ನೀವು ಭಾರತೀಯರಾ? ಹಿಂದಿ ಬಾರದು ಎಂದ ಡಿಎಂಕೆ ಸಂಸದೆ ಕನಿಮೊಳಿಗೆ ಏರ್​ಪೋರ್ಟ್ ಅಧಿಕಾರಿ ಪ್ರಶ್ನೆ

ಹಿಂದಿಯಲ್ಲಿ ಮಾತನಾಡಲು ಬಂದ ಭದ್ರತಾ ಅಧಿಕಾರಿಗೆ ತಮಿಳು ಅಥವಾ ಇಂಗ್ಲೀಷ್ನಲ್ಲಿ ಮಾತನಾಡಲು ತಿಳಿಸಿದೆ. ಅದಕ್ಕೆ ನೀವು ಭಾರತೀಯಳಾ ಎಂದು ಆ ಅಧಿಕಾರಿ ಕೇಳಿದರು ಎಂದು ಡಿಎಂಕೆ ಸಂಸದೆ ಕನಿಮೊಳಿಗೆ ಆರೋಪಿಸಿದ್ದಾರೆ.

ಡಿಎಂಕೆ ಸಂಸದೆ ಕನಿಮೊಳಿ

ಡಿಎಂಕೆ ಸಂಸದೆ ಕನಿಮೊಳಿ

 • News18
 • Last Updated :
 • Share this:
  ಚೆನ್ನೈ(ಆ. 09): ಏರ್​ಪೋರ್ಟ್​​ನಲ್ಲಿ ಭದ್ರತಾ ಸಿಬ್ಬಂದಿಯಿಂದ ಹಿಂದಿ ಹೇರಿಕೆಗೆ ನಡೆದ ಯತ್ನದ ಅನುಭವವನ್ನು ಡಿಎಂಕೆ ಸಂಸದೆ ಕನಿಮೊಳಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಏರ್​ಪೋರ್ಟ್​ನಲ್ಲಿ ಮಹಿಳಾ ಅಧಿಕಾರಿಯೊಬ್ಬರು ತನ್ನೊಂದಿಗೆ ಹಿಂದಿಯಲ್ಲಿ ಸಂವಾದ ಮಾಡಲು ಬಂದಾಗ ತಾನು ಆಕೆಗೆ ತಮಿಳು ಅಥವಾ ಇಂಗ್ಲೀಷ್​ನಲ್ಲಿ ಮಾತನಾಡಲು ಹೇಳಿದೆ. ಅದಕ್ಕೆ ಆ ಅಧಿಕಾರಿ ನಾನು ಭಾರತೀಯಳಾ ಎಂದು ಪ್ರಶ್ನಿಸಿದರು ಎಂದು ಕನಿಮೊಳಿ ಹೇಳಿದ್ದಾರೆ.

  ನನಗೆ ಹಿಂದಿ ಭಾಷೆ ಗೊತ್ತಿಲ್ಲದ್ದರಿಂದ ಇಂಗ್ಲೀಷ್ ಅಥವಾ ತಮಿಳಿನಲ್ಲಿ ಮಾತನಾಡಲು ಹೇಳಿದೆ. ಹಿಂದಿ ಗೊತ್ತಿದ್ದರೆ ಮಾತ್ರ ಭಾರತೀಯಳಾಗಲು ಸಾಧ್ಯ ಎಂದು ಎಲ್ಲಿ ಹೇಳಲಾಗಿದೆ ಅಂತ ಗೊತ್ತಿಲ್ಲ ಎಂದು ಡಿಎಂಕೆ ಸಂಸದೆ ಟ್ವಿಟ್ ಮಾಡಿದ್ದಾರೆ. ತಮ್ಮ ಟ್ವೀಟ್​ಗೆ #hindiimposition (ಹಿಂದಿ ಹೇರಿಕೆ) ಹ್ಯಾಷ್ ಟ್ಯಾಗ್ ಕೂಡ ಸೇರಿಸಿದ್ದಾರೆ  ಡಿಎಂಕೆ ಸಂಸದೆಯ ಟ್ವೀಟ್​ಗೆ ಹಲವು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕನ್ನಡ ಯುವ ಹೋರಾಟಗಾರ ಅರುಣ್ ಜಾವಗಲ್ ಕೂಡ ಈ ಟ್ವೀಟ್​ಗೆ ಪ್ರತಿಕ್ರಿಯಿಸಿ, ದಶಕಗಳಿಂದಲೂ ಇರುವ ಹಿಂದಿ ಮಾನಸಿಕತೆಗೆ ಆರ್.ವಿ. ಧುಲೇಕರ್ ಹೇಳಿಕೆಯನ್ನು ಉಲ್ಲೇಖಿಸಿ ಉದಾಹರಣೆ ನೀಡಿದ್ದಾರೆ.  ಹಿಂದಿ ಹೇರಿಕೆ ವಿರುದ್ಧದ ನಿಮ್ಮ ಹೋರಾಟದಲ್ಲಿ ಕನ್ನಡಿಗರು ಜೊತೆಗಿದ್ದಾರೆ. ಹಿಂದಿಯೇತರ ಭಾರತೀಯರ ಪರವಾಗಿ ತಮಿಳುನಾಡು ಈ ಹೋರಾಟ ಮಾಡಬೇಕು ಎಂದು ರಾಜು ಹೊಸಮನಿ ಎಂಬುವವರು ಪ್ರತಿಕ್ರಿಯಿಸಿದ್ದಾರೆ.  ಕನಿಮೊಳಿ ವಿರುದ್ಧವೂ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಿಂದಿ ವಿರುದ್ಧ ಜನರನ್ನು ಎತ್ತಿಕಟ್ಟಿ ಡಿಎಂಕೆ ರಾಜಕಾರಣ ಮಾಡುತ್ತಿದೆ. ಯಾವ ಅಧಿಕಾರಿಯೂ ಭಾರತೀಯತೆಯನ್ನ ಪ್ರಶ್ನೆ ಮಾಡುವ ಮೂರ್ಖತನ ತೋರುವುದಿಲ್ಲ. ನೀವು ಸುಳ್ಳು ಸೃಷ್ಟಿಸುತ್ತಿದ್ದೀರಿ ಎಂದು ಡಿಎಂಕೆ ಸಂಸದೆಯ ಆರೋಪವನ್ನೇ ಕೆಲವರು ತಳ್ಳಿಹಾಕಿದ್ದಾರೆ.  ದ್ರಾವಿಡ ಮುನ್ನೇಟ್ರ ಕಳಗಂ ಪಕ್ಷ ದಶಕಗಳ ಹಿಂದಿನಿಂದಲೂ ಹಿಂದಿ ಹೇರಿಕೆ ವಿರೋಧಿ ಹೋರಾಟ ಹಾಗೂ ದ್ರಾವಿಡ ಹೋರಾಟಗಳಲ್ಲಿ ತೊಡಗಿಸಿಕೊಂಡು ಬಂದಿದೆ. ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯಲ್ಲಿನ ಮೂರು ಭಾಷೆಗಳ ಸೂತ್ರಕ್ಕೆ ಡಿಎಂಕೆ ಬಲವಾಗಿ ವಿರೋಧಿಸಿದೆ. ಈ ತ್ರೈಭಾಷಿಕ ಸೂತ್ರದ ಮೂಲಕ ಹಿಂದಿ ಹೇರಿಕೆ ಮಾಡಲಾಗುತ್ತದೆ ಎಂಬುದು ಅದರ ಆರೋಪ. ಇದರ ಬೆನ್ನಲ್ಲೇ ಎಐಎಡಿಎಂಕೆ ಸರ್ಕಾರ ಕೂಡ ಈ ತ್ರಿಭಾಷಾ ಸೂತ್ರವನ್ನು ವಿರೋಧಿಸಿದ್ದು, ತಮಿಳುನಾಡಿನಲ್ಲಿ ಇದರ ಜಾರಿ ಮಾಡುವುದಿಲ್ಲ ಎಂದು ಹೇಳಿದೆ.
  Published by:Vijayasarthy SN
  First published: