ಗೋರಖ್ಪುರ (ಉತ್ತರಪ್ರದೇಶ, ಮಾ. 4): ಅಂದಾಜು ಎಂಟು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗುತ್ತಿರುವ ಇಲ್ಲಿನ ಹಿಂದುಸ್ಥಾನ್ ಉರ್ವರಕ್ ರಸಾಯನ ನಿಯಮಿತವು (ಎಚ್.ಯು.ಆರ್.ಎಲ್.) ಜುಲೈ ತಿಂಗಳಲ್ಲಿ ಯೂರಿಯಾ ಉತ್ಪಾದನೆ ಆರಂಭಿಸಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಕಾರ್ಖಾನೆಗೆ ಭೇಟಿ ನೀಡಿ ಪುನಶ್ಚೇತನ ಕಾಮಗಾರಿ ಪ್ರಗತಿ ಪರಿಶಿಲಿಸಿದ ನಂತರ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸದಾನಂದಗೌಡ ಅವರು, ಶೇಕಡಾ 98ರಷ್ಟು ಕಾರ್ಖಾನೆ ಕಾಮಗಾರಿ ಮುಗಿದಿದ್ದು, ಜುಲೈ ಒಳಗೆ ಬಾಕಿ ಕೆಲಸ ಪೂರೈಸಿ ಕಾರ್ಖಾನೆ ಮರು ಆರಂಭಿಸಲಾಗುವುದು ಎಂದರು.
ವಾರ್ಷಿಕ 12.7 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಉತ್ಪಾದನೆ ಸಾಮರ್ಥ್ಯದ ಈ ಕಾರ್ಖಾನೆ ಪುನರಾರಂಭದಿಂದ ಪೂರ್ವಾಂಚಲ ಭಾಗದ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ಪೂರೈಕೆಗೆ ಅನುಕೂಲವಾಗಲಿದೆ. ಸುಮಾರು 1,500 ಯುವಕ, ಯುವತಿಯರಿಗೆ ನೇರ ಉದ್ಯೋಗ ದೊರಯಲಿದೆ. ಹಾಗೆಯೇ ಈ ಭಾಗದ ಆರ್ಥಿಕ ಚಟುವಟಿಕೆ ಚುರುಕುಗೊಂಡು ದೊಡ್ಡ ಪ್ರಮಾಣದಲ್ಲಿ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸದಾನಂದಗೌಡ ವಿವರಿಸಿದರು.
ಭಾರತಕ್ಕೆ ಪ್ರತಿವರ್ಷ ಸುಮಾರು 320ರಿಂದ 330 ಲಕ್ಷ ಯೂರಿಯಾ ಬೇಕು. ಈ ಪೈಕಿ 80ರಿಂದ 90 ಲಕ್ಷ ಟನ್ ಯೂರಿಯಾ ಆಮದು ಮಾಡಿಕೊಳ್ಳಲಾಗುತ್ತಿದೆ. ದಶಕಗಳಿಂದ ಸ್ಥಗಿತಗೊಂಡಿದ್ದ ಗೋರಖ್ಪುರ, ರಾಮಗುಂಡಂ, ಸಿಂಗ್ರಿ, ಬರೂನಿ ಮತ್ತು ತಾಲ್ಚೇರ್ ರಸಗೊಬ್ಬರ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಲು 2016ರಲ್ಲಿ ಕ್ರಮ ಕೈಗೊಳ್ಳಲಾಯಿತು. ರಾಮಗುಂಡಂ ಘಟಕದ ಟ್ರಯಲ್ ರನ್ ಈಗಾಗಲೇ ಆರಂಭವಾಗಿದೆ. ಜುಲೈನಲ್ಲಿ ಎಚ್.ಯು.ಆರ್.ಎಲ್, 2021ರ ಡಿಸೆಂಬರಿನಲ್ಲಿ ಸಿಂಗ್ರಿ ಮತ್ತು ಬರೂನಿ ಘಟಕಗಳು ಕಾರ್ಯಾರಂಭ ಮಾಡಲಿವೆ. ಪುನಶ್ಚೇತನಗೊಳಿಸುತ್ತಿರುವ ಈ ಎಲ್ಲ ಘಟಕಗಳ ಉತ್ಪಾದನಾ ಸಾಮರ್ಥ್ಯ ತಲಾ 12.7 ಲಕ್ಷ ಟನ್ ಆಗಿದೆ. ಹಾಗೆಯೇ ತಮ್ಮ ಇಲಾಖೆಯು ಗೋರಖ್ಪುರದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿಸಲಿದೆ. ಇದಕ್ಕಾಗಿ ಉತ್ತರ ಪ್ರದೇಶ ಸರ್ಕಾರವು ಈಗಾಗಲೇ 52 ಎಕರೆ ಜಾಗ ಒದಗಿಸಿದೆ. ಮುಂದಿನ ತಿಂಗಳ ಒಳಗಾಗಿ ವಿಸ್ತೃತ ಯೋಜನಾ ವರದಿ ಕಳುಹಿಸುವಂತೆ ತಿಳಿಸಲಾಗಿದೆ ಎಂದು ಸದಾನಂದಗೌಡ ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಎಲ್ಲಾ ಅಡಚಣೆಗಳ ಮಧ್ಯೆಯೂ ರಸಗೊಬ್ಬರ ಉತ್ಪಾದನೆ, ಸಾಗಣೆ ಹಾಗೂ ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಯಿತು. ಬಹುತೇಕ ವಲಯಗಳು ಹಿಂಜರಿತ ಅನುಭವಿಸಿದವು. ಆದರೆ ರಸಗೊಬ್ಬರ ಕ್ಷೇತ್ರ ಮಾತ್ರ ಧನಾತ್ಮಕ ಪ್ರಗತಿ ಸಾಧಿಸಿತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಯೂರಿಯಾ ಶೇಕಡಾ 16ರಷ್ಟು ಹಾಗೂ ಸಂಯುಕ್ತ ಗೊಬ್ಬರ ಶೇಕಡಾ 40ರಷ್ಟು ಹೆಚ್ಚು ಮಾರಾಟವಾಯಿತು ಎಂದು ವಿವರಿಸಿದರು.
ಇದನ್ನು ಓದಿ: Metro Man Sreedharan | ಮೆಟ್ರೋಮ್ಯಾನ್ ಶ್ರೀಧರನ್ ಕೇರಳ ಬಿಜೆಪಿ ಸಿಎಂ ಅಭ್ಯರ್ಥಿಯಲ್ಲ; ಗೊಂದಲದ ಹೇಳಿಕೆ ನೀಡಿದ ಕೇಂದ್ರ ಸಚಿವ
ರಸಗೊಬ್ಬರ ಸಬ್ಸಿಡಿಯನ್ನು ರೈತರಿಗೆ ಉತ್ಪಾದಕರ ಮೂಲಕ ನೀಡಲಾಗುತ್ತಿತ್ತು. ಇದರ ಬದಲಿಗೆ ಇನ್ನುಮುಂದೆ ರಸಗೊಬ್ಬರ ಖರೀದಿಸುವ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು. ಈ ಬಗ್ಗೆ ಇಲಾಖೆಯು ತಾಂತ್ರಿಕ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಸದಾನಂದಗೌಡ ಪ್ರಕಟಿಸಿದರು.
ಯೋಗಿ ಆದಿತ್ಯನಾಥ ಪೂರ್ವನಿಗದಿಯಂತೆ ಕಾರ್ಖಾನೆ ಪುನಶ್ಚೇತನ ಕಾಮಗಾರಿಯನ್ನು ಪೂರೈಸುತ್ತಿರುವುದಕ್ಕೆ ಹಾಗೂ ಉತ್ತರ ಪ್ರದೇಶಕ್ಕೆ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಂಡಿದ್ದಕ್ಕಾಗಿ ಸಚಿವ ಸದಾನಂದಗೌಡ ಅವರಿಗೆ ಧನ್ಯವಾದ ಅರ್ಪಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ