ನವದೆಹಲಿ (ಜ.30): ನಾನು ಮಧುಮೇಹಿ ರೋಗಿ. ದಿನದಲ್ಲಿ ನಾಲ್ಕು ದಿನ ಇನ್ಸುಲಿನ್ ತೆಗೆದುಕೊಳ್ಳುತ್ತೇನೆ. ರಾಜಕೀಯಕ್ಕೆ ಸೇರಬೇಡಿ ಎಂಬ ವೈದ್ಯರ ಸಲಹೆ ಧಿಕ್ಕಾರಿಸಿ, ಜನಸೇವೆಗೆ ಮುಂದಾದೆ. ಒಂದು ಕ್ಷಣ ಕೂಡ ನಾನು ನನ್ನ ಬಗ್ಗೆಯಾಗಲಿ, ನನ್ನ ಕುಟುಂಬದ ಬಗ್ಗೆಯಾಗಲಿ ಯೋಚಿಸಿಲ್ಲ. ದೇಶಕ್ಕಾಗಿ ನನ್ನ ಜೀವ ಕೊಡಲು ಸಿದ್ಧವಾಗಿದ್ದೇನೆ. ನಾನು ಹೇಗೆ ಭಯೋತ್ಪಾದಕನಾಗಲು ಸಾಧ್ಯ ಹೇಳಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ,
ಚುನಾವಣಾ ಪ್ರಚಾರದ ವೇಳೆ
ಕೇಜ್ರಿವಾಲ್ ಒಬ್ಬ ಭಯೋತ್ಪಾದಕ ಎಂದು ಬಿಜೆಪಿ ಸಂಸದ ಪ್ರವೇಶ್ ವರ್ಮಾ ವಾಗ್ದಾಳಿ ನಡೆಸಿದ್ದರು. ತಮ್ಮ ವಿರುದ್ಧ ಭಯೋತ್ಪಾದಕ ಎಂಬ ಹಣೆ ಪಟ್ಟಿ ಕಟ್ಟಿದ ಹಿನ್ನೆಲೆ ಬಿಜೆಪಿ ವಿರುದ್ಧ ಇಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಆರ್ಎಸ್ ಹುದ್ದೆ ತೊರೆದ ಬಳಿಕ ನಾನು ವಿದೇಶಕ್ಕೆ ಹೋಗಿ ನೆಲೆಸಬಹುದಿತ್ತು. ನನ್ನ ಅನೇಕ ಸ್ನೇಹಿತರು, ಸಹೋದ್ಯೂಗಿಗಳು ಆಹ್ವಾನಿಸಿದರೂ, ನಾನು ಇಲ್ಲಿಯೇ ನೆಲೆಸಿದೆ. ಉಗ್ರವಾದಿಗಳು ಬಡವರ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾರಾ ಹೇಳಿ ಎಂದು ಕೇಳಿದರು.
ರಾಜ್ಯದ ಮಕ್ಕಳನ್ನು ನನ್ನ ಸ್ವಂತ ಮಕ್ಕಳೆಂದು ಪರಿಗಣಿಸಿ, ಅವರಿಗೆ ಶಿಕ್ಷಣ ಆರೋಗ್ಯ ಕಲ್ಪಿಸಿದ್ದೇನೆ. ಬಡವರಿಗೆ ಕಡಿಮೆ ವೆಚ್ಚದಲ್ಲಿ ಔಷಧೋಪಚಾರ ನೀಡಿದ್ದೇನೆ. ದೇಶಕ್ಕಾಗಿಯೇ ನನ್ನನ್ನು ಅರ್ಪಿಸಿಕೊಂಡಿದ್ದೇನೆ. ಆದರೆ, ಅವರು ನನಗೆ ಕಿರುಕುಳ ನೀಡುವುದನ್ನು ಬಿಡಲಿಲ್ಲ. ಅವರಿಗೂ ಗೊತ್ತು ನಾನು ದೇಶಭಕ್ತ ಎಂದು . ನಾನು ದೆಹಲಿ ಜನರಿಗೆ ಏನಾಗಲಿದ್ದೇನೆ? ಮಗನಾ, ಸಹೋದರನಾ ಅಥವಾ ಆಂತಕವಾದಿಯಾ ಎಂಬುದನ್ನು ರಾಜ್ಯದ ಜನರೇ ತೀರ್ಮಾನಿಸಲಿ ಎಂದು ಭಾವೋದ್ವೇಗದ ಮಾತುಗಳನ್ನು ಆಡಿದರು.
ಇದನ್ನು ಓದಿ: ದೆಹಲಿ ವಿಧಾನಸಭಾ ಚುನಾವಣೆ: ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಅನುರಾಗ್ ಠಾಕೂರ್, ಪರ್ವೇಶ್ ವರ್ಮಾಗೆ ಬಿಜೆಪಿ ಕೋಕ್
ಅಲ್ಲದೇ ಬಿಜೆಪಿ ನಾಯಕರ ಭಯೋತ್ಪಾದಕ ಹೇಳಿಕೆ ವಿರುದ್ಧ ರಾಜ್ಯ ಚುನಾವಣಾ ಆಯುಕ್ತರಿಗೆ ಕೂಡ ದೂರು ನೀಡಲಾಗುವುದು. ಜೊತೆಗೆ ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಅವರು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ