ಕನ್ನೌಜ್​ನಲ್ಲಿ ಡಿಂಪಲ್ ಫೈಟ್; ಕಳೆದ 30 ವರ್ಷದಲ್ಲಿ ಅವಿರೋಧವಾಗಿ ಸಂಸದೆಯಾದ ಏಕೈಕ ಮಹಿಳೆ ಡಿಂಪಲ್ ಯಾದವ್

2012ರ ಕನ್ನೌಜ್ ಉಪಚುನಾವಣೆಯಲ್ಲಿ ಡಿಂಪಲ್ ಯಾದವ್ ಅವರಿಗೆ ಎದುರಾಗಿ ಯಾವ ಸ್ಪರ್ಧಿಗಳೂ ಇರಲಿಲ್ಲ. ಹೀಗಾಗಿ, ಅವಿರೋಧವಾಗಿ ಚುನಾಯಿತರಾಗಿದ್ದರು.

Vijayasarthy SN | news18
Updated:April 29, 2019, 10:34 PM IST
ಕನ್ನೌಜ್​ನಲ್ಲಿ ಡಿಂಪಲ್ ಫೈಟ್; ಕಳೆದ 30 ವರ್ಷದಲ್ಲಿ ಅವಿರೋಧವಾಗಿ ಸಂಸದೆಯಾದ ಏಕೈಕ ಮಹಿಳೆ ಡಿಂಪಲ್ ಯಾದವ್
ಡಿಂಪಲ್ ಯಾದವ್
  • News18
  • Last Updated: April 29, 2019, 10:34 PM IST
  • Share this:
ನವದೆಹಲಿ(ಏ. 29): ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರು ಕನ್ನೌಜ್ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಭಾರಿಸಲು ಸಜ್ಜಾಗಿದ್ದಾರೆ. ಕ್ಷೇತ್ರದ ಮತದಾರರು ತಮ್ಮ ತೀರ್ಪು ಬರೆದಿದ್ದಾಗಿದೆ. ಮೂರು ಬಾರಿ ಚುನಾವಣೆ ಎದುರಿಸಿರುವ ಡಿಂಪಲ್ ಯಾದವ್ 2 ಬಾರಿ ಗೆದ್ದು ಒಂದು ಬಾರಿ ಸೋತಿದ್ದಾರೆ. ಆದರೆ, ಲೋಕಸಭಾ ಕ್ಷೇತ್ರವೊಂದರಲ್ಲಿ ಅವಿರೋಧವಾಗಿ ಚುನಾಯಿತರಾದ ಅಪರೂಪದ ಸಂಸದರಲ್ಲಿ ಡಿಂಪಲ್ ಅವರಿದ್ದಾರೆ. ಕಳೆದ 30 ವರ್ಷದಲ್ಲಿ ಅವಿರೋಧವಾಗಿ ಆಯ್ಕೆಯಾದ ಏಕೈಕ ಸಂಸದರೆಂಬ ದಾಖಲೆ ಅವರದ್ದಾಗಿದೆ. ಭಾರತದ ಚುನಾವಣಾ ಇತಿಹಾಸದಲ್ಲಿ ಅವಿರೋಧವಾಗಿ ಸಂಸತ್ ಪ್ರವೇಶಿಸಿ 44ನೇ ವ್ಯಕ್ತಿ ಡಿಂಪಲ್ ಆಗಿದ್ದಾರೆ.

ಇದನ್ನೂ ಓದಿ: ಮೋದಿಗೆ ಮಣ್ಣಿನ ರಸಗುಲ್ಲ ಕೊಡಿ ಎಂದ ಮಮತಾ; ಮಹಾತ್ಮರ ನಾಡಿನ ಮಣ್ಣು ತನಗೆ ಪ್ರಸಾದ ಎಂದ ಮೋದಿ

ಅವಿರೋಧವಾಗಿ ಚುನಾಯಿತರಾದ ಕಥೆ…

ಸಮಾಜವಾದಿ ಪಕ್ಷದ ದಿಗ್ಗಜ ಮುಲಾಯಂ ಸಿಂಗ್ ಯಾದವ್ ಅವರ ಸೊಸೆಯಾಗಿ ಡಿಂಪಲ್ ಯಾದವ್ ಅವರ ರಾಜಕೀಯ ಪ್ರವೇಶ ನಿರಾಯಾಸವಾಗಿ ಆಗಿತ್ತು. ಆದರೆ, ಡಿಂಪಲ್ ಅವರು ಎದುರಿಸಿದ ಮೊದಲ ಚುನಾವಣೆ ಪ್ರಥಮ ಚುಂಬನೇ ದಂತಭಗ್ನಂ ಎಂಬಂತಾಗಿತ್ತು. 2009ರಲ್ಲಿ ಅಖಿಲೇಶ್ ಅವರಿಂದ ತೆರವಾದ ಫಿರೋಜಾಬಾದ್ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್​ನ ರಾಜ್ ಬಬ್ಬರ್ ಅವರ ಕೈಲಿ ಡಿಂಪಲ್ ಯಾದವ್ ಭಾರೀ ಅಂತರದಿಂದ ಸೋಲುಂಡರು.

ಇದನ್ನೂ ಓದಿ: ಬೆದರಿಕೆಗೆ ಹೊಸ ತಂತ್ರ; ಇವಿಎಂ ಬಟನ್​ಗೆ ಸೆಂಟು; ವೋಟ್ ಹಾಕಿ ಬಂದವರ ಬೆರಳ ವಾಸನೆ ಪರೀಕ್ಷಿಸುವ ಟಿಎಂಸಿ ಕಾರ್ಯಕರ್ತರು

ಆದರೆ, 2012ರಲ್ಲಿ ಅಖಿಲೇಶ್ ಯಾದವ್ ಸಿಎಂ ಆದಾಗ ತೆರವಾದ ಕನ್ನೌಜ್ ಕ್ಷೇತ್ರದ ಉಪಚುನಾವಣೆಯಲ್ಲಿ ಡಿಂಪಲ್ ಯಾದವ್ ಸ್ಪರ್ಧಿಸಿದರು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ಆಗ ನಾಮಪತ್ರವನ್ನೇ ಸಲ್ಲಿಸಲಿಲ್ಲ. ತನ್ನ ಅಭ್ಯರ್ಥಿ ಕ್ಷೇತ್ರಕ್ಕೆ ಬರುವುದು ತಡವಾದ್ದರಿಂದ ನಾಮಪತ್ರ ಸಲ್ಲಿಸಲಾಗಲಿಲ್ಲ ಎಂದು ಬಿಜೆಪಿ ಸ್ಪಷ್ಟನೆ ನೀಡಿತು. ಆಗ ಕಣದಲ್ಲಿ ಉಳಿದದ್ದು ಎಸ್​ಪಿ ಅಭ್ಯರ್ಥಿ ಡಿಂಪಲ್ ಯಾದವ್ ಹಾಗೂ ಸಂಯುಕ್ತ ಸಮಾಜವಾದಿ ದಳದ ದಶರಥ್ ಸಿಂಗ್ ಶಂಕವಾರ್ ಮತ್ತು ಪಕ್ಷೇತರ ಅಭ್ಯರ್ಥಿ ಸಂಜು ಕಟಿಯಾರ್ ಮಾತ್ರವೇ. ದಶರಥ್ ಮತ್ತು ಸಂಜು ಕಟಿಯಾರ್ ಇಬ್ಬರೂ ತಮ್ಮ ನಾಮಪತ್ರ ವಾಪಸ್ ಪಡೆದರು. ಇದರೊಂದಿಗೆ ಕಣದಲ್ಲಿ ಡಿಂಪಲ್ ಮಾತ್ರ ಉಳಿಯುವಂತಾಯಿತು. ಹೀಗಾಗಿ, ಡಿಂಪಲ್ ಯಾದವ್ ಅವಿರೋಧವಾಗಿ ಕನ್ನೌಜ್ ಕ್ಷೇತ್ರದಿಂದ ಸಂಸದೆಯಾಗಿ ಚುನಾಯಿತರಾದರು.

2019ರಲ್ಲಿ ಪರಿಸ್ಥಿತಿಯೇ ಬೇರೆ: ಇದಾದ ನಂತರ ಡಿಂಪಲ್ ಯಾದವ್ ಅವರು ಮುಲಾಯಂ ಸೊಸೆ ಹಾಗೂ ಅಖಿಲೇಶ್ ಪತ್ನಿ ಎಂಬ ಇಮೇಜ್​ಗೆ ಹೊರತಾಗಿ ತಮ್ಮದೇ ರಾಜಕೀಯ ಅಸ್ತಿತ್ವ ಬೆಳೆಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. 2014ರ ಚುನಾವಣೆಯಲ್ಲಿ ನರೇಂದ್ರ ಮೋದಿಯ ಪ್ರಬಲ ಅಲೆಯಲ್ಲೂ ಡಿಂಪಲ್ ಯಾದವ್ ಗೆಲುವು ಸಾಧಿಸಿದ್ದರು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಗೆದ್ದ 5 ಕ್ಷೇತ್ರಗಳೆಲ್ಲವೂ ಯಾದವ್ ಕುಟುಂಬದವರೇ. ಆದರೆ, ಆ ವರ್ಷ ಕನ್ನೌಜ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ 5 ಕ್ಷೇತ್ರಗಳಲ್ಲೂ ಎಸ್​ಪಿ ಪಕ್ಷದ ಶಾಸಕರೇ ಇದ್ದರು. ಹೀಗಾಗಿ, ಡಿಂಪಲ್ ಯಾದವ್ ಗೆಲುವು ಸುಲಭವಾಯಿತೆಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ: ವಾರಾಣಸಿಯಲ್ಲಿ ಮೋದಿ ವಿರುದ್ಧ ದಿಢೀರ್ ಅಭ್ಯರ್ಥಿ ಬದಲಿಸಿದ ಎಸ್​ಪಿ; ಮಾಜಿ ಬಿಎಸ್ಎಫ್ ಯೋಧ ಕಣಕ್ಕೆ

ಈ ಬಾರಿ ಕನ್ನೌಜ್ ಕ್ಷೇತ್ರದಲ್ಲಿ ನಾಲ್ವರು ಬಿಜೆಪಿ ಶಾಸಕರಿದ್ಧಾರೆ. ಹೀಗಾಗಿ, ಡಿಂಪಲ್ ಯಾದವ್ ಗೆಲುವು ನಿರೀಕ್ಷಿಸಿದಷ್ಟು ಸುಲಭವಿಲ್ಲ ಎಂಬ ಅಭಿಪ್ರಾಯ ಇದೆಯಾದರೂ ಎಸ್​ಪಿ ಜೊತೆ ಬಿಎಸ್​ಪಿ ಶಕ್ತಿಯಾಗಿ ನಿಂತಿರುವುದು ಡಿಂಪಲ್ ಗೆಲುವಿನ ಹಾದಿಯನ್ನು ಸುಗಮಗೊಳಿಸಬಹುದು ಎಂಬ ಮಾತಿದೆ.

ಒಟ್ಟಿನಲ್ಲಿ ಕನ್ನೌಜ್ ಕ್ಷೇತ್ರ ಈ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಹೈಲೈಟ್​ಗಳಲ್ಲೊಂದೆನಿಸಿದೆ.

(ವರದಿ: ರಾಖಿ ಬೋಸ್)
First published:April 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ