ಯುರೋ 2020 ಫೈನಲ್ ಪಂದ್ಯಕ್ಕೂ, ಅದರ ನಂತರ ಕೌಟುಂಬಿಕ ಹಿಂಸೆ ಪ್ರಕರಣಗಳು ಹೆಚ್ಚಾಗುವುದಕ್ಕೂ ಯಾವ ರೀತಿಯ ಸಂಬಂಧ ಇದೆ ಅಂತ ನೀವು ತಲೆ ಕೆಡಿಸಿಕೊಳ್ಳಬಹುದು. ಆದರೆ ಪ್ರತಿಯೊಂದು ಫುಟ್ಬಾಲ್ ಪಂದ್ಯಕ್ಕೂ ಕೌಟುಂಬಿಕ ಹಿಂಸೆಗಳು ಹೆಚ್ಚಾಗುವುದಕ್ಕೆ ತುಂಬಾನೇ ಹತ್ತಿರದ ನಂಟಿದೆ. ಇಂಗ್ಲೆಂಡ್ ಫುಟ್ಬಾಲ್ ತಂಡದ ಅಭಿಮಾನಿಗಳು ಸುಮಾರು 50 ವರ್ಷಗಳಿಂದ ತಮ್ಮ ದೇಶದ ತಂಡವು ಯೂರೋ ಕಪ್ ಅನ್ನು ತನ್ನ ಮುಡಿಗೇರಿಸಿಕೊಳ್ಳುತ್ತದೆಯೇ ಎಂದು ತುಂಬಾ ಕಾತುರತೆಯಿಂದ ಕಾಯುತ್ತಿದ್ದರು. ಭಾನುವಾರ ಸಂಜೆ ಇಂಗ್ಲೆಂಡ್ ಮತ್ತು ಇಟಲಿಯ ದೇಶಗಳ ನಡುವೆ ನಡೆದ ಫೈನಲ್ ಪಂದ್ಯದ ನಂತರ ಕೌಟುಂಬಿಕ ಹಿಂಸೆ ಪ್ರಕರಣಗಳು ಹೆಚ್ಚಾಗಲಿವೆ ಎಂದು ತಜ್ಞರು ಊಹಿಸಿದ್ದಾರೆ.
ಅಂಕೆ ಸಂಖ್ಯೆ ಮಾಹಿತಿ ಪ್ರಕಾರ ಫೈನಲ್ ಪಂದ್ಯದ ನಂತರ ಕೌಟುಂಬಿಕ ಹಿಂಸೆಗಳು ಹೆಚ್ಚಾಗಲಿವೆ ಎಂದು ತಜ್ಞರು ಹೇಳಿದ್ದಾರೆ. 2010 ರ ವಿಶ್ವಕಪ್ ಪಂದ್ಯಾವಳಿಗಳನ್ನು ಗಮನಕ್ಕೆ ತೆಗೆದುಕೊಂಡರೆ, ಇಂಗ್ಲೆಂಡ್ ಪಂದ್ಯವನ್ನು ಗೆದ್ದಾಗ ಕೌಟುಂಬಿಕ ಹಿಂಸಾಚಾರವು ಶೇ27.7 ರಷ್ಟು ಹೆಚ್ಚಾಗಿತ್ತು. ಅವರು ಸೋತಾಗಲೂ ಕೌಟುಂಬಿಕ ಹಿಂಸೆ ಪ್ರಕರಣಗಳಲ್ಲಿ ಸುಮಾರು ಶೇ.33.9 ರಷ್ಟು ಹೆಚ್ಚು ದಾಖಲಾಗಿತ್ತು.
ಸೆಂಟರ್ ಫಾರ್ ಎಕನಾಮಿಕ್ ಪರ್ಫಾರ್ಮೆನ್ಸ್ (ಸಿಇಪಿ) ಜುಲೈ 4 ರಂದು ಬಿಡುಗಡೆ ಮಾಡಿದಂತಹ ಅಧ್ಯಯನದ ಪ್ರಕಾರ, ಆಟವಾದ ನಂತರ ದೇಶೀಯ ನಿಂದನೆ ಘಟನೆಗಳು ಪ್ರತಿ ಎರಡು ಗಂಟೆಗಳಿಗೊಮ್ಮೆ ಶೇ.5 ರಷ್ಟು ಹೆಚ್ಚಾಗುತ್ತವೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
ಈ ಪಂದ್ಯಗಳ ನಂತರ ನಡೆಯುವ ಅನೇಕ ಕೌಟುಂಬಿಕ ಹಿಂಸೆಗಳ ಘಟನೆಗಳಿಗೆ ನೇರವಾಗಿ ಪುರುಷರೇ ಹೊಣೆಯಾಗಿದ್ದು, ಇದಕ್ಕೆ ಮುಖ್ಯ ಕಾರಣ ಎಂದರೆ ಅತಿಯಾದ ಮದ್ಯಪಾನ ತೆಗೆದುಕೊಳ್ಳುವುದು ಎಂದು ಸಿಇಪಿ ಅಧಿಕಾರಿಯೊಬ್ಬರು ಹೇಳುತ್ತಾರೆ.
ಪಂದ್ಯವನ್ನು ಪಬ್‌ನಲ್ಲಿ ಕುಳಿತು ವೀಕ್ಷಿಸಿದ ಮತ್ತು ಆ ಪಂದ್ಯದಲ್ಲಿ ತಮ್ಮ ನೆಚ್ಚಿನ ತಂಡವು ಪರಾಭವಗೊಂಡಿದ್ದಾರೆ, ಆ ಮನೆಯ ಹೆಂಡತಿಯು ಒಂದು ವಾರದವರೆಗೆ ಹೊರಗೆ ಕಾಣಸಿಗುವುದಿಲ್ಲ. ಏಕೆಂದರೆ ಆಕೆಯ ಕಣ್ಣು ಪೂರ್ತಿಯಾಗಿ ಕಪ್ಪಾಗಿರುತ್ತದೆ. ಇಲ್ಲವೇ ಕೈ ಮೂಳೆ ಮುರಿದಿರುತ್ತದೆ ಎಂದು ಅಧ್ಯಯನದಲ್ಲಿ ಒಬ್ಬ ಮಹಿಳೆಯೇ ಇದನ್ನು ಹೇಳಿಕೊಂಡಿರುವುದು ಸತ್ಯ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಧ್ಯಾಪಕರು ಸಹ ಕ್ರೀಡೆಗಳು ಸಾಮಾನ್ಯವಾಗಿ ಈ ರೀತಿಯ ಕೌಟುಂಬಿಕ ಹಿಂಸೆಗಳಿಗೆ ಪ್ರೇರಣೆ ನೀಡುವುದಿಲ್ಲ, ಆದರೆ ಪಂದ್ಯವನ್ನು ವೀಕ್ಷಿಸುತ್ತಾ ಅತಿಯಾಗಿ ಕುಡಿದ ನಂತರ ತಮ್ಮ ತಂಡದ ಫಲಿತಾಂಶದ ನಿರೀಕ್ಷೆಗಳಿಂದ ಈ ರೀತಿಯ ಹಿಂಸೆಗಳು ನಡೆಯುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ದ ಬ್ರಿಟಿಷ್ ಬಿಯರ್ ಅಂಡ್ ಪಬ್ ಅಸೋಸಿಯೇಷನ್ ನೀಡಿದ ಮಾಹಿತಿ ಪ್ರಕಾರ ಸುಮಾರು 13 ಮಿಲಿಯನ್ ಪಿಂಟ್ಗಳು ಭಾನುವಾರ ಮಾರಾಟವಾಗಿದ್ದು, ಇದರಲ್ಲಿ ಸುಮಾರು 7 ಮಿಲಿಯನ್ ಪಿಂಟ್ಗಳನ್ನು ಪಂದ್ಯದ ವೇಳೆಯಲ್ಲಿ ಮಹಾಶಯರು ಖಾಲಿಮಾಡಿದ್ದಾರೆ ಎಂದು ತಿಳಿಸಿರುವುದು ನಿಜಕ್ಕೂ ಇಂಗ್ಲೆಂಡ್ನಲ್ಲಿ ಪಂದ್ಯವನ್ನು ವೀಕ್ಷಿಸುತ್ತಾ ಮದ್ಯಪಾನವನ್ನು ಅತಿಯಾಗಿ ಕುಡಿಯುವ ಅಭ್ಯಾಸವನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಏಕೆಂದರೆ ಇದರಿಂದ ಕುಟುಂಬದಲ್ಲಿರುವ ಹೆಂಡತಿ ಮತ್ತು ಮಕ್ಕಳ ಬಗ್ಗೆ ನಾವು ಯೋಚನೆ ಮಾಡಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ