ನವದೆಹಲಿ: ಭಾರತದಲ್ಲಿ (India) 2021ರ ವರ್ಷದಲ್ಲಿ ಸುಮಾರು 4,12,432 ರಸ್ತೆ ಅಪಘಾತಗಳು (Accidents) ಸಂಭಿವಿಸಿದ್ದು, ಇದರಲ್ಲಿ 1,53,972 ಮಂದಿ ಸಾವನ್ನಪ್ಪಿದ್ದಾರೆ ಮತ್ತು 3,84,448 ಮಂದಿ ಗಾಯಗೊಂಡಿದ್ದಾರೆ ಎಂದು ರಸ್ತೆ ಸಾರಿಗೆ (Road Transport) ಮತ್ತು ಹೆದ್ದಾರಿಗಳ ಸಚಿವಾಲಯ ಪ್ರಕಟನೆ ಬಿಡುಗಡೆ ಮಾಡಿದೆ. 2021 ರಲ್ಲಿ ಶೇ. 12.6 ರಷ್ಟು ರಸ್ತೆ ಅಪಘಾತಗಳು ಹೆಚ್ಚಾಗಿದೆ ಮತ್ತು ಇದೇ ವರ್ಷದಲ್ಲಿ ಶೇ. 16.9 ಸಾವುಗಳು ಮತ್ತು ಶೇ. 10.39 ಮಂದಿ ರಸ್ತೆ ಅಪಘಾತಗಳಿಂದಾಗಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highway) 96,382, ರಾಜ್ಯ ಹೆದ್ದಾರಿಗಳಲ್ಲಿ 96,382 ಮತ್ತು 1,87,225 ಇತರ ರಸ್ತೆ ಅಪಘಾತಗಳು ಸಂಭವಿಸಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MORTH) ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಯಲ್ಲಾದ ಅಪಘಾತದಲ್ಲಿ ಸತ್ತವರೆಷ್ಟು ಮಂದಿ?
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದ ಅಪಘಾತದಲ್ಲಿ 56,007 ಮಂದಿ ಸಾವನ್ನಪ್ಪಿದ್ದರೆ, ರಾಜ್ಯ ಹೆದ್ದಾರಿಗಳಲ್ಲಿ 37,963 ಮತ್ತು ಇತರ ರಸ್ತೆಗಳಲ್ಲಿ 60,002 ಸಾವುಗಳು ಸಂಭವಿಸಿವೆ. ಅದರಲ್ಲಿಯೂ ಹೆಚ್ಚಾಗಿ 18-45 ವರ್ಷ ವಯಸ್ಸಿನವರು ಅಪಘಾತಕ್ಕೆ ಓಳಗಾಗಿದ್ದಾರೆ. ಇವರಲ್ಲಿ ಸುಮಾರು 67% ರಷ್ಟು ಮಂದಿ ಸಾವನ್ನಪ್ಪಿದ್ದಾರೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಏಷ್ಯಾ ಮತ್ತು ಪೆಸಿಫಿಕ್ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗಕ್ಕೆ (UNESCAP)) ಒದಗಿಸಿದ ವರ್ಷದ ಕ್ಯಾಲೆಂಡರ್ನಲ್ಲಿ ಈ ಕುರಿತಂತೆ ಮಾಹಿತಿ ನೀಡಲಾಗಿದೆ. ಈ ವರದಿಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಇಲಾಖೆಗಳಿಂದ ಪಡೆದ ಮಾಹಿತಿಯನ್ನು ಆಧರಿಸಿದೆ.
ವೇಗ ಚಾಲನೆ, ಕುಡಿದು ಡ್ರೈವಿಂಗ್ ಮಾಡಿ ಸಾವನ್ನಪ್ಪಿದವರೆಷ್ಟು ಗೊತ್ತಾ?
2021 ರಲ್ಲಿ ಅತಿ ವೇಗದ ಚಾಲನೆಯಿಂದ 1,07,236 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಕುಡಿದು ವಾಹನ ಚಲಾಯಿಸಿ 3,314 ಮಂದಿ ಸಾವನ್ನಪ್ಪಿದ್ದಾರೆ. ಅಸಡ್ಡೆಯಿಂದ ವಾಹನ ಚಲಾಯಿಸಿ 8,122 ಮಂದಿ ಮತ್ತು ಸಂಚಾರ ದೀಪ ಉಲ್ಲಂಘಿಸಿ 679 ಮಂದಿ ಮೃತಪಟ್ಟಿದ್ದಾರೆ. ಡ್ರೈವಿಂಗ್ ಮಾಡುವಾಗ ಸೆಲ್ ಫೋನ್ ಬಳಸಿ 2,982 ಜನ ಪ್ರಾಣ ಕಳೆದುಕೊಂಡರೆ, ಇತರ ಕಾರಣಗಳಿಂದ 31,639 ಮಂದಿ ನಿಧನರಾಗಿದ್ದಾರೆ.
2021 ಸೇರಿದಂತೆ ಸತತ ನಾಲ್ಕು ವರ್ಷಗಳಿಂದ ಅಪಘಾತ, ಸಾವುಗಳು ಸಂಭವಿಸಿರುವುದು ನಿಯಮ ಉಲ್ಲಂಘನೆಗಳಿಂದಲೇ. ಹೀಗಾಗಿ ರಸ್ತೆ ಸುರಕ್ಷತಾ ಕಾರ್ಯತಂತ್ರದ ದೃಷ್ಟಿಕೋನದಿಂದ, ಮಿತಿಮೀರಿದ ವೇಗ ಮತ್ತು ತಪ್ಪು ದಾರಿಯಲ್ಲಿ ವಾಹನ ಚಲಾಯಿಸುವುದನ್ನು ತಡೆಗಟ್ಟಲು ಕೆಲವು ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ವಿಧಾನವು ಸಮಸ್ಯೆಗಳನ್ನು ಪರಿಹರಿಸಲು ರಸ್ತೆ ಎಂಜಿನಿಯರಿಂಗ್ ಕ್ರಮಗಳ ವ್ಯಾಪ್ತಿಯನ್ನು ತೆರೆಯುತ್ತದೆ. ಅವು ಪ್ರಾಥಮಿಕವಾಗಿ ಮಾನವ ದೋಷ ಮತ್ತು ಜಾರಿ ಸಮಸ್ಯೆಗಳೆಂದು ಪರಿಗಣಿಸಲಾಗುತ್ತದೆ," ಎಂದು ತಿಳಿಸಲಾಗಿದೆ.
ಹೆಲ್ಮೆಟ್ ಧರಿಸದೇ ಸಾವನ್ನಪ್ಪಿದವರು, ಗಾಯಗೊಂಡವರೆಷ್ಟು?
ಇನ್ನೂ ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸದ ಕಾರಣ 32,877 ಚಾಲಕರು ಮತ್ತು 13,716 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಜೊತೆಗೆ ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದೇ , 8,438 ಚಾಲಕರು ಮತ್ತು 7,959 ಪ್ರಯಾಣಿಕರು ಮೃತಪಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರಪಂಚದಾದ್ಯಂತ ರಸ್ತೆಗಳಲ್ಲಿ ಸಾವನ್ನಪ್ಪಿದ 10 ಜನರಲ್ಲಿ ಒಬ್ಬರಾದರೂ ಭಾರತೀಯರಾಗಿರುತ್ತಾರೆ ಎನ್ನಲಾಗಿದೆ.
ರಸ್ತೆಯಲ್ಲಿ ಜಾಗ್ರತೆ ವಹಿಸದೇ ಹೆಚ್ಚು ಅಪಘಾತ
ರಸ್ತೆಯಲ್ಲಿ ಸುರಕ್ಷತೆ ವಹಿಸದೇ ಇರುವುದು ಒಂದು ಪ್ರಮುಖ ಸಮಸ್ಯೆಯಾಗಿದೆ. ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿವಹಿಸದೇ ಇರುವುದು ಪ್ರಪಂಚದಾದ್ಯಂತ ಸಾವು-ನೋವುಗಳಿಗೆ ಪ್ರಮುಖ ಕಾರಣವಾಗಿದೆ.
ರಸ್ತೆ ಅಪಘಾತಗಳ ವೆಚ್ಚವನ್ನು ಸಂತ್ರಸ್ತರು ಮತ್ತು ಅವರ ಕುಟುಂಬಗಳು ಮಾತ್ರವಲ್ಲದೆ ಒಟ್ಟಾರೆಯಾಗಿ ಆರ್ಥಿಕತೆಯು ಅಕಾಲಿಕ ಮರಣ, ಗಾಯಗಳು, ಅಂಗವೈಕಲ್ಯ ಮತ್ತು ಸಂಭಾವ್ಯ ಆದಾಯದ ನಷ್ಟದ ವಿಷಯದಲ್ಲಿ ಭರಿಸುತ್ತಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ