ಆಂಧ್ರ ಪ್ರದೇಶ : ಬಾಲಕಿಯೊಬ್ಬಳ ಹೊಟ್ಟೆಯಲ್ಲಿದ್ದ ಒಂದು ಕೆಜಿಗೂ ಅಧಿಕ ಕೂದಲನ್ನು ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಈ ಘಟನೆ ಆಂಧ್ರ ಪ್ರದೇಶದ (Andhra Pradesh) ಕೃಷ್ಣಾ ಜಿಲ್ಲೆಯ ಗುಡಿವಾಡದ ಶ್ರೀರಾಮ ನರ್ಸಿಂಗ್ ಹೋಮ್ನಲ್ಲಿ (Nursing Home) 14 ವರ್ಷದ ಬಾಲಕಿಗೆ ವೈದ್ಯರು ಸರ್ಜರಿ (Surgery ) ಮಾಡುವ ಮೂಲಕ ಹೊರ ತೆಗೆದಿದ್ದಾರೆ. ಬಾಲಕಿ ಅನ್ನ ಸೇರಿದಂತೆ ಯಾವುದೇ ಆಹಾರ ಪದಾರ್ಥಗಳನ್ನು ಸೇವಿಸುತ್ತಿರಲಿಲ್ಲ, ಪದೇ ಪದೇ ವಾಂತಿ ಮಾಡಿಕೊಳ್ಳುತ್ತಿದ್ದಳು. ಹಾಗಾಗಿ 15 ದಿನಗಳ ಹಿಂದೆ ಬಾಲಕಿಯ ಪೋಷಕರು ಶ್ರೀರಾಮ ನರ್ಸಿಂಗ್ ಹೋಮ್ಗೆ ಕರೆದುಕೊಂಡು ಬಂದಿದ್ದರು.
ಈ ವೇಳೆ ವೈದ್ಯ ಪೊಟ್ಲೂರಿ ವಂಶಿಕೃಷ್ಣ ಎಂಬುವವರು ಎಂಡೋಸ್ಕೋಪಿ ಸೇರಿದಂತೆ ಹಲವು ಪ್ಯಾಥಲಾಜಿಕಲ್ ಪರೀಕ್ಷೆಗಳನ್ನು ನಡೆಸಿ ಆಕೆಗೆ ಕೂದಲು ತಿನ್ನುವ ಅಭ್ಯಾಸವಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ನಂತರ ಬಾಲಕಿಗೆ ಕೂದಲು ತಿನ್ನುವ ಹವ್ಯಾಸವಿದೆ ಎನ್ನುವುದು ತಿಳಿದುಬಂದಿದೆ.
ಗೆಡ್ಡೆಯಾಗಿ ಮಾರ್ಪಟ್ಟಿದ್ದ ಕೂದಲು
ಬಾಲಕಿಯ ಹೊಟ್ಟೆ ಸೇರಿದ್ದ ಕೂದಲು ಗಡ್ಡೆಯಾಗಿ ಮಾರ್ಪಟ್ಟಿತ್ತು. ವೈದ್ಯರು ಬಾಲಕಿಗೆ ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ಹೊಟ್ಟೆಯಿಂದ ಒಂದು ಕಿಲೋಗೂ ಅಧಿಕ ತೂಕದ ಕೂದಲು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶಸ್ತ್ರ ಚಿಕಿತ್ಸೆ ಕುರಿತು ವಿವರ ನೀಡಿದ ಡಾ. ವಂಶಿಕೃಷ್ಣ, ಬಾಲಕಿ 20 ವರ್ಷಕ್ಕಿಂತ ಕಡಿಮೆ ವಯಸ್ಸಿನವಳು, ರಕ್ತಹೀನತೆಯಿಂದ ಕೂದಲು ತಿನ್ನುವ ಅಭ್ಯಾಸ ಹೊಂದಿದ್ದಳು. ಇದು ಅಪರೂಪದ ಕಾಯಿಲೆಯಾಗಿದ್ದು, 15,000 ಜನರಲ್ಲಿ ಒಬ್ಬರಿಗೆ ಈ ಕಾಯಿಲೆ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Viral Story: ಬೆಂಗಳೂರಿನಿಂದ ಬಿರಿಯಾನಿ ಆರ್ಡರ್ ಮಾಡಿದ ಮುಂಬೈ ಹುಡುಗಿ- ಇದು ಹೇಗೆ ಸಾಧ್ಯ?
ಬಾಲಕಿ ಕೂದಲು ತಿನ್ನುವ ಅಭ್ಯಾಸ ಇದ್ದಿದ್ದರಿಂದ ಅವಳ ಜೀರ್ಣಾಂಗವ್ಯೂಹದಲ್ಲಿ ಕೂದಲು ಸ್ವಲ್ಪ ಸಮಯದವರೆಗೆ ಸಂಗ್ರಹವಾಗಿದೆ. ಇದರಿಂದ ಅದಕ್ಕಾಗಿಯೇ ಅವಳು ತಿನ್ನಲು ಸಾಧ್ಯವಾಗಲಿಲ್ಲ. ಅವಳು ಅನ್ನ ಅಥವಾ ಇತರ ಆಹಾರವನ್ನು ತೆಗೆದುಕೊಂಡಾಗ ವಾಂತಿ ಮಾಡುತ್ತಿದ್ದಳು. ಇನ್ನು ತಿಂದ ಆಹಾರ ಜೀರ್ಣವಾಗದ ಕಾರಣ ರೋಗಿಯು ಬಲಹೀನನಾಗುತ್ತಾನೆ. ರಕ್ತಹೀನತೆಯಿಂದ ಬಳಲುತ್ತಿರುವವರು ಕೂದಲು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕೊಡಗಿನಲ್ಲೊಂದು ಇದೇ ರೀತಿ ಪ್ರಕರಣ
ಇದೇ ರೀತಿಯ ಪ್ರಕರಣ ಕೊಡಗಿನಲ್ಲೂ ನಡೆದಿತ್ತು. ಯುವತಿಯೊಬ್ಬಳ ಹೊಟ್ಟೆ ಸೇರಿದ್ದ ಸುಮಾರು ಒಂದೂವರೆ ಕೆಜಿ ತೂಕದ ಕೂದಲಿನ ಗಡ್ಡೆಯನ್ನು ಮಡಿಕೇರಿಯಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಜಿಲ್ಲಾ ಆಸ್ಪತ್ರೆಯಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವತಿಯೊಬ್ಬರು ದಾಖಲಾಗಿದ್ದರು. ಸ್ಕ್ಯಾನ್ ಮಾಡಿ ನೋಡಿದಾಗ ಹೊಟ್ಟೆಯಲ್ಲಿ ಕೂದಲಿನಿಂದ ಕೂಡಿದ ಗೆಡ್ಡೆಯೊಂದು ಕಂಡು ಬಂದಿತ್ತು. ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ ಒಂದೂವರೆ ಕೆಜಿ ತೂಕದ ಗಡ್ಡೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಯುವತಿ ಕೂಡ ಕೂದಲು ತಿನ್ನುವ ಅಭ್ಯಾಸ ಮಾಡಿಕೊಂಡಿದ್ದಳು ಎಂದು ತಿಳಿದುಬಂದಿತ್ತು.
ರಕ್ತಹೀನತೆ ಎಂದರೇನು?
ರಕ್ತಹೀನತೆ (ಅನೀಮಿಯಾ) ಎಂದರೆ ದೇಹದ ಅಂಗಾಂಶಗಳಿಗೆ ಆಮ್ಲಜನಕವನ್ನು ಸಾಗಿಸಲು ರಕ್ತ ಕೆಂಪು ರಕ್ತ ಕಣಗಳಲ್ಲಿ ಹಿಮೋಗ್ಲೋಬಿನ್ನಿನ ಕೊರತೆ ಉಂಟಾಗುವುದು. ಹಿಮೋಗ್ಲೋಬಿನ್ ಕೆಂಪು ರಕ್ತಕಣದಲ್ಲಿರುವ ಒಂದು ಪ್ರೋಟೀನ್. ಇದು ದೇಹದ ಆಮ್ಲಜನಕ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತ ಕಣಗಳಿಗೆ ಕೆಂಪು ಬಣ್ಣವನ್ನು ನೀಡುತ್ತದೆ. ಹಿಮೋಗ್ಲೋಬಿನ್ನಿನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದ್ದು ಶ್ವಾಸಕೋಶದಿಂದ ಎಲ್ಲಾ ಅಂಗಗಳಿಗೆ ಮತ್ತು ಜೀವಕೋಶಗಳಿಗೆ ಅಗತ್ಯ ಪ್ರಮಾಣದ ಆಮ್ಲಜನಕವನ್ನು ಸರಬರಾಜು ಮಾಡುತ್ತದೆ.
ರಕ್ತಹೀನತೆಗೆ ಲಕ್ಷಣಗಳು
ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12 ಮಿಲಿಗ್ರಾಮಿಗಿಂತ ಕಡಿಮೆ ಇದ್ದರೆ ಆಗ ರಕ್ತಹೀನತೆ ಕಂಡುಬರುತ್ತದೆ. ರಕ್ತಹೀನತೆಯಿಂದ ಹೆಚ್ಚು ದಣಿವಾಗುತ್ತದೆ, ಈ ಕಾಯಿಲೆ ಉಳ್ಳ ಜನರು ದುರ್ಬಲರಾಗುತ್ತಾರೆ. ರಕ್ತಹೀನತೆಯು ಗಂಭೀರ ಹಂತಕ್ಕೆ ತಲುಪಿದಾಗ ಗೊಂದಲ, ತಲೆ ತಿರುಗುವಿಕೆ, ಪ್ರಜ್ಞೆ ತಪ್ಪುವುದು, ವಿಪರೀತ ಬಾಯಾರಿಕೆ, ವಾಂತಿ ಬರುವುದು, ಎದೆ ಬೇನೆ, ಹೃದಯಬಡಿತದಲ್ಲಿ ವ್ಯತ್ಯಾಸ ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ರಕ್ತಹೀನತೆಗೆ ಕಾರಣ
ರಕ್ತಹೀನತೆಗೆ ಪ್ರಮುಖ ಕಾರಣ ದೇಹದಲ್ಲಿ ಕಬ್ಬಿಣಾಂಶ ಕೊರತೆ. ನಾವು ದೇಹಕ್ಕೆ ಅತ್ಯಗತ್ಯವಾದ ಕಬ್ಬಿಣಾಂಶ ನಾವು ದಿನನಿತ್ಯ ಸೇವಿಸುವ ಆಹಾರದಿಂದ ದೊರೆಯುತ್ತದೆ. ಕಬ್ಬಿಣಾಂಶದ ಕೊರತೆಯಾದರೆ ನಿಶ್ಯಕ್ತಿ, ಸುಸ್ತು, ಜೀರ್ಣಶಕ್ತಿ ಕಡಿಮೆಯಾಗುವುದು ಮತ್ತು ಉಸಿರಾಟದಲ್ಲಿ ಕಷ್ಟವಾಗುವುದು ಕಂಡುಬರುತ್ತದೆ.
ರಕ್ತಹೀನತೆ ಮಕ್ಕಳು, ಹದಿಹರೆಯದವರು ಮತ್ತು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ರಕ್ತಹೀನತೆ ಸಾಮಾನ್ಯವಾಗಿ ಕಂಡುಬರುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಲಿಂಗ ತಾರತಮ್ಯದಿಂದ ಹೆಣ್ಣು ಮಕ್ಕಳಿಗೆ ಪೌಷ್ಠಿಕ ಆಹಾರ ನೀಡದೆ ಇರುವುದರಿಂದ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ರಕ್ತಹೀನತೆ ಕಂಡುಬರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ