯನ್ನು ಇಮ್ರಾನ್ ಖಾನ್ ಹತ್ತಿಕ್ಕುತ್ತಾರೆಂಬ ವಿಶ್ವಾಸ ನನಗಿದೆ. ಕಾಶ್ಮೀರ ಸಮಸ್ಯೆಯು ಎರಡೂ ದೇಶಗಳನ್ನು ಕಾಡುತ್ತಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ ಸಂಧಾನ ನಡೆಸಲು ಅಮೆರಿಕ ಸದಾ ಸಿದ್ಧವಿದೆ ಎಂದು ಟ್ರಂಪ್ ತಮ್ಮ ಉದ್ದೇಶವನ್ನು ಹೊರಹಾಕಿದರು.