ನವದೆಹಲಿ(ಜೂನ್ 18): ಲಡಾಖ್ನ ಪೂರ್ವಭಾಗದಲ್ಲಿರುವ ಇಡೀ ಗಾಲ್ವನ್ ಕಣಿವೆಯ ಪ್ರದೇಶ ತನಗೆ ಸೇರಿದ್ದು ಎಂದು ಚೀನಾ ಹೇಳಿಕೊಳ್ಳುತ್ತಿದೆ. ಚೀನಾ ಇಷ್ಟು ನೇರವಾಗಿ ಇದನ್ನು ಹೇಳುತ್ತಿರುವುದು ಇದೇ ಮೊದಲು. ಆದರೆ, ಚೀನಾದ ಭೂಪ್ರದೇಶಗಳ ಹಪಾಹಪಿ ಇಷ್ಟಕ್ಕೇ ಸೀಮಿತ ಅಲ್ಲ ಎಂಬುದು ಸಿಕ್ಕಿಮ್, ಅರುಣಾಚಲ ಪ್ರದೇಶ ಮೊದಲಾದ ಕಡೆ ಚೀನಾ ರೂಪಿಸುತ್ತಿರುವ ಸಂಚಿನಿಂದ ಗೊತ್ತಾಗುತ್ತದೆ. ಉಚ್ಛಾಟಿತ ಟಿಬೆಟಿಯನ್ ಸರ್ಕಾರದ ಮುಖಂಡರೊಬ್ಬರು ಚೀನಾ ಬಗ್ಗೆ ಹುಷಾರಾಗಿರುವಂತೆ ಭಾರತ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಟಿಬೆಟ್ನ ಐದು ಬೆರಳುಗಳ ಕಾರ್ಯತಂತ್ರವನ್ನು ಚೀನಾ ಅನುಸರಿಸುತ್ತಿರುವಂತಿದೆ. ಮಾವೋ ಜೆಡಾಂಗ್ ಹಾಕಿಕೊಟ್ಟ ಯೋಜನೆಯನ್ನು ಚೀನಾ ಈಗ ಅನುಷ್ಠಾನಕ್ಕೆ ತರಲು ಹೊರಟಿರುವಂತಿದೆ. ಟಿಬೆಟ್ನ ಐದು ಬೆರಳುಗಳಲ್ಲಿ ಲಡಾಖ್ ಮೊದಲ ಬೆರಳಾಗಿದೆ. ಚೀನಾ ಎಲ್ಲಾ ಬೆರಳುಗಳನ್ನೂ ವಶಪಡಿಸಿಕೊಳ್ಳುತ್ತದೆ. ಟಿಬೆಟ್ಗೆ ಆದ ಗತಿಯನ್ನ ತಿಳಿದು ನೀವು ಎಚ್ಚೆತ್ತುಕೊಳ್ಳಿ ಎಂದು ಸೆಂಟ್ರಲ್ ಟಿಬೆಟ್ ಆಡಳಿತದ ಅಧ್ಯಕ್ಷರೂ ಆದ ಲೋಬ್ಸಂಗ್ ಸಂಗಯ್ ತಿಳಿಹೇಳಿದ್ದಾರೆ.
“ಟಿಬೆಟ್ ಅನ್ನು ಚೀನಾ ಆಕ್ರಮಿಸಿದಾಗ ಮಾವೋ ಜೆಡಾಂಗ್ ಹಾಗೂ ಇತರ ಚೀನೀ ಮುಖಂಡರು ಹೀಗೆ ಹೇಳಿದ್ದರು: ‘ನಮಗೆ ಟಿಬೆಟ್ ಹಸ್ತವಾಗಿದೆ. ಅದನ್ನು ಮೊದಲು ವಶಪಡಿಸಿಕೊಳ್ಳಬೇಕು. ನಂತರ ಆ ಹಸ್ತದ ಐದು ಬೆರಳುಗಳನ್ನ ಪಡೆದುಕೊಳ್ಳಬೇಕು’ ಎಂದಿದ್ದರು. ಅವರ ಪ್ರಕಾರ, ಲಡಾಖ್ ಮೊದಲ ಬೆರಳು. ಬೇರೆ ನಾಲ್ಕು ಬೆರಳುಗಳೆಂದರೆ ನೇಪಾಳ, ಭೂತಾನ್, ಸಿಕ್ಕಿಮ್ ಮತ್ತು ಅರುಣಾಚಲ ಪ್ರದೇಶಗಳಾಗಿವೆ” ಎಂದು ಟಿಬೆಟಿಯನ್ ಮುಖಂಡ ಹೇಳುತ್ತಾರೆ.
ಇದನ್ನೂ ಓದಿ: ಚೀನೀ ಉಯ್ಗರ್ ಮುಸ್ಲಿಮರ ರಕ್ಷಣೆಗೆ ಅಮೆರಿಕದಲ್ಲಿ ಹೊಸ ಕಾಯ್ದೆ; ಚೀನಾ ಕೆಂಗಣ್ಣು
2017ರಲ್ಲಿ ಡೋಕ್ಲಾಮ್ನಲ್ಲಿ ನಡೆದ ಘಟನೆ ಮತ್ತು ಈಗ ಲಡಾಖ್ನಲ್ಲಿ ನಡೆದ ಮುಖಾಮುಖಿ ಇವೆಲ್ಲವೂ ಇದೇ ಕಾರ್ಯತಂತ್ರದ ಭಾಗಗಳಾಗಿವೆ. ಟಿಬೆಟಿಯನ್ ಮುಖಂಡರು ಕಳೆದ 60 ವರ್ಷಗಳಿಂದಲೂ ಭಾರತಕ್ಕೆ ಇದರ ಬಗ್ಗೆಯೇ ಎಚ್ಚರಿಸುತ್ತಲೇ ಬಂದಿದ್ದಾರೆ. ನೇಪಾಳ, ಭೂತಾನ್ ಮತ್ತು ಅರುಣಾಚಲ ಪ್ರದೇಶದ ಮೇಲೂ ಒತ್ತಡ ಇದೆ ಎನ್ನುತ್ತಾರೆ ಅವರು.
ಚೀನಾದ ವಿದೇಶಾಂಗ ಇಲಾಖೆ ವಕ್ತಾರರು ತಮ್ಮ ದೇಶದ ಸಾರ್ವಭೌಮತ್ವವನ್ನು ಉಳಿಸಿಕೊಳ್ಳಲು ಬದ್ಧವಾಗಿರುವುದಾಗಿ ಹೇಳಿದ್ದಾರೆ. ಭಾರತ ಈಗಿನ ಸಂದರ್ಭವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಚೀನಾವನ್ನು ಕಡಿಮೆ ಅಂದಾಜು ಮಾಡಿಕೊಳ್ಳಬಾರದು ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ್ಧಾರೆ.
ಇದನ್ನೂ ಓದಿ: ಗಡಿ ಉದ್ವಿಗ್ನತೆ ಬಗ್ಗೆ ಮೋದಿ ಮೌನ; ಕೇಂದ್ರ ಸರ್ಕಾರದ ವಿರುದ್ಧ ಪ್ರಶ್ನೆಗಳ ಮಳೆಗೈದ ರಾಹುಲ್ ಗಾಂಧಿ
ಲಡಾಖ್ನ ಗಾಲ್ವನ್ ಕಣಿವೆ ಭಾಗವು ಚೀನಾಗೆ ಈಗ ಬಹಳ ಮಹತ್ವದ ಸ್ಥಳವಾಗಿದೆ. ಲೇಹ್ನಿಂದ ಕರಕೋರಮ್ ಪಾಸ್ ಅನ್ನು ಸಂಪರ್ಕಿಸುವ ದರ್ಬುಕ್ ರಸ್ತೆಯನ್ನ ಈ ಸ್ಥಳದಿಂದ ಬಹಳ ಸಮೀಪದಲ್ಲಿ ವೀಕ್ಷಿಸಬಹುದು. ಇದರಿಂದ ಭಾರತದ ಗಡಿಭಾಗದೊಳಗೆ ನಡೆಯುವ ಎಲ್ಲಾ ಮಿಲಿಟರಿ ಚಟುವಟಿಕೆಯ ಮೇಲೆ ಕಣ್ಣಿಟ್ಟಿರಬಹುದು ಎಂಬುದು ಚೀನಾದ ಲೆಕ್ಕಾಚಾರವಾಗಿದೆ. ಹೀಗಾಗಿ, ಇದನ್ನು ಅತಿಕ್ರಮಿಸಲು ಪಿಎಲ್ಎ ಸೈನಿಕರು ಧಾವಿಸಿ ಬಂದಿದ್ದರಬಹುದು ಎಂದು ತಜ್ಞರು ವಿಶ್ಲೇಷಿಸುತ್ತಾರೆ.
- ಮಹಾ ಸಿದ್ದಿಕಿ, CNN-News18 ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ