ಚೀನಾದ ಹುವಾಯಿ ಮೊಬೈಲ್​ ಬಳಕೆ ಮಾಡಬೇಡಿ; ದೇಶದ ಜನರಿಗೆ ಕರೆನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್​

ಹುವಾಯಿ ಸಂಸ್ಥೆಗಳು ಚೀನಾ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿವೆ ಎಂದು ಆರೋಪ ಮಾಡಿರುವ ಟ್ರಂಪ್​, ಹುವಾಯಿ ಮೊಬೈಲ್​ ಬಳಕೆ ಮಾಡುವುದು ಭದ್ರತಾ ದೃಷ್ಟಿಯಿಂದ ತುಂಬಾನೇ ಅಪಾಯಕಾರಿ ಎಂದಿದ್ದಾರೆ.

news18-kannada
Updated:July 15, 2020, 8:34 AM IST
ಚೀನಾದ ಹುವಾಯಿ ಮೊಬೈಲ್​ ಬಳಕೆ ಮಾಡಬೇಡಿ; ದೇಶದ ಜನರಿಗೆ ಕರೆನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್​
ಡೊನಾಲ್ಡ್​ ಟ್ರಂಪ್​
  • Share this:
ವಾಷಿಂಗ್ಟನ್ (ಜು.15)​: ಕೊರೋನಾ ವೈರಸ್​ ಅಮೆರಿಕದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಈ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಚೀನಾ ವಿರುದ್ಧ ನಿರಂತರವಾಗಿ ​ಹರಿಹಾಯುತ್ತಿದ್ದು, ಕೊರೋನಾ ಚೀನಾ ವೈರಸ್ ಎಂದು ಜರಿದಿದ್ದಾರೆ. ಈ ಮಧ್ಯೆ ಚೀನಾದ ಹುವಾಯಿ ಕಂಪೆನಿಯ ಮೊಬೈಲ್​ಗಳನ್ನು ಬಳಕೆ ಮಾಡದಂತೆ ಟ್ರಂಪ್​ ಜನರಲ್ಲಿ ಕೋರಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್​, ವಿಶ್ವಾಸಾರ್ಹವಲ್ಲದ ಚೀನೀ ತಂತ್ರಜ್ಞಾನ ಮತ್ತು ಟೆಲಿಕಾಂ ಪೂರೈಕೆದಾರ ವಸ್ತುಗಳನ್ನು ಬಳಕೆ ಮಾಡುವುದನ್ನು ನಿಲ್ಲಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲು. ನಾವು ಅನೇಕ ರಾಷ್ಟ್ರಗಳಿಗೆ ಹುವಾಯಿ ಸಂಸ್ಥೆಯ ಮೊಬೈಲ್​ಗಳನ್ನು ಬಳಕೆ ಮಾಡದಂತೆ ಕೋರಿದ್ದೇವೆ. ಭದ್ರತಾ ದೃಷ್ಟಿಯಿಂದ ಈಗಾಗಲೇ ಇಂ​ಗ್ಲೆಂಡ್​ ಹುವಾಯಿ ಮೊಬೈಲ್​ ಬಳಕೆ ಮಾಡುವುದರ ಮೇಲೆ ನಿಷೇಧ ಹೇರಿದೆ ಎಂದರು.

ಹುವಾಯಿ ಸಂಸ್ಥೆಗಳು ಚೀನಾ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿವೆ ಎಂದು ಆರೋಪ ಮಾಡಿರುವ ಟ್ರಂಪ್​, ಹುವಾಯಿ ಮೊಬೈಲ್​ ಬಳಕೆ ಮಾಡುವುದು ಭದ್ರತಾ ದೃಷ್ಟಿಯಿಂದ ತುಂಬಾನೇ ಅಪಾಯಕಾರಿ. ಈ ಸಂಸ್ಥೆ ಚೀನಾ ಸರ್ಕಾರ ಹಾಗೂ ಅಲ್ಲಿಯ ಸೇನೆಯ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಅವುಗಳ ಜೊತೆ ಮಾಹಿತಿ ಹಂಚಿಕೊಳ್ಳುತ್ತವೆ ಎಂದು ಆರೋಪಿಸಿದ್ದಾರೆ.

5ಜಿ ನೆಟ್ವರ್ಕ್​ ನೀಡಲು ಬೇಕಾಗುವ ವಸ್ತುಗಳನ್ನು ಹುವಾಯಿ ಸಂಸ್ಥೆಯಿಂದ ತರಿಸಿಕೊಳ್ಳದಂತೆ ಇಂಗ್ಲೆಂಡ್​ ಆದೇಶ ಹೊರಡಿಸಿದ್ದು, ಹುವಾಯಿಯನ್ನು ಸಂಪೂರ್ಣವಾಗಿ ಬ್ಯಾನ್​ ಮಾಡಲು ಮುಂದಾಗಿದೆ.

ಇನ್ನು, ಭಾರತದ ಬೆನ್ನಲ್ಲೀಗ ಅಮೆರಿಕಾ ಮತ್ತು ಆಸ್ಟ್ರೇಲಿಯಾ ಚೀನಿ ಆ್ಯಪ್​​ಗಳ ನಿಷೇಧಕ್ಕೆ ಚಿಂತನೆ ನಡೆಸಿವೆ ಎನ್ನಲಾಗಿದೆ. ಚೀನಾ ಮೂಲದ ಟಿಕ್​​ಟಾಕ್ ಸೇರಿದಂತೆ ಎಲ್ಲಾ ಆ್ಯಪ್​​ಗಳನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಉಭಯ ದೇಶಗಳು ಹೇಳಿಕೆ ನೀಡಿದ್ದವು. ಈ ಮೂಲಕ ಅಮೆರಿಕ ಚೀನಾ ವಿರುದ್ಧ ನಿರಂತರವಾಗಿ ಏಟು ನೀಡುತ್ತಲೇ ಇದೆ.
Published by: Rajesh Duggumane
First published: July 15, 2020, 8:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading