West Bengal Election Fight: ಪಶ್ಚಿಮ ಬಂಗಾಳದಲ್ಲಿ ಉಪ ಸಮರದ ಕಾವು ಜೋರಾಗಿದೆ. ಅದರಲ್ಲೂ ಭಬಾನಿಪುರ ಕ್ಷೇತ್ರ ಕಾದ ಕೆಂಡದಂತಾಗಿದೆ. ನಿನ್ನೆ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್(Dilip Ghosh) ಅವರ ಮೇಲೆ ಟಿಎಂಸಿ(TMC) ಕಾರ್ಯಕರ್ತರು ಅಟ್ಯಾಕ್ ಮಾಡಿದ್ದಾರೆ ಅಂತ ದಿಲೀಪ್ ಘೋಷ್ ಆರೋಪಿಸಿದ್ದಾರೆ. ಇದೇ ರಣಕಣದಿಂದಲೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದಾರೆ. ನಿನ್ನೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಪ್ರಿಯಾಂಕ ತಿಬ್ರೆವಲ್ (Priyanka Tibrewal) ಪರ ಪ್ರಚಾರ ನಡೆಸಲು ದಿಲೀಪ್ ಘೋಷ್ ತೆರಳಿದ್ದರು. ಇದೇ ವೇಳೆ ಟಿಎಂಸಿ ಕಾರ್ಯಕರ್ತರು ಏಕಾಏಕಿ ಪ್ರಚಾರ ನಡೆಸುತ್ತಿದ್ದ ಸ್ಥಳಕ್ಕೆ ಎಂಟ್ರಿ ಕೊಟ್ಟು ದಾಳಿ ನಡೆಸಿದ್ದಾರೆ ಅಂತ ದಿಲೀಪ್ ಘೋಷ್ ಆರೋಪಿಸಿದ್ದಾರೆ.
ತಮ್ಮ ಮೇಲೆ ದಾಳಿ ಮಾಡಲು ಯತ್ನಿಸುವ ವಿಡಿಯೋವನ್ನ ಸ್ವತಃ ದಿಲೀಪ್ ಘೋಷ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಭಬಾನಿಪುರ ಕ್ಷೇತ್ರದ ಜೋಡುಬಾಬರ್ ಬಜಾರ್ ಪ್ರದೇಶದಲ್ಲಿ ಲಸಿಕಾ ಕಾರ್ಯ ನಡೆಯುತ್ತಿತ್ತು. ಲಸಿಕಾ ಶಿಬಿರದೊಳಗೆ ದಿಲೀಪ್ ಘೋಷ್ ಹೋಗುತ್ತಿದ್ದಂತೆ, ಟಿಎಂಸಿ ಕಾರ್ಯಕರ್ತರು ವಿರೋಧಿಸಿದ್ದಾರೆ. ದಿಲೀಪ್ ಅವರನ್ನ ಹೊರಹಾಕಿ, ರಸ್ತೆಯಲ್ಲಿ ಎಳೆದಾಡಿದ್ದಾರೆ. ದಿಲೀಪ್ ಬೆಂಗಾವಲು ಪಡೆ ಎಷ್ಟೇ ತಡೆದರು ಟಿಎಂಸಿ ಕಾರ್ಯಕರ್ತರು ದಾಳಿಗೆ ಮುಂದಾಗಿದ್ದಾರಂತೆ. ಇನ್ನೂ ಕೆಲ ಟಿಎಂಸಿ ಕಾರ್ಯಕರ್ತರು 'ಜೈ ಬಾಂಗ್ಲಾ' ಎಂದು ಘೋಷಣೆ ಕೂಗುತ್ತಿದ್ದರು ಅಂತ ದಿಲೀಪ್ ಆರೋಪಿಸಿದ್ದಾರೆ. ಕೊನೆಗೆ ಪರಿಸ್ಥಿತಿ ತಿಳಿ ಗೊಳಿಸಲು ಬಾಡಿಗಾರ್ಡ್ ಗಳು ಗನ್ ತೋರಿಸಿ ಗುಂಪನ್ನು ಚದುರಿಸಿದ್ದಾರೆ.
ದಾಳಿಗೆ ಕಾರಣ ಟಿಎಂಸಿ?
ಟಿಎಂಸಿ ಬೆಂಬಲಿಗರ ಪ್ರಚೋದನೆಯಿಂದಲೇ ಈ ದಾಳಿ ನಡೆದಿದೆ. ಘಟನೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತನೊಬ್ಬನಿಗೆ ಗಾಯಗಳಾಗಿವೆ. ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಾವು ಈ ದಾಳಿಯ ವಿಷಯವನ್ನ ಚುನಾವಣಾ ಆಯೋಗದ ಗಮನಕ್ಕೆ ತರುತ್ತೇವೆ. ಯಾವ ರೀತಿಯಲ್ಲಿ ಇಲ್ಲಿ ಚುನಾವಣೆ ನಡೆಯುತ್ತಿದೆ? ಎಂದು ದಿಲೀಪ್ ಘೋಷ್ ಕಿಡಿಕಾರಿದ್ದಾರೆ. ಈ ಘಟನೆ ಬಳಿಕ ಚುನಾವಣಾ ಆಯೋಗ ರಾಜ್ಯ ಸರ್ಕಾರದಿಂದ ಈ ಬಗ್ಗೆ ವರದಿ ಕೇಳಿದೆ.
ಇದನ್ನೂ ಓದಿ: Kolkata: ಭಬಾನಿಪುರ ಉಪಚುನಾವಣೆ; ಮಮತಾ ಬ್ಯಾನರ್ಜಿ ಸೇರಿ ಎಲ್ಲಾ ಅಭ್ಯರ್ಥಿಗಳು ವಕೀಲರೆ...!
ಈ ಹಿಂದೆಯೂ ಇದೆ ರೀತಿ ಘಟನೆಗಳು ಭಬಾನಿಪುರ ಕ್ಷೇತ್ರದಲ್ಲಿ ನಡೆದಿವೆ. ಬಿಜೆಪಿ ಸಂಸದ ಅರ್ಜುನ್ ಸಿಂಗ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ಪರ ಪ್ರಚಾರ ಮಾಡುತ್ತಿದ್ದಾಗಲೂ
ಟಿಎಂಸಿ ಕಾರ್ಯಕರ್ತರು ಇದೆ ರೀತಿ ನಡೆದುಕೊಂಡಿದ್ದಾರೆ.
'ಗೋ ಬ್ಯಾಕ್' ಘೋಷಣೆಗಳನ್ನು ಕೂಗಿ, ಅಲ್ಲಿಂದ ಹೊರ ಹೋಗುವಂತೆ ಬೆದರಿಕೆ ಸಹ ಹಾಕಿದ್ದರು ಅಂತ ಆರೋಪ ಮಾಡಲಾಗಿತ್ತು.
ಮಮತಾಗೆ ಪ್ರಿಯಾಂಕಾ ಟಿಬ್ರೆವಾಲ್ ಪ್ರಶ್ನೆ
ಇನ್ನು ಭಬಾನಿಪುರದ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ಪ್ರತಿಕ್ರಿಯೆ ನೀಡಿದ್ದಾರೆ. "ನಿಮಗೆ ಈ ಒಂದು ಕ್ಷೇತ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ, ದೇಶವನ್ನು ಆಳುವ ಕನಸು ಕಾಣುತ್ತಿದ್ದೀರಾ. ಮೊದಲು ಸ್ವಂತ ಕ್ಷೇತ್ರದಲ್ಲಿ ಎಲ್ಲವನ್ನು ಸರಿಪಡಿಸಿ" ಎಂದು
ಮಮತಾ ಬ್ಯಾನರ್ಜಿ ಅವರನ್ನು ಪ್ರಶ್ನಿಸಿದ್ದಾರೆ.
ಸೆಪ್ಟೆಂಬರ್ 30ರಂದು ಭಬಾನಿಪುರ, ಸಂಸರ್ಗಂಜ್ ಮತ್ತು ಜಂಗೀಪುರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಬೈ ಎಲೆಕ್ಷನ್ ಮಮತಾ ಬ್ಯಾನರ್ಜಿ ಅವರಿಗೆ ಅತ್ಯಂತ ನಿರ್ಣಾಯಕವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಸ್ಪರ್ಧಿಸಿದ್ದ ಮಮತಾ ಬ್ಯಾನರ್ಜಿ, ತಮ್ಮ ಆಪ್ತರಾಗಿದ್ದ ಸುವೇಂದು ಅಧಿಕಾರಿ ವಿರುದ್ಧ ಸೋಲನುಭವಿಸಿದ್ದರು. ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ನವೆಂಬರ್ 5 ರೊಳಗೆ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸ್ಥಾನ ಗೆಲ್ಲಬೇಕು. ಹೀಗಾಗಿ ಮಮತಾ ಬ್ಯಾನರ್ಜಿ ಶತಾಯಗತಾಯ ಗೆಲುವು ಸಾಧಿಸಲು ಹರಸಾಹಸ ಪಡುತ್ತಿದ್ದಾರೆ.
(ವರದಿ - ವಾಸುದೇವ್. ಎಂ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ