news18-kannada Updated:September 17, 2020, 4:25 PM IST
ಡೊನಾಲ್ಡ್ ಟ್ರಂಪ್.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇದೀಗ ಮತ್ತೆ ಲೈಂಗಿಕ ದೌರ್ಜನ್ಯದ ಅರೋಪ ಸದ್ದು ಮಾಡುತ್ತಿದೆ. ಎರಡು ದಶಕಗಳ ಹಿಂದೆ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಡೊನಾಲ್ಡ್ ಟ್ರಂಪ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಓರ್ವ ಮಾಡೆಲ್ ನೀಡಿರುವ ಸಂದರ್ಶನ ಇದೀಗ ಅಮೆರಿಕದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಅಸಲಿಗೆ ಡೊನಾಲ್ಡ್ ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸ್ಫರ್ಧೆ ಖಚಿತವಾಗುತ್ತಿದ್ದಂತೆ ಒಬ್ಬರ ಹಿಂದೊಬ್ಬರಂತೆ ಅನೇಕ ಮಹಿಳೆಯರು ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಅನೇಕ ಮಾಡೆಲ್ ಮತ್ತು ನಟಿಯರು ಸಹ ಈ ಪಟ್ಟಿಯಲ್ಲಿದ್ದರು. ಇದೀಗ ಮತ್ತೆ ಅಮೆರಿಕದ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೋರ್ವ ಮಾಡೆಲ್ ಆಮಿ ಡೋರಿಸ್ ಡೊನಾಲ್ಡ್ ಟ್ರಂಪ್ ವಿರುದ್ಧ ಆರೋಪ ಹೊರಿಸುತ್ತಿದ್ದಾರೆ. ಈ ವಿಚಾರ ಪ್ರಸ್ತುತ ಇಡೀ ವಿಶ್ವದ ಗಮನ ಸೆಳೆಯುತ್ತಿದೆ.
ಅಮೆರಿಕದ ಪ್ರತಿಷ್ಠಿತ ಪತ್ರಿಕೆ ಗಾರ್ಡಿಯನ್ಗೆ ನೀಡಿರುವ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿರುವ ಮಾಡೆಲ್ ಆಮಿ ಡೋರಿಸ್, "ಸೆಪ್ಟೆಂಬರ್ 5, 1997 ರಂದು ನ್ಯೂಯಾರ್ಕ್ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಟ್ರಂಪ್ ತನ್ನ ವಿಐಪಿ ಶೌಚಾಲಯದ ಬಳಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು" ಎಂದು ಆರೋಪಿಸಿದ್ದಾರೆ.
"ಈ ಲೈಂಗಿಕ ಹಲ್ಲೆ ನಡೆಯುವಾಗ ನನಗೆ 24 ವರ್ಷವಾಗಿತ್ತು. ಈ ವೇಳೆ ನನ್ನನ್ನು ಬಿಗಿದು ಅಪ್ಪಿಕೊಂಡ ಟ್ರಂಪ್ ಬಲವಂತವಾಗಿ ನನಗೆ ಮುತ್ತಿಡಲು ಯತ್ನಿಸಿದ್ದರು. ಅಲ್ಲದೆ, ನನ್ನ ದೇಹವನ್ನು ಕೊಸರಲೂ ಬಿಡದಂತೆ ಬಲವಾಗಿ ಹಿಡಿದುಕೊಂಡಿದ್ದರು. ನನ್ನ ದೇಹದ ಎಲ್ಲಾ ಅಂಗಾಂಗಗಳನ್ನು ಸ್ಪರ್ಶಿಸಿದರು. ನಾನು ಅವರ ಹಿಡಿತದಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಸಹ ಅದು ಸಾಧ್ಯವಾಗಿರಲಿಲ್ಲ. ನನ್ನ ಬದುಕಿನಲ್ಲಿ ಇದೊಂದು ಅತ್ಯಂತ ಕೆಟ್ಟ ಅನುಭವ" ಎಂದು ಮಾಡೆಲ್ ಡೋರಿಸ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಫ್ಲೋರಿಡಾದ ನಿವಾಸಿಯಾಗಿರುವ ಆಮಿ ಡೋರಿಸ್ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರೇಕ್ಷಕರಾಗಿ ಭಾಗವಹಿಸಿದ್ದ ಟಿಕೆಟ್ ಮತ್ತು ನ್ಯೂಯಾರ್ಕ್ನಲ್ಲಿ ಇಡೀ ಟೆನಿಸ್ ಟೂರ್ನಿ ಮಗಿಯುವವರೆಗೆ ಅವರಿದ್ದ ಹಲವಾರು ಪೋಟೋಗಳನ್ನು ಸಾಕ್ಷಿ ರೂಪದಲ್ಲಿ ಗಾರ್ಡಿಯನ್ ಪತ್ರಿಕೆಗೆ ನೀಡಿದ್ದಾರೆ. ಈ ಎಲ್ಲಾ ಪೋಟೋದಲ್ಲೂ ಮಾಡೆಲ್ ಡೋರಿಸ್ ಜೊತೆಗೆ ಪ್ರಸ್ತುತ ಅಮೆರಿಕದ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಸಹ ಇರುವುದನ್ನು ಕಾಣಬಹುದಾಗಿದೆ.
ಈ ಸಮಯದಲ್ಲಿ ಟ್ರಂಪ್ಗೆ 51 ವರ್ಷ ವಯಸ್ಸಾಗಿತ್ತು ಮತ್ತು ಅವರು ಎರಡನೇ ಪತ್ನಿಯಾಗಿ ಮಾರ್ಲಾ ಮ್ಯಾಪಲ್ಸ್ ಅವರನ್ನು ವಿವಾಹವಾಗಿದ್ದರು ಎಂದು ಆಮಿ ಡೋರಿಸ್ ತಿಳಿಸಿದ್ದಾರೆ.
ಈಗ 48 ವರ್ಷದ ಡೋರಿಸ್ ಅವಳಿ ಹೆಣ್ಣುಮಕ್ಕಳ ತಾಯಿಯಾಗಿದ್ದು, 2016 ರಲ್ಲಿ ಆಗಿನ ರಿಪಬ್ಲಿಕನ್ ಪಕ್ಷದ ಅಧ್ಯಕ್ಷರ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್ ಹೆಸರು ಘೋಷಣೆಯಾಗುತ್ತಿದ್ದಂತೆ ಅನೇಕ ಹೆಣ್ಣು ಮಕ್ಕಳು ತಮ್ಮ ಮೇಲೆ ಟ್ರಂಪ್ನಿಂದ ಆದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದರು. ಈ ವೇಳೆ ನಾನೂ ಸಹ ಸಾರ್ವಜನಿಕವಾಗಿ ಮಾತನಾಡಲು ಯತ್ನಿಸಿದ್ದೆ. ಆದರೆ, ನನ್ನ ಕುಟುಂಬಕ್ಕೆ ಇದರಿಂದ ತೊಂದರೆಯಾಗಬಹುದು ಎಂದು ಯೋಜಿಸಿ ಸುಮ್ಮನಿದ್ದೆ ಎಂದಿದ್ದಾರೆ.
ಇದನ್ನೂ ಓದಿ : ಲಡಾಖ್, ಅರುಣಾಚಲದಲ್ಲಿ ಚೀನಾದಿಂದ 1.28 ಲಕ್ಷ ಚ.ಕಿ. ಪ್ರದೇಶ ಅತಿಕ್ರಮಣ: ರಕ್ಷಣಾ ಸಚಿವ ರಾಜನಾಥ್ ಸಿಂಗ್ಆದರೆ, ಮಾಡೆಲ್ ಡೋರಿಸ್ ಡೊನಾಲ್ಡ್ ಟ್ರಂಪ್ ವಿರುದ್ಧ ಹೊರಿಸಿರುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪ ಅಮೆರಿಕದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗುತ್ತಿದ್ದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ವಕೀಲರ ಮೂಲಕ ಈ ಆರೋಪವನ್ನು ನಿರಾಕರಿಸಿದ್ದಾರೆ. ಅಲ್ಲದೆ, ಡೋರಿಸ್ ಅವರ ಮೇಲೆ ತಾನು ಯಾವುದೇ ರೀತಿಯಲ್ಲೂ ತೊಂದರೆ ಅಥವಾ ದೌರ್ಜನ್ಯ ಎಸಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲೇ ಡೊನಾಲ್ಡ್ ಟ್ರಂಪ್ ವಿರುದ್ಧ ಇಂತಹ ಆರೋಪಗಳು ಕೇಳಿ ಬರುತ್ತಿರುವುದು ವಿಪರ್ಯಾಸ. ಅಲ್ಲದೆ, ಎರಡನೇ ಅವಧಿಗೂ ಅಧ್ಯಕ್ಷರಾಗಲು ಬಯಸಿರುವ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧೆಗೆ ಮುಂದಾಗಿದ್ದಾರೆ. ಮುಂದಿನ ತಿಂಗಳು ಬಹು ನಿರೀಕ್ಷಿತ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಆದರೆ, ಈ ಚುನಾವಣೆಯ ಮೇಲೆ ಟ್ರಂಪ್ ವಿರುದ್ಧ ಇದೀಗ ಕೇಳಿ ಬರುತ್ತಿರುವ ಲೈಂಗಿಕ ಆರೋಪ ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.
Published by:
MAshok Kumar
First published:
September 17, 2020, 4:23 PM IST