Tamilnadu Assembly Elections 2021| ಡಿಎಂಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಕೊಳತ್ತೂರ್ನಿಂದ ಸ್ಟಾಲಿನ್, ಚೆಪಾಕ್ನಿಂದ ಮಗ ಉದಯನಿಧಿ ಸ್ಪರ್ಧೆ
ಡಿಎಂಕೆ ಪಕ್ಷದ ಮುಖ್ಯಸ್ಥ ಸ್ಟಾಲಿನ್ ಅವರು ಕೊಳತ್ತೂರ್ ಕ್ಷೇತ್ರದಿಂದ ಸ್ಪರ್ಧಿಸಿದರೆ, ಅವರ ಮಗ ಹಾಗೂ ನಟ ಉದಯನಿಧಿ ಸ್ಟಾಲಿನ್ ಚೆಪಾಕ್ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.
ಚೆನ್ನೈ (ಮಾರ್ಚ್ 12); ಬಹು ನಿರೀಕ್ಷಿತ ತಮಿಳುನಾಡು ವಿಧಾನಸಭೆ ಚುನಾವಣೆ ಏಪ್ರಿಲ್ 6 ರಂದು ನಡೆಯಲಿದ್ದು, ಅಲ್ಲಿನ ಪ್ರಮುಖ ಪ್ರಾದೇಶಿಕ ಪಕ್ಷವಾದ ಡಿಎಂಕೆ (ದ್ರಾವಿಡ ಮುನ್ನೇಟ್ರ ಕಳಗಂ) 173 ವಿಧಾನ ಸಭಾ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಪಕ್ಷದ ಮುಖ್ಯಸ್ಥರಾದ ಎಂ.ಕೆ. ಸ್ಟಾಲಿನ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಸ್ಟಾಲಿನ್ ಅವರು ಕೊಳತ್ತೂರ್ ಕ್ಷೇತ್ರದಿಂದ ಸ್ಪರ್ಧಿಸಿದರೆ, ಅವರ ಮಗ ಹಾಗೂ ನಟ ಉದಯನಿಧಿ ಸ್ಟಾಲಿನ್ ಚೆಪಾಕ್ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.ಡಿಎಂಕೆ ಪಕ್ಷದ ಮಾಜಿ ಅಧ್ಯಕ್ಷ ದಿವಂಗತ ಕರುಣಾನಿಧಿ ಮರಣದ ನಂತರ ಅವರಿಲ್ಲದ ಮೊದಲ ಚುನಾವಣೆ ಇದಾಗಿದೆ. ಇದಲ್ಲದೆ,ಕಳೆದ 10 ವರ್ಷಗಳಿಂದ ವಿರೋಧ ಪಕ್ಷದಲ್ಲೇ ಕುಳಿತಿರುವ ಡಿಎಂಕೆ ಪಾಲಿಗೆ ಈ ಚುನಾವಣೆ ಬಹು ಮುಖ್ಯದ್ದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಈ ಕುರಿತು ಮಾತನಾಡಿರುವ ಎಂ.ಕೆ. ಸ್ಟಾಲಿನ್, "ತಮಿಳುನಾಡಿನ 234 ಕ್ಷೇತ್ರಗಳ ಪೈಕಿ 187 ಕ್ಷೇತ್ರಗಳಲ್ಲಿ ಡಿಎಂಕೆ ಸ್ಪರ್ಧೆ ಮಾಡಲಿದ್ದು, ಈ ಪೈಕಿ 173 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಉಳಿದ ಕ್ಷೇತ್ರಗಳನ್ನು ಮಿತ್ರ ಪಕ್ಷಗಳಿಗೆ ನೀಡಲಾಗಿದೆ. ಈ ಚುನಾವಣೆಯಲ್ಲಿ ಕರುಣಾನಿಧಿ ಅವರೇ ಸ್ಪರ್ಧಿಸುತ್ತಿದ್ದಾರೆ ಎಂದು ಭಾವಿಸಿ ತಮಿಳು ಜನ ಡಿಎಂಕೆ ಪಕ್ಷಕ್ಕೆ ಮತ ನೀಡಬೇಕು" ಎಂದಿದ್ದಾರೆ. ಕರುಣಾನಿಧಿ ಮೃತಪಟ್ಟ ನಂತರ 2018ರಲ್ಲಿ ಎಂ.ಕೆ. ಸ್ಟಾಲಿನ್ ಪಕ್ಷದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು.
ತಮಿಳುನಾಡಿನ ಮತ್ತೋರ್ವ ಪ್ರಮುಖ ನಾಯಕ ವೈಕೋ ನೇತೃತ್ವದ ಮಾರುಮಲಾರ್ಚಿ ದ್ರಾವಿಡ ಮುನ್ನೇಟ್ರ ಕಳಗಂ ಪಕ್ಷ(ಎಂಡಿಎಂಕೆ) ಆರು ಸ್ಥಾನಗಳನ್ನು ಪಡೆದುಕೊಂಡಿದೆ. ಇದಲ್ಲದೆ, ತಮಿಳುನಾಡಿನ ಸಣ್ಣ ಪಕ್ಷಗಳ ಎಂಟು ಮಂದಿ ಡಿಎಂಕೆ ಚಿಹ್ನೆಯ ಅಡಿಯಲ್ಲಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿಎಂಕೆ ಮಿತ್ರಪಕ್ಷವಾದ ಕಾಂಗ್ರೆಸ್ 25 ಸ್ಥಾನಗಳಿಗೆ ಸ್ಪರ್ಧಿಸಲಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮತ್ತು ಥೋಲ್ ತಿರುಮಾವಾಲವನ್ ಅವರ ವಿಡುತಲೈ ಚಿರುತೈಗಲ್ ಪಕ್ಷ(ವಿಸಿಕೆ) ತಲಾ ಆರು ಸ್ಥಾನಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಕೊಂಗುನಾಡು ಮುನ್ನೇಟಾ ಕಳಗಂ ತಲಾ ಮೂರು ಸ್ಥಾನಗಳಲ್ಲಿ ಹೋರಾಡಲಿದೆ.
ಇದಲ್ಲದೆ ಮತ್ತೊಂದು ಪ್ರಾದೇಶಿಕ ಪಕ್ಷವಾದ ಮಣಿಥೇನಿಯಾ ಮಕ್ಕಲ್ ಕಚ್ಚಿ (ಎಂಎಂಕೆ) ಎರಡು ಕ್ಷೇತ್ರಗಳನ್ನು ಪಡೆದುಕೊಂಡಿದ್ದರೆ, ಟಿಎಂಕೆ, ಫಾರ್ವರ್ಡ್ ಬ್ಲಾಕ್, ಎಟಿಪಿ ಮತ್ತು ಎಂವಿಕೆ ಪಕ್ಷಗಳು ತಲಾ ಒಂದು ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಸಫಲವಾಗಿವೆ. ಡಿಎಂಕೆ 10 ವರ್ಷಗಳಿಂದ ಅಧಿಕಾರದಿಂದ ಹೊರಗುಳಿದಿದ್ದು, 2021 ರ ವಿಧಾನಸಭಾ ಚುನಾವಣೆಯನ್ನು ಗೆಲ್ಲಲೇಬೇಕಾದ ಸ್ಪರ್ಧೆಯೆಂದು ಪರಿಗಣಿಸಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ